ADVERTISEMENT

ಪತ್ನಿ ಕೊಲೆ: ಕಾನ್‌ಸ್ಟೆಬಲ್‌ಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 15:37 IST
Last Updated 24 ಸೆಪ್ಟೆಂಬರ್ 2021, 15:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ವರದಕ್ಷಿಣೆಯ ಬಾಕಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮದುವೆಯಾದ 9ನೇ ದಿನಕ್ಕೆ ಪತ್ನಿಯನ್ನು ಕೊಲೆ ಮಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.

ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ವೆಂಕಟೇಶ್ ಶಿಕ್ಷೆಗೆ ಗುರಿಯಾದ ಕಾನ್‌ಸ್ಟೆಬಲ್‌.

ಘಟನೆ ವಿವರ:ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿರುವ ವೆಂಕಟೇಶ್ ಅವರು ತಾಲ್ಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮ ಎಂಬುವವರ ಮಗಳು ದಿವ್ಯಾ ಅವರನ್ನು 2017ರ ಫೆಬ್ರುವರಿ 2ರಂದು ವಿವಾಹವಾಗಿದ್ದರು. ಮದುವೆಗೂ ಮುನ್ನಾ ಹುಡುಗಿಗೆ ಮಾಂಗಲ್ಯ ಸರ, ಹುಡುಗನಿಗೆ ಚಿನ್ನದ ಉಂಗುರ, ₹2.5 ಲಕ್ಷ ನಗದು ಹಣವನ್ನು ವರದಕ್ಷಿಣೆಯಾಗಿ ಕೊಡಲು ಒಪ್ಪಂದವಾಗಿತ್ತು. ಮದುವೆಗೆ ಮೊದಲೇ ₹2 ಲಕ್ಷ ಹಣವನ್ನು ವಧುವಿನ ಮನೆಯವರು ನೀಡಿದ್ದರು. ಚಿನ್ನದ ಮಾಂಗಲ್ಯ ಸರ ಹಾಗೂ ₹50 ಸಾವಿರ ನಗದು ಬಾಕಿ ಉಳಿಸಿಕೊಂಡಿದ್ದರು.

ADVERTISEMENT

ಮದುವೆಯಾದ ಮೂರೇ ದಿನಕ್ಕೆ ಮಾಂಗಲ್ಯ ಸರ, ಉಳಿದ ಹಣ ₹50 ಸಾವಿರ ಹಣವನ್ನು ತವರಿನಿಂದ ತರುವಂತೆ ವೆಂಕಟೇಶ್‌ ಅವರು ದಿವ್ಯಾ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು. ‘ಹಣ ಹೊಂದಿಸಲು ಸ್ವಲ್ಪ ಸಮಯವನ್ನು ಕೇಳುತ್ತಿದ್ದಾರೆ’ ಎಂದು ದಿವ್ಯಾ ವೆಂಕಟೇಶ್‌ಗೆ ತಿಳಿಸಿದ್ದರು.

ಫೆ.11ರಂದು ದಿವ್ಯಾ ಅವರ ತವರು ಮನೆಗೆ ಬಂದಿದ್ದ (ಧನಗೆರೆಗೆ) ವೆಂಕಟೇಶ್‌ ಅವರು, ‘ಜಮೀನು ನೋಡಿಕೊಂಡು ಬರೋಣ’ ಎಂದು ದಿವ್ಯಾ ಅವರನ್ನು ಹೊರಗಡೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಯನ್ನು ಬಾವಿಗೆ ತಳ್ಳಿದ್ದರು. ನಂತರ ದಿವ್ಯಾ ಅವರ ತಾಯಿ ಬಳಿ ಬಂದು ‘ನಿಮ್ಮ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಹೇಳಿದ್ದರು.

ಸಾವಿತ್ರಮ್ಮ ಅವರು ತನ್ನ ಅಳಿಯನ ವಿರುದ್ಧವೇ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ವೆಂಕಟೇಶ್‌ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ವೆಂಕಟೇಶ್‌ ಅವರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಕೊಳ್ಳೇಗಾಲದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಲೋಕಪ್ಪ ಅವರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ₹45 ಸಾವಿರ ದಂಡವನ್ನೂ ವಿಧಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.