ಚಾಮರಾಜನಗರ: ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ತಡೆದರೇ? ಈಗ ದಂಡದ ಮೊತ್ತ ₹ 500 ಇದೆ. ಹೆಚ್ಚುವರಿಯಾಗಿ ₹ 250 ಪಾವತಿಸಿ, ಪೊಲೀಸರೇ ನಿಮಗೆ ಹೆಲ್ಮೆಟ್ ಕೊಡುತ್ತಾರೆ. ಮತ್ತೆಂದೂ, ಹೆಲ್ಮೆಟ್ ಧರಿಸಿದೆ ಬೈಕ್ ಚಲಾಯಿಸಬೇಡಿ...
ದ್ವಿಚಕ್ರ ಸವಾರರಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಪ್ರಾಯೋಗಿಕವಾಗಿ ಒಂದಷ್ಟು ದಿನ ಸವಾರರಿಗೆ ದಂಡ ವಿಧಿಸದೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ವಿತರಿಸಲು ನಿರ್ಧರಿಸಿದೆ.
ಹೊಸ ಪ್ರಯತ್ನದ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್ ಅವರು, ‘ಸುಪ್ರೀಂ ಕೋರ್ಟ್ ತೀರ್ಪಿನಂತೆ ಜಿಲ್ಲೆಯಲ್ಲೂ ದ್ವಿಚಕ್ರ ವಾಹನಗಳ ಮುಂಬದಿ ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡವನ್ನು ವಿಧಿಸಲಾಗುತ್ತಿದೆ. ಹಾಗಿದ್ದರೂ ಹೆಲ್ಮೆಟ್ ಧರಿಸುತ್ತಿಲ್ಲ’ ಎಂದರು.
‘ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಇಲಾಖೆಯ ವತಿಯಿಂದಲೇ ಅವರಿಗೆ ಹೆಲ್ಮೆಟ್ ವಿತರಿಸಲು ನಿರ್ಧರಿಸಿದ್ದೇವೆ. ದಂಡದ ಬದಲಿಗೆ ಹೆಲ್ಮೆಟ್ ಕೊಡುತ್ತೇವೆ. ಐಎಸ್‌ಐ ಗುರುತಿನ ಹೆಲ್ಮೆಟ್ ಅನ್ನು ಇಲಾಖೆಯ ಕ್ಯಾಂಟೀನ್ ವಿಭಾಗದಿಂದ ಖರೀದಿಸಲಾಗಿದೆ. ಹೊರಗೆ ಮಾರುಕಟ್ಟೆಯಲ್ಲಿ ಇದಕ್ಕೆ ₹ 1250 ಬೆಲೆ ಇದೆ. ಜನರಿಗೆ ರಿಯಾಯಿತಿ ದರದಲ್ಲಿ ಅಂದರೆ ₹ 750ಕ್ಕೆ ನೀಡಲು ನಿರ್ಧರಿಸಿದ್ದೇವೆ. ಹೆಲ್ಮೆಟ್ ರಹಿತವಾಗಿ ಬೈಕ್ ಚಲಾಯಿಸಿದರೆ ₹ 500 ದಂಡ ಹಾಕುತ್ತೇವೆ. ಜನರು ₹ 250 ಹೆಚ್ಚುವರಿ ಕೊಟ್ಟರೆ, ದಂಡದ ಬದಲು ಹೆಲ್ಮೆಟ್ ಅನ್ನೇ ಅವರಿಗೆ ಕೊಡುತ್ತೇವೆ’ ಎಂದು ಹೇಳಿದರು.
ಕಡ್ಡಾಯ ಅಲ್ಲ:‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಈ ವ್ಯವಸ್ಥೆಯನ್ನು ಮಂಗಳವಾರದಿಂದಲೇ ಜಾರಿಗೆ ತಂದಿದ್ದೇವೆ. ಹೆಲ್ಮೆಟ್ ತೆಗೆದುಕೊಳ್ಳಬೇಕು ಎಂಬುದು ಕಡ್ಡಾಯ ಅಲ್ಲ. ಜನರು, ಹೆಲ್ಮೆಟ್ ಬೇಡ, ದಂಡಪಾವತಿಸುತ್ತೇವೆ ಎಂದರೆ, ದಂಡ ಪಡೆದು ರಸೀದಿ ನೀಡುತ್ತೇವೆ. ಸವಾರರು ಹೆಲ್ಮೆಟ್ ಧರಿಸುವಂತೆ ಮಾಡುವುದಷ್ಟೇ ನಮ್ಮ ಉದ್ದೇಶ’ ಎಂದರು.
‘ಸದ್ಯ 500 ಹೆಲ್ಮೆಟ್ ಅನ್ನು ಖರೀದಿಸಿದ್ದೇವೆ. ಇಂತಿಷ್ಟೇ ದಿನ ಮಾಡುತ್ತೇವೆ ಎಂದು ನಿಗದಿಪಡಿಸಿಲ್ಲ. ಜನರ ಪ್ರತಿಕ್ರಿಯೆ ನೋಡಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶೀಘ್ರ ಸಂಚಾರ ಠಾಣೆ: ಕೊಳ್ಳೇಗಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಹಾಗೂ ಸಂಚಾರ ಠಾಣೆ ಆರಂಭಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆನಂದ ಕುಮಾರ್, ‘ಸಂಚಾರ ಠಾಣೆ ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಕೆಲವು ಸ್ಪಷ್ಟನೆ ಕೇಳಿದ್ದಾರೆ. ಅದನ್ನು ಕೊಡುತ್ತೇವೆ. ಶೀಘ್ರದಲ್ಲಿ ಸಂಚಾರೆ ಠಾಣೆ ಆರಂಭವಾಗಲಿದೆ’ ಎಂದು ಹೇಳಿದರು.
ಡಿವೈಎಸ್‌ಪಿಗಳಾದ ಜೆ.ಮೋಹನ್, ನವೀನ್‌ಕುಮಾರ್, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಇದ್ದರು.
ಇದಕ್ಕೂ ಮುನ್ನ ಆನಂದ ಕುಮಾರ್ ಅವರು, ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ಬೈಕ್ ಜಾಥಾಗೆ ಚಾಲನೆ ನೀಡಿದರು.
3 ತಿಂಗಳಲ್ಲಿ ₹ 52.81 ಲಕ್ಷ ವಸೂಲಿ
ಸೆಪ್ಟೆಂಬರ್ ತಿಂಗಳಲ್ಲಿ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ನಂತರ ಜಿಲ್ಲೆಯಾದ್ಯಂತ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ 13,528 ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ₹ 52.81 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಸೆಪ್ಟೆಂಬರ್ 1ರಿಂದ ಕಾಯ್ದೆ ಜಾರಿಗೆ ಬಂದಿತ್ತು. ಬಹುತೇಕ ಎಲ್ಲ ನಿಯಮಗಳ ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ತಿಂಗಳ ಬಳಿಕ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ದಂಡದ ಮೊತ್ತವನ್ನು ಪರಿಷ್ಕರಿಸಿದ್ದವು.
ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 4,684 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ₹ 17.71 ಲಕ್ಷ ದಂಡವನ್ನು ವಿಧಿಸಿದ್ದರು. ಅಕ್ಟೋಬರ್‌ನಲ್ಲಿ 2,831 ಪ್ರಕರಣಗಳಿಂದ ₹ 11.23 ಲಕ್ಷ ವಸೂಲಿ ಮಾಡಿದ್ದರು.
ನವೆಂಬರ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ 6,013 ಪ್ರಕರಣಗಳು ದಾಖಲಾಗಿದ್ದು, ₹ 23.85 ಲಕ್ಷ ದಂಡ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.