ADVERTISEMENT

ಜನರಿಂದ ದೂರುಗಳ ಸುರಿಮಳೆ

ಜಿಲ್ಲಾಡಳಿತದಿಂದ ಪೋನ್‌ ಇನ್‌ ಕಾರ್ಯಕ್ರಮ, ಒಂದು ಗಂಟೆಯಲ್ಲಿ 29 ಕರೆಗಳು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 14:55 IST
Last Updated 17 ಆಗಸ್ಟ್ 2019, 14:55 IST
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನೇತೃತ್ವದಲ್ಲಿ ಫೋನ್‌ ಇನ್‌ ಕಾರ್ಯಕ್ರಮ ನಡೆಯಿತು
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನೇತೃತ್ವದಲ್ಲಿ ಫೋನ್‌ ಇನ್‌ ಕಾರ್ಯಕ್ರಮ ನಡೆಯಿತು   

ಚಾಮರಾಜನಗರ: ಜನರ ಕುಂದುಕೊರತೆಗಳನ್ನು ಆಲಿಸಲು ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದೂರುಗಳ ಸುರಿಮಳೆಯೇ ಆಯಿತು. ಒಂದು ಗಂಟೆಯ ಅವಧಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 29 ಮಂದಿ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು.

ಜನರು ನೀಡಿದ ದೂರುಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವ ಭರವಸೆ ನೀಡಿದರು.

ಮಾಹಿತಿ ನೀಡುತ್ತಿಲ್ಲ: ಕೊಳ್ಳೇಗಾಲದಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಸೆಸ್ಕ್‌ ವಿರುದ್ಧ ದೂರು ನೀಡಿದರು. ಸೆಸ್ಕ್‌ ನಡೆಸುವ ಜನಸಂಪರ್ಕ ಸಭೆಯ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿಲ್ಲ. ಅಧಿಕ ಭದ್ರತಾ ಠೇವಣಿ ಸಂಗ್ರಹಿಸುತ್ತಿರುವ ಬಗ್ಗೆ ಮನವರಿಕೆ ಮಾಡುತ್ತಿಲ್ಲ. ಜನಸಂಪರ್ಕ ಸಭೆಯಲ್ಲಿ ಬಂದ ದೂರುಗಳನ್ನು ಬಗೆಹರಿಸುತ್ತಿರುವ ಬಗ್ಗೆ ವಿವರಗಳನ್ನು ಅಧಿಕಾರಿಗಳು ಕೊಡುತ್ತಿಲ್ಲ ಎಂದು ದೂರಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸರಿಯಾದ ವಿಧಾನವನ್ನು ಪಾಲಿಸಲು ಸೆಸ್ಕ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದರು.

ಚಾಮರಾಜನಗರದಿಂದ ಕರೆ ಮಾಡಿದ ಸ್ಥಳೀಯರೊಬ್ಬರು, ‘10ನೇ ವಾರ್ಡ್ ಕರಿನಂಜನಪುರದಲ್ಲಿ ಮೂಲ ಸೌಕರ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ರಸ್ತೆ, ಕುಡಿಯುವ ನೀರು ಸೌಲಭ್ಯಕ್ಕೆ ಈ ಹಿಂದೆಯೂ ಮನವಿ ಮಾಡಲಾಗಿದೆ’ ಎಂಬುದನ್ನು ಗಮನಕ್ಕೆ ತಂದರು. ಕೂಡಲೇ ಸಭೆಯಲ್ಲಿದ್ದ ನಗರಸಭೆ ಆಯುಕ್ತ ರಾಜಣ್ಣ ಅವರಿಗೆ ತಕ್ಷಣವೇ ಈ ಕುರಿತು ಕ್ರಮ ವಹಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಂತೇಮರಹಳ್ಳಿಯಿಂದ ಕರೆ ಮಾಡಿದ ಸ್ಥಳೀಯರೊಬ್ಬರು, ‘ಗ್ರಾಮಠಾಣೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ’ ಎಂದು ದೂರು ನೀಡಿದರು. ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಜಿಲ್ಲಾಧಿಕಾರಿ ಅವರು ನೀಡಿದರು.

ಆಹಾರ ವಿತರಣೆ ಆಗುತ್ತಿಲ್ಲ: ‘ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ ವಿತರಣೆ ಮಾಡುತ್ತಿಲ್ಲ’ ಎಂದು ಹನೂರು ತಾಲ್ಲೂಕಿನಪಿಜಿ ಪಾಳ್ಯ ಗ್ರಾಮಸ್ಥರೊಬ್ಬರು ದೂರಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಪರಿಶೀಲನೆ ನಡೆಸಲು ಸೂಚಿಸುತ್ತೇನೆ’ ಎಂದು ಕಾವೇರಿ ಹೇಳಿದರು.

ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ, ಕುಡಿಯುವ ನೀರು, ಕರಿಕಲ್ಲುಗಳ ಲಾರಿ ಸಂಚಾರದಿಂದ ಆಗುತ್ತಿರುವ ತೊಂದರೆ, ನಗರ ಸಂಚಾರ ಸುಧಾರಣೆ, ಒತ್ತುವರಿ ತೆರವು ಸೇರಿದಂತೆ ವಿವಿಧ ವಿಷಯಗಳ ಕುರಿತು ಜನರು ದೂರು ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

‘ಕಳಪೆ ಕಾಮಗಾರಿ ವಿರುದ್ಧ ಕ್ರಮ’

ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆಯುತ್ತಿರುವ ದೇವಸ್ಥಾನ ಕಾಮಗಾರಿಗೆ ಸಂಬಂಧಿಸಿದಂತೆ ಕರೆ ಮಾಡಿದ ಸ್ಥಳೀಯರೊಬ್ಬರು, ‘ಜಿಲ್ಲಾಧಿಕಾರಿಯವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ ಪರಿಣಾಮ ಈಗ ಉತ್ತಮ ಕೆಲಸವಾಗುತ್ತಿದೆ. ಪ್ರತಿ ತಿಂಗಳು ಇದೇ ರೀತಿಯಾಗಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ಕಾಮಗಾರಿ ನಿರ್ವಹಣೆ ಸಂಬಂಧ ನಿರಂತರ ಗಮನ ಹರಿಸಲಾಗುತ್ತದೆ. ಕಳಪೆ ಕಾಮಗಾರಿ ನಿರ್ವಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.