ADVERTISEMENT

ಆದಿವಾಸಿಗಳಿಗೆ ಕಳಪೆ ಆಹಾರ ಪೂರೈಕೆ: ಜಿಲ್ಲಾ ಸಮಿತಿಯ ಅಧಿಕಾರ ಮೊಟಕು

ಗುತ್ತಿಗೆದಾರ ಸಂಸ್ಥೆಗೆ ನೋಟಿಸ್‌

ಬಾಲಚಂದ್ರ ಎಚ್.
Published 23 ಮೇ 2025, 21:12 IST
Last Updated 23 ಮೇ 2025, 21:12 IST
ಬುಡಕಟ್ಟು ಜನರಿಗೆ ವಿತರಿಸಿರುವ ಅಡುಗೆ ಎಣ್ಣೆ
ಬುಡಕಟ್ಟು ಜನರಿಗೆ ವಿತರಿಸಿರುವ ಅಡುಗೆ ಎಣ್ಣೆ   

ಚಾಮರಾಜನಗರ: ‘ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದವರಿಗೆ ಪೌಷ್ಟಿಕ ಆಹಾರ ಪೂರೈಸಲು ಜಿಲ್ಲಾ ಸಮಿತಿಗಳಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಿ, ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆಯುತ್ತಿರುವುದರಿಂದ ಉದ್ದೇಶ ಈಡೇರುತ್ತಿಲ್ಲ’ ಎಂಬ ಆರೋಪ ಅಧಿಕಾರಿಗಳು ಹಾಗೂ ಆದಿವಾಸಿಗಳಿಂದ ಕೇಳಿ ಬಂದಿದೆ.

ಮಾರ್ಚ್‌ನಿಂದ ರಾಜ್ಯಮಟ್ಟದಲ್ಲಿ ಟೆಂಡರ್‌ ಕರೆಯಲಾಗುತ್ತಿದೆ. ಟೆಂಡರ್‌ ಪಡೆದ ಸಂಸ್ಥೆಯ ವಿರುದ್ಧ ಜಿಲ್ಲಾ ಮಟ್ಟದ ಸಮಿತಿಯು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಬುಡಕಟ್ಟು ಸಮುದಾಯಗಳಿಗೆ ಆಹಾರ ಪದಾರ್ಥ ಪೂರೈಸಲು ಹಿಂದೆ ಜಿಲ್ಲಾ ಮಟ್ಟದ ಸಮಿತಿಯಿಂದ ಟೆಂಡರ್‌ ಕರೆಯಲಾಗುತ್ತಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯು ಟೆಂಡರ್‌ ಪಡೆದ ಸಂಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿತ್ತು. ಕಳಪೆ ಆಹಾರ ಪೂರೈಸಿದರೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ಬಿಲ್‌ ತಡೆಹಿಡಿಯುವ ಅಧಿಕಾರ ಸಮಿತಿಗೆ ಇತ್ತು. ಈಗ ಈ ವ್ಯವಸ್ಥೆ ಸಂಪೂರ್ಣ ಬದಲಾಗಿದೆ.

ADVERTISEMENT

ನೋಟಿಸ್‌: ಕಳಪೆ ಆಹಾರ ಪದಾರ್ಥ ಪೂರೈಸಿದ ಆರೋಪದಲ್ಲಿ, ಕೋಲಾರ ಮೂಲದ ಆರ್‌.ಆರ್‌.ಎಂಟರ್‌ಪ್ರೈಸಸ್ ಸಂಸ್ಥೆಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್‌.ಎಸ್‌.ಬಿಂದ್ಯಾ ಅವರು ಏಪ್ರಿಲ್‌ನಿಂದ ಇಲ್ಲಿಯವರೆಗೆ ಮೂರು ನೋಟಿಸ್‌ಗಳನ್ನು ನೀಡಿದ್ದಾರೆ. ಆದರೆ, ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಆಗಿಲ್ಲ.

‘ಬಳಸಲು ಯೋಗ್ಯವಲ್ಲದ ಅಡುಗೆ ಎಣ್ಣೆ ಹಾಗೂ ಕೆಟ್ಟಿರುವ ಮೊಟ್ಟೆ ಪೂರೈಸಲಾಗಿದೆ ಎಂದು ದೂರು ಬಂದ ಬಳಿಕ, ಗೋದಾಮಿಗೆ ತೆರಳಿ ಪರಿಶೀಲಿಸಲಾಯಿತು. ಪದಾರ್ಥಗಳು ಉತ್ತಮವಾಗಿಲ್ಲ ಎಂಬುದು ಕಂಡು ಬಂದಿದ್ದರಿಂದ ನೋಟಿಸ್ ನೀಡಿ ಮೇಲಧಿಕಾರಿಗಳಿಗೆ ಪ್ರತಿ ಸಲ್ಲಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರ ಸೂಚನೆಯಂತೆ ಹಾಡಿಗಳಿಗೆ ಅಡುಗೆ ಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಎಣ್ಣೆಯ ಬಾಟಲ್‌ಗಳನ್ನು ಹಿಂಪಡೆದು, ಮುಂದಿನ ತಿಂಗಳು ಹೆಚ್ಚುವರಿ ನೀಡಲು ನಿರ್ಧರಿಸಲಾಗಿದೆ. ಸಕ್ಕರೆ ಬದಲು ಬೆಲ್ಲ ವಿತರಿಸುವಂತೆ ಟೆಂಡರ್‌ದಾರರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

8,159 ಕುಟುಂಬಗಳಿಗೆ ಪೌಷ್ಟಿಕ ಆಹಾರ: ಜಿಲ್ಲೆಯ ಯಳಂದೂರು, ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 8,159 ಕುಟುಂಬಗಳಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ 8 ಕೆ.ಜಿ ರಾಗಿ, 3 ಕೆ.ಜಿ ತೊಗರಿಬೇಳೆ, ಕಡಲೆಕಾಳು, ಕಡಲೆಬೀಜ, ಅಲಸಂದೆ, ಹುರುಳಿಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ ತಲಾ ಒಂದು ಕೆ.ಜಿ ಹಾಗೂ, 30 ಮೊಟ್ಟೆ , 2 ಲೀಟರ್ ಸೂರ್ಯಕಾಂತಿ ಎಣ್ಣೆ, ಅರ್ಧ ಕೆ.ಜಿ ನಂದಿನಿ ತುಪ್ಪ ವಿತರಿಸಲಾಗುತ್ತಿದೆ.

ಕಳಪೆ ಆಹಾರದಿಂದ ಹಾಡಿಗಳಲ್ಲಿ ವಾಂತಿ ಬೇಧಿ ಪ್ರಕರಣಗಳು ಹೆಚ್ಚಾಗಿವೆ. ಬೆಲ್ಲ ಬಳಸುವ ರೂಢಿ ಇದ್ದರೂ ಕಳಪೆ ಸಕ್ಕರೆ ವಿತರಿಸಲಾಗುತ್ತಿದೆ. ಗುತ್ತಿಗೆದಾರ ಸಂಸ್ಥೆ ವಿರುದ್ಧ ಇನ್ನು ಕ್ರಮ ಆಗಿಲ್ಲ.
– ಡಾ.ಸಿ.ಮಾದೇಗೌಡ. ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ

‘ಹೆಸರೇ ಇಲ್ಲದ ಅಡುಗೆ ಎಣ್ಣೆ’

ಬುಡಕಟ್ಟು ಸಮುದಾಯಗಳಿಗೆ ವಿತರಿಸಲಾಗಿರುವ ಅಡುಗೆ ಎಣ್ಣೆಯ ಬಾಟೆಲ್ ಮೇಲೆ ಉತ್ಪಾದಕ ಕಂಪನಿಯ ಹೆಸರೇ ಇಲ್ಲ. ಎಣ್ಣೆ ತಯಾರಿಸಲು ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿದೆಯೇ ಗುಣಮಟ್ಟ ಪರೀಕ್ಷೆ ನಡೆದಿದೆಯೇ ಎಂಬ ಮಾಹಿತಿಯೂ ಮಾಹಿತಿ ಇಲ್ಲ. ಈಗಾಗಲೇ ಸಿಕಲ್‌ಸೆಲ್‌ (ಕುಡುಗೋಲು ಕೋಶ) ರೋಗದಿಂದ ಬಳಲುತ್ತಿರುವ ಆದಿವಾಸಿಗಳಿಗೆ ಕಳಪೆ ಆಹಾರ ಪೂರೈಸಿದರೆ ಆರೋಗ್ಯ ಮತ್ತಷ್ಟು ಹದಗೆಡಲಿದ್ದು ಸರ್ಕಾರವೇ ನೇರ ಹೊಣೆ’ ಎಂದು ದೂರುತ್ತಾರೆ ಆದಿವಾಸಿ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.