ಚಾಮರಾಜನಗರ: ‘ಮೇಲ್ವರ್ಗಕ್ಕೆ ಸೇರಿದವರು ಅಡುಗೆ ಮಾಡುವಾಗ ಶಾಲೆಯ ಎಲ್ಲ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದರು. ಪರಿಶಿಷ್ಟ ಜಾತಿಯ ನಾನು ಅಡುಗೆ ಮಾಡಲು ಶುರುಮಾಡಿದಾಗ ನಮ್ಮ ಸಮುದಾಯದ ಮಕ್ಕಳ ಹೊರತಾಗಿ ಯಾರೂ ಊಟ ಮಾಡುತ್ತಿಲ್ಲ..’
–ತಾಲ್ಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಎಸ್‌ಪಿ ಬಿ.ಟಿ.ಕವಿತಾ, ಡಿಡಿಪಿಐ ರಾಮಚಂದ್ರರಾಜೇ ಅರಸ್ ನೇತೃತ್ವದ ತಂಡವು ಬುಧವಾರ ಭೇಟಿ ನೀಡಿದ ಸಂದರ್ಭ ಮುಖ್ಯ ಅಡುಗೆ ಸಿಬ್ಬಂದಿ ನಂಜಮ್ಮ ಹೀಗೆ ತಮ್ಮ ನೋವನ್ನು ತೆರೆದಿಟ್ಟರು.
‘ನಂಜಮ್ಮ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪೋಷಕರು ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ’ ಆರೋಪ ಸಂಬಂಧ ಮಾಹಿತಿ ಪಡೆಯಲು ಅಧಿಕಾರಿಗಳು ಭೇಟಿ ನೀಡಿದ್ದರು.
ಆಗ ಮಾತನಾಡಿದ ನಂಜಮ್ಮ, ‘ಪರಿಶಿಷ್ಟ ಮಹಿಳೆ ಅಡುಗೆ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಪೋಷಕರು ಮಕ್ಕಳನ್ನು ಶಾಲೆ ಬಿಡಿಸುತ್ತಿದ್ದಾರೆ. ಶಾಲೆ ಮುಚ್ಚಿದರೆ ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತೇನೆ. 24 ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಸ್ವಚ್ಛತೆ ಕೆಲಸದಿಂದ ಅಡುಗೆಯವರೆಗೂ ಎಲ್ಲ ಕೆಲಸ ಮಾಡುತ್ತಿದ್ದೇನೆ. ಅವಿವಾಹಿತೆಯಾಗಿದ್ದು ದಿಕ್ಕು ದಿಸೆ ಯಾರೂ ಇಲ್ಲ, ಕೆಲಸ ಕಿತ್ತುಕೊಳ್ಳಬೇಡಿ’ ಎಂದು ಅಧಿಕಾರಿಗಳ ಮುಂದೆ ಅಂಗಲಾಚಿದರು.
‘ಲಿಂಗಾಯತ ಸಮುದಾಯದ ಮುಖ್ಯ ಅಡುಗೆ ತಯಾರಕಿಯು ಆರು ತಿಂಗಳ ಹಿಂದೆ ಅನಾರೋಗ್ಯ ಕಾರಣದಿಂದ ಕೆಲಸ ತ್ಯಜಿಸಿದಾಗ ನನಗೆ ಜವಾಬ್ದಾರಿ ವಹಿಸಲಾಯಿತು. ನಾನು ಅಡುಗೆ ಮಾಡಲು ಶುರುಮಾಡಿದ ನಂತರ ಪರಿಶಿಷ್ಟ ಜಾತಿಗೆ ಸೇರಿದ 7 ಮಕ್ಕಳು ಮಾತ್ರ ಬಿಸಿಯೂಟ ಮಾಡುತ್ತಿದ್ದು, ಉಳಿದವರು ಮನೆಗೆ ಹೋಗಿ ಊಟ ಮಾಡಿ ಬರುತ್ತಿದ್ದಾರೆ’ ಎಂದು ಹೇಳಿದರು.
ಗ್ರಾಮಸ್ಥರ ವಾದ:
‘ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಇಬ್ಬರು ಶಿಕ್ಷಕರನ್ನು ಬದಲಾಯಿಸುವಂತೆ ಡಿಡಿಪಿಐಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಶಾಲೆ ಬಿಡಿಸುವ ತೀರ್ಮಾನಕ್ಕೆ ಬಂದೆವು’ ಎಂದು ಪೋಷಕರು ಪ್ರತಿಪಾದಿಸಿದರು.
‘ನಂಜಮ್ಮ ರುಚಿಯಾಗಿ ಬಿಸಿಯೂಟ ತಯಾರಿಸುತ್ತಿಲ್ಲ, ಶುಚಿತ್ವ ಇರುವುದಿಲ್ಲ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮುಖ್ಯ ಅಡುಗೆ ತಯಾರಕರೊಬ್ಬರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
‘ಗ್ರಾಮದಲ್ಲಿ ಎಲ್ಲ ಸಮುದಾಯಗಳು ಅನ್ಯೋನ್ಯವಾಗಿದ್ದು ಅಸ್ಪೃಶ್ಯತೆ ಆಚರಿಸುತ್ತಿಲ್ಲ. ಊರಿಗೆ ಕಳಂಕ ತರುವ ಕೆಲಸ ಮಾಡಬಾರದು’ ಎಂದು ಕೆಲವರು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಸಂಧಾನ:
‘ಮಕ್ಕಳ ಸಂಖ್ಯೆ ಕುಸಿದರೆ ಸರ್ಕಾರಿ ಶಾಲೆ ಮುಚ್ಚಬೇಕಾಗುತ್ತದೆ. ಪೋಷಕರ ದೂರಿನಂತೆ ಕರ್ತವ್ಯ ನಿರ್ಲಕ್ಷ್ಯ ಎಸಗಿರುವ ಇಬ್ಬರು ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕೂಡಲೇ ಬದಲಿ ಶಿಕ್ಷಕರನ್ನು ನಿಯೋಜಿಸಲಾಗುವುದು. ಶಾಲೆ ತೊರೆದಿರುವ ಮಕ್ಕಳನ್ನು ಮರಳಿ ಕರೆತರಲು ಗ್ರಾಮಸ್ಥರು ಸಹಕಾರ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್‌ಪಿ ಮನವಿ ಮಾಡಿದರು.
‘ವರದಿ ಸಲ್ಲಿಸಲು ಸೂಚನೆ’
ಪರಿಶಿಷ್ಟ ಜಾತಿಯ ಮಹಿಳೆ ಅಡುಗೆ ತಯಾರಿಸುತ್ತಿರುವ ಕಾರಣಕ್ಕೆ ಪೋಷಕರು ಮಕ್ಕಳನ್ನು ಶಾಲೆ ಬಿಡಿಸುತ್ತಿರುವ ಆರೋಪ ಸಂಬಂಧ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂಬ ದೂರಿನ ವಿಚಾರಣೆ ನಡೆಸಲಾಗುವುದು. ಪ್ರತಿದಿನ ಬಿಸಿಯೂಟದ ಗುಣಮಟ್ಟ ರುಚಿ ಪರಿಶೀಲಿಸಿ ವರದಿ ನೀಡುವಂತೆ ಸಿಆರ್‌ಪಿ ಬಿಆರ್‌ಸಿಗೆ ನಿರ್ದೇಶನ ನೀಡಲಾಗಿದೆ. ಮೋನಾ ರೋತ್ ಜಿಲ್ಲಾ ಪಂಚಾಯಿತಿ ಸಿಇಒ
ನಂಜಮ್ಮ ತಯಾರಿಸುವ ಬಿಸಿಯೂಟ ರುಚಿಯಾಗಿಲ್ಲ ಎಂದು ಕೆಲವು ಮಕ್ಕಳು ಸೇವಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪರಿಶಿಷ್ಟ ಮಹಿಳೆ ಎಂಬ ಕಾರಣಕ್ಕೆ ಊಟ ಮಾಡದಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು.ಬಿ.ಟಿ.ಕವಿತಾ, ಎಸ್‌ಪಿ
ಶಾಲೆ ತೊರೆದವರಲ್ಲಿ 6 ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲಾಗಿದೆ. ಪೋಷಕರ ಮನವೊಲಿಸಿ ಎಲ್ಲ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಶತಮಾನದ ಹೊಸ್ತಿಲಲ್ಲಿರುವ ಶಾಲೆಯ ಅಭಿವೃದ್ಧಿಗೆ ಅನುದಾನ ನೀಡಲಾಗುವುದು.ರಾಮಚಂದ್ರ ರಾಜೇ ಅರಸ್, ಡಿಡಿಪಿಐ
ಸಮಸ್ಯೆ ಅರಿವಿಗೆ ಬಂದರೂ ಬೇಜವಾಬ್ದಾರಿ ತೋರಿ ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಗೆ ಬೆಂಬಲ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಅಸ್ಪೃಶ್ಯತೆ ವಿರುದ್ಧ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು.ಎನ್ ನಾಗಯ್ಯ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.