ಚಾಮರಾಜನಗರ: ಸರಕಳ್ಳತನ ಮಾಡಿದ ಆರೋಪಿಯ ಮುಖವನ್ನೇ ಹೋಲುತ್ತಿದ್ದ ಯುವಕನೊಬ್ಬನನ್ನು ವಶಕ್ಕೆ ಪಡೆದ ಇಲ್ಲಿನ ಗ್ರಾಮಾಂತರ ಪೊಲೀಸರು, ಯುವಕನಿಗೆ ಥಳಿಸಿದ ಘಟನೆ ಕಳೆದ ಶನಿವಾರದಂದು (ಸೆ.10) ನಡೆದಿದೆ.
ಅಂದು ತಡರಾತ್ರಿ ಯುವಕ ಸರ ಕದ್ದ ಆರೋಪಿ ಅಲ್ಲ ಎಂದು ಗೊತ್ತಾಗುತ್ತಲೇ ಪೊಲೀಸರು ಆತನನ್ನು ಬಿಟ್ಟಿದ್ದಾರೆ. ಕುಟುಂಬದವರು ಯಡಬೆಟ್ಟದಲ್ಲಿರುವ ಸಿಮ್ಸ್ ಬೋಧನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಯುವಕ ಮನೆಗೆ ಮರಳಿದ್ದಾರೆ.
ಥಳಿತಕ್ಕೆ ಒಳಗಾದ ಯುವಕ ನಂಜನಗೂಡಿನ ತಾಲ್ಲೂಕಿನವರಾಗಿದ್ದಾರೆ. ಮಾಡಿರುವ ತಪ್ಪು ಅರಿವಿಗೆ ಬಂದ ನಂತರ, ಗ್ರಾಮಾಂತರ ಪೊಲೀಸರು ಯುವಕನ ಮನೆಗೆ ತೆರಳಿ ಕ್ಷಮಿಸುವಂತೆ ಕೇಳಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥವಾಗುವಂತೆ ನೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರು ಪೊಲೀಸರಿಂದ ಥಳಿತ:ಸೆ.7ರಂದು ತಾಲ್ಲೂಕಿನ ಉಡಿಗಾಲದ ಬಳಿ ಮಹಿಳೆಯೊಬ್ಬರ ಸರ ಕಳ್ಳತನವಾಗಿತ್ತು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ತಾಲ್ಲೂಕಿನ ಪಣ್ಯದ ಹುಂಡಿಯಲ್ಲಿದ್ದ ಯುವಕನ ಮುಖಚರ್ಯೆ ಆರೋಪಿಯನ್ನೇ ಹೋಲುತ್ತಿದ್ದುದರಿಂದ ಆತನನ್ನು ವಶಕ್ಕೆ ಕರೆದು ಕೊಂಡು ಬಂದು, ಆರು ಮಂದಿ ಪೊಲೀಸರು ಚೆನ್ನಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಪೊಲೀಸರ ಹೊಡೆತ ತಾಳಲಾರದೆ, ಪ್ರಾಣ ಹೋಗುವ ಭಯದಿಂದ ಸರ ಕದ್ದಿಲ್ಲದಿದ್ದರೂ, ತಾನೇ ಕದ್ದಿರುವುದಾಗಿ ಒಪ್ಪಿಕೊಂಡಿದ್ದರು. ಮನೆಗೆ ಬಂದರೆ ಕೊಡುವುದಾಗಿಯೂ ಹೇಳಿದ್ದರು. ಅಷ್ಟೊತ್ತಿಗಾಗಲೇ ಯುವಕನ ಕುಟುಂಬದವರು ಪ್ರಭಾವಿ ಮುಖಂಡರಿಂದ ಪೊಲೀಸರಿಗೆ ಫೋನ್ ಮಾಡಿಸಿ, ಕಳ್ಳತನದಲ್ಲಿ ಯುವಕನ ಪಾತ್ರ ಇಲ್ಲ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದ್ದಾರೆ. ಆ ಬಳಿಕ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. ನಂತರ ಯುವಕನನ್ನು ಬಿಟ್ಟಿದ್ದಾರೆ. ಪೊಲೀಸ್ ಏಟುಗಳಿಂದ ಬಳಲಿದ್ದ ಅವರು ನಡೆದಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಿಮ್ಸ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.