ADVERTISEMENT

ಗುಂಡ್ಲುಪೇಟೆ: ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ, ಜನರು ಹೈರಾಣ

ಮಲ್ಲೇಶ ಎಂ.
Published 13 ಫೆಬ್ರುವರಿ 2024, 7:31 IST
Last Updated 13 ಫೆಬ್ರುವರಿ 2024, 7:31 IST
ಹಂಗಳದ ಬ್ಯಾಂಕ್‌ನಲ್ಲಿ ವ್ಯವಹಾರಕ್ಕಾಗಿ ಬಂದಿರುವ ಗ್ರಾಹಕರು
ಹಂಗಳದ ಬ್ಯಾಂಕ್‌ನಲ್ಲಿ ವ್ಯವಹಾರಕ್ಕಾಗಿ ಬಂದಿರುವ ಗ್ರಾಹಕರು   

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ (ಕಾವೇರಿ ಗ್ರಾಮೀಣ ಬ್ಯಾಂಕ್‌) ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

‘ಇಲ್ಲಿ ಮೂವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಒಬ್ಬರು ಡಿ–ಗ್ರೂಪ್‌ ಸಿಬ್ಬಂದಿ. ಇನ್ನುಳಿದವರು ವ್ಯವಸ್ಥಾಪಕ ಹಾಗೂ ನಗದು ಕೌಂಟರ್‌ ಸಿಬ್ಬಂದಿ. ಹೀಗಾಗಿ ತ್ವರಿತವಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ಬ್ಯಾಂಕ್‌ ವ್ಯವಹಾರಕ್ಕೆ ದಿನಗಟ್ಟಲೆ ಕಾಯಬೇಕಾಗಿದೆ’ ಎಂದು ಗ್ರಾಹಕರು ದೂರಿದ್ದಾರೆ.  

ಹೋಬಳಿ ಕೇಂದ್ರದಲ್ಲಿ ಬ್ಯಾಂಕ್ ಇರುವುದರಿಂದ ಸುತ್ತಮುತ್ತಲಿನ  ಹಿರಿಯ ನಾಗರೀಕರು, ರೈತರು ಮತ್ತು ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಈ ಬ್ಯಾಂಕಿನ ಖಾತೆದಾರರಾಗಿದ್ದಾರೆ.

ADVERTISEMENT

ಪ್ರತಿದಿನ ಹತ್ತಾರು ಹಿರಿಯ ನಾಗರಿಕರು ವೃದ್ಧಾಪ್ಯ ವೇತನ, ಕೃಷಿ ಇಲಾಖೆ ವತಿಯಿಂದ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಪಡೆಯಲು ಈ ಬ್ಯಾಂಕಿನೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದಾರೆ.

ಸಿಬ್ಬಂದಿ ಇಲ್ಲದೆ ಕೆಲಸ ವಿಳಂಬವಾಗುವುದು ಒಂದೆಡೆಯಾದರೆ, ಸಾಫ್ಟ್‌ವೇರ್‌ ಸಮಸ್ಯೆ, ನೆಟ್‌ವರ್ಕ್‌ ಸಮಸ್ಯೆಗಳ ಕಾರಣಕ್ಕೆ ಎಲ್ಲ ದಿನಗಳಲ್ಲಿ ವ್ಯವಹಾರ ನಡೆಸುವುದಕ್ಕೂ ಆಗುವುದಿಲ್ಲ.

‘ಗ್ರಾಮೀಣ ಜನರು ಮತ್ತು ಅವಿದ್ಯಾವಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬ್ಯಾಂಕಿನ ಯೋಜನೆ, ಖಾತೆಯಲ್ಲಿರುವ ಹಣ ಬಗ್ಗೆ ಕೇಳಿದರೆ ಸೌಜನ್ಯವಾಗಿ ಸ್ಪಂದಿಸದೆ  ಸಿಡಿಮಿಡಿಗೊಳ್ಳುತ್ತಾರೆ’ ಎಂದು ಮೇಲುಕಾಮನಹಳ್ಳಿಯ ನಾಗರಾಜು ತಿಳಿಸಿದರು.

‘ಬ್ಯಾಂಕ್‌ಗೆ ಅಗತ್ಯವಿರುವ ಸಿಬ್ಬಂದಿ ನೇಮಿಸಲು ಬ್ಯಾಂಕ್‌ ಅಧಿಕಾರಿಗಳು ಕ್ರಮ ವಹಿಸಬೇಕು. ಜನರ ಪರದಾಟ ತಪ್ಪಿಸಲು ತಾಲ್ಲೂಕು ಆಡಳಿತವೂ ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಲಾಗುವುದು’ ಎಂದು ಸ್ಥಳೀಯ ರೈತ ಮುಖಂಡರು ಎಚ್ಚರಿಸಿದರು. 

‘ದೂರದ ಗ್ರಾಮದಿಂದ ಬ್ಯಾಂಕಿನಲ್ಲಿ ಹಣ ಪಡೆಯುದಕ್ಕೆ ಬರುತ್ತೇವೆ. ಸಿಬ್ಬಂದಿ ಕೊರತೆ ನೆಪ ಹೇಳಿ ಕಾಯಿಸುತ್ತಾರೆ. ಇದರಿಂದಾಗಿ ಮಧ್ಯಾಹ್ನ ಊಟ ಬಿಟ್ಟು ಕಾಯಬೇಕಿದೆ. ಸಕಾಲದಲ್ಲಿ ಕೆಲಸವಾಗದಿದ್ದರೆ ಮನೆಗೆ ಹೋಗಲು ಬಸ್ ಇರುವುದಿಲ್ಲ’ ಎಂದು ಮಂಗಲ ಭಾಗದ ಬುಡಕಟ್ಟು ಮಹಿಳೆಯರು ‘ಪ್ರಜಾವಾಣಿ’ಗೆ ಅವಲತ್ತುಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ರಮೇಶ್‌, ‘ಹಂಗಳದ ಬ್ಯಾಂಕ್‌ ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್‌ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು. 

ಒಟ್ಟು ಮೂವರು ಸಿಬ್ಬಂದಿ ಬ್ಯಾಂಕ್‌ ವಹಿವಾಟಿಗೆ ಕಾಯಬೇಕು ಗ್ರಾಮೀಣ ಭಾಗದ ಜನರೇ ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.