ADVERTISEMENT

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ತರಬೇಡಿ: ಪಿ.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 2:55 IST
Last Updated 4 ಜನವರಿ 2026, 2:55 IST
   

ಚಾಮರಾಜನಗರ: ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಪ್ರಸಿದ್ಧ ಧಾರ್ಮಿಕ ಹಾಗೂ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಭಕ್ತರು ಸಹಕಾರ ನೀಡಬೇಕು ಎಂದು ಪರಿಸರ ಹೋರಾಟಗಾರ ಪಿ.ಮಂಜುನಾಥ್‌ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆ ಗಂಭೀರ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗದಿರುವುದು ಆತಂಕಕಾರಿ ಬೆಳವಣಿಗೆ. ಪ್ಲಾಸ್ಟಿಕ್ ತ್ಯಜಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಗಂಭೀರವಾಗಿ ಚಿಂತಿಸಬೇಕು. ಅತಿಯಾದ ಪ್ಯಾಸ್ಟಿಕ್ ಬಳಕೆಯಿಂದ ಜಾನುವಾರು ಹಾಗೂ ಜಲಚರಗಳ ಜೀವಕ್ಕೂ ಕಂಟಕ ಎದುರಾಗಿದೆ ಎಂದರು.

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆಗೆ ಬರುವ ಭಕ್ತರು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ವನ್ಯಜೀವಿಗಳ ಜೀವಕ್ಕೆ ಕುತ್ತು ಉಂಟಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಪ್ಲಾಸ್ಟಿಕ್‌ ವಸ್ತುಗಳು ಮಾದಪ್ಪನ ಕ್ಷೇತ್ರ ಪ್ರವೇಶಿಸದಂತೆ ತಡೆಯಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವವರ ವಿರುದ್ಧ ದಂಡ ವಿಧಿಸಬೇಕು ಎಂದು ಪಿ.ಮಂಜುನಾಥ್ ಒತ್ತಾಯಿಸಿದರು.

ADVERTISEMENT

ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪಾದಯಾತ್ರೆಗೆ ಬರುವ ಭಕ್ತರು ಸ್ಟೀಲ್‌ ತಟ್ಟೆ, ಲೋಟಗಳನ್ನು ಜೊತೆಯಲ್ಲಿ ತರಬೇಕು. ಸಾಧ್ಯವಾಗದಿದ್ದರೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಖರೀದಿಸಿ ಬಳಸಬೇಕು ಎಂದು ಆಗ್ರಹಿಸಿದರು.

ಮಹೇಶ್ವರನ ಬೆಟ್ಟದಲ್ಲಿ ನಡೆಯುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಾದಯಾತ್ರೆಗೆ ಬರುವ ಭಕ್ತರಿಗೆ ಪ್ಲಾಸ್ಟಿಕ್ ಬಾಟೆಲ್ ನೀರು ಕೊಡುವ ಬದಲು ಅಲ್ಲಲ್ಲಿ ನೀರಿನ ಡ್ರಮ್‌ಗಳನ್ನು ಇರಿಸಿ ಪೂರೈಸಬೇಕು. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಚಿಂತಿಸಬೇಕು ಎಂದರು.

ಕೆಆರ್‌ಎಸ್‌ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಶಂಕರ್‌, ಹನೂರು ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಪರಿಸರ ಹೋರಾಟಗಾರ ಬೀರೇಶ್‌, ಪಕ್ಷದ ಮುಖಂಡರಾದ ಚಿನ್ನಸ್ವಾಮಿ, ಸೈಯದ್ ಶಫಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.