ADVERTISEMENT

ಪೊನ್ನಾಚಿ | ಗ್ರಾಮಸ್ಥರಿಗಿಲ್ಲ ನರೇಗಾ ಕೆಲಸ, ಯಂತ್ರಗಳ ಸಹಾಯದಿಂದ ಕಾಮಗಾರಿ

ಜಿ.ಪ್ರದೀಪ್ ಕುಮಾರ್
Published 20 ಮೇ 2020, 20:00 IST
Last Updated 20 ಮೇ 2020, 20:00 IST
ಜೆಸಿಬಿ ಮುಂದೆ ನಿಂತಿರುವ ಗ್ರಾಮಸ್ಥರು
ಜೆಸಿಬಿ ಮುಂದೆ ನಿಂತಿರುವ ಗ್ರಾಮಸ್ಥರು   

ಮಹದೇಶ್ವರ ಬೆಟ್ಟ: ಇಲ್ಲಿಗೆ ಸಮೀಪದ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಗ್ರಾಮಸ್ಥರಿಗೆ ಕೂಲಿ ಕೊಡದೆ, ಯಂತ್ರದ ಸಹಾಯದಿಂದ ಕೆಲಸ ಮಾಡಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ಬಡ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ನರೇಗಾ ಯೋಜನೆಗೆ ಒತ್ತು ನೀಡಲಾಗುತ್ತಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಯಂತ್ರಗಳಿಂದ ಕೆಲಸ ಮಾಡಿಸಿ, ಕಾರ್ಮಿಕರಿಗೆ ದುಡ್ಡು ಸಿಗದಂತೆ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸೋಲಿಗ ಅಭಿವೃದ್ದಿ ಸಂಘದ ಜಿಲ್ಲಾ ಕಾರ್ಯದರ್ಶಿ ಮುತ್ತಯ್ಯ ಅವರು, ‘ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಜನರೆಲ್ಲರೂ ಕಷ್ಟದಲ್ಲಿ ಜೀವನ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸರ್ಕಾರದ ವತಿಯಿಂದ ಕಾಳಿಗಾಗಿ ಕೂಲಿಯನ್ನು ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ವಿತರಣೆಯಾಗುತ್ತಿರುವ ಕೆಲಸವು ಸಮರ್ಪಕವಾಗಿ ಗ್ರಾಮಸ್ಥರಿಗೆ ತಲುಪುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಯೋಜನೆಯನ್ನು ದುರ್ಬಳಕೆ ಮಾಡುತ್ತಿದ್ದು, ಫಲಾನುಭವಿಗಳಿಗೆ ದೊರೆಯಬೇಕಿದ್ದ ಸವಲತ್ತುಗಳು ಅಧಿಕಾರಿಗಳ ಪಾಲಾಗುತ್ತಿವೆ. ಬೇಲಿಯೇ ಎದ್ದು ಹೊಲ ಮೇಯುವಂತಹ ಪರಿಸ್ಥಿತಿ ಇದೆ. ಜನಸಾಮಾನ್ಯರ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಗ್ರಾಮಸ್ಥರಿಗೆ ನ್ಯಾಯಯುತವಾಗಿ ಕೆಲಸ ಸಿಗುವಂತಾಗಬೇಕು’ ಎಂದು ತಿಳಿಸಿದ್ದಾರೆ.

‘ಪೊನ್ನಾಚಿ ಪಂಚಾಯಿತಿ ವ್ಯಾಪ್ತಿಗೆ ಮರೂರು, ಅಸ್ತೂರು, ರಾಮೇಗೌಡನಹಳ್ಳಿ ಪೊನ್ನಾಚಿ ಹಾಗೂ ಇತರೆ ಉಪ ಹಳ್ಳಿಗಳು ಸೇರ್ಪಡೆಗೊಂಡಿದ್ದು, ಯಾವ ಗ್ರಾಮಸ್ಥರಿಗೂ ನರೇಗಾ ಅಡಿ ಕೆಲಸ ನೀಡದಿರುವುದು ದುರದೃಷ್ಟಕರ. ಅಲ್ಲದೆ ಇಂತಹ ಸಂದರ್ಭದಲ್ಲಿ ಗ್ರಾಮಸ್ಥರ ಬಗ್ಗೆ ಕಾಳಜಿ ವಹಿಸಬೇಕಿತ್ತು. ಕೂಲಿಯನ್ನೇ ನಂಬಿ ಜೀವನವನ್ನು ನಡೆಸುತಿದ್ದ ನಮಗೆ ಇಂದು ಕೈ ಕಟ್ಟಿ ಹಾಕಿದಂತಾಗಿದೆ. ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ಗ್ರಾಮಸ್ಥ ಮಾದೇವು ಒತ್ತಾಯಿಸಿದರು.

‘ಒಂದು ದಿನ ಅಧಿಕಾರಿಗಳು ಜೆಸಿಬಿಯಲ್ಲಿ ಕೆಲಸ ಮಾಡಿಸಿದ್ದರು. ಇದನ್ನು ಸ್ಥಳೀಯ ಗ್ರಾಮಸ್ಥರು ಪ್ರಶ್ನಿಸಿ, ಸ್ಥಳೀಯ ಪಿಡಿಒ ಹಾಗೂ ಇತರ ಅಧಿಕಾರಿಗಳೊಂದಿಗೆ ಜಗಳವನ್ನೂ ಮಾಡಿದ್ದಾರೆ. ಆ ಬಳಿಕ ನರೇಗಾ ಅಡಿ ಕೆಲಸ ನೀಡಲು ಅವರು ಒಪ್ಪಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನಿಯಮ ಉಲ್ಲಂಘಿಸಿದರೆ ಮೊಕದ್ದಮೆ: ಇಒ
ಈ ಆರೋಪವನ್ನು ನಿರಾಕರಿಸಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಎಂ.ಪ್ರಕಾಶ್‌, ‘ಇದು ಶುದ್ಧ ಸುಳ್ಳು. ಸಿಇಒ ಮತ್ತು ನಾನು ಸೋಮವಾರ ಪೊನ್ನಾಚಿ ಪಂಚಾಯಿತಿಗೆ ಭೇಟಿ ನೀಡಿದ್ದೆವು. ಬೆಳಿಗ್ಗೆಯಿಂದ ಸಂಜೆಯವರೆಗೆ ಅಲ್ಲೇ ಇದ್ದು ಕಾಮಗಾರಿಗಳನ್ನು ಪರಿಶೀಲಿಸಿದ್ದೇವೆ. ಯೋಜನೆಯಡಿ ಮಂಜೂರಾಗುವ ಕೆಲಸಗಳಿಗೆ ಯಂತ್ರಗಳನ್ನು ಬಳಸಿದರೆ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.