ADVERTISEMENT

ಚಾಮರಾಜನಗರ: ಹೊಂಡ ಬಿದ್ದ‌ ಹೆದ್ದಾರಿ; ಅಪಾಯದಲ್ಲಿ ಸವಾರರ ಜೀವ

ಸಂತೇಮರಹಳ್ಳಿ ವೃತ್ತದಿಂದ ದೊಡ್ಡರಾಯಪೇಟೆ ಕ್ರಾಸ್ ವರಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ 209

ಸೂರ್ಯನಾರಾಯಣ ವಿ
Published 26 ಜುಲೈ 2021, 3:04 IST
Last Updated 26 ಜುಲೈ 2021, 3:04 IST
ಸಂತೇಮರಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿ ದೊಡ್ಡ ಹೊಂಡ ಬಿದ್ದಿರುವುದು.
ಸಂತೇಮರಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಬಳಿ ದೊಡ್ಡ ಹೊಂಡ ಬಿದ್ದಿರುವುದು.   

ಚಾಮರಾಜನಗರ: ನಗರದ ಸಂತೇಮರಹಳ್ಳಿ ವೃತ್ತದಿಂದ ಸಂತೇಮರಹಳ್ಳಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ದೊಡ್ಡರಾಯಪೇಟೆ ಕ್ರಾಸ್‌‌ವರೆಗೆ ಹೊಂಡಗಳು ಸೃಷ್ಟಿಯಾಗಿವೆ.

ಈಗಾಗಲೇ ಹಲವರು ದ್ವಿಚಕ್ರ ವಾಹನಗಳಿಂದ ಬಿದ್ದು ಗಾಯಗೊಂಡಿದ್ದಾರೆ. ವಾಹನಗಳೂ ಜಖಂಗೊಂಡಿವೆ. ಈ ರಸ್ತೆಯು ಚಾಮರಾಜನಗರ ನಗರಸಭೆ ವ್ಯಾಪ್ತಿಗೆ ಬಂದಿದ್ದರೂ, ನಿರ್ವಹಣೆ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊತ್ತಿದೆ. ಪ್ರಾಧಿಕಾರದ ಅಧಿಕಾರಿಗಳು ಗುಂಡಿ ಮುಚ್ಚಲು ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಸಂತೇಮರಹಳ್ಳಿ ವೃತ್ತದಿಂದ ಒಂದು ಕಿ.ಮೀ ದೂರದಲ್ಲಿ ಸೇತುವೆ ಇದ್ದು, ಅದರ ಬಳಿಯಲ್ಲಿ ಅರ್ಧ ಅಡಿಯಷ್ಟು ಆಳದ ದೊಡ್ಡ ಹೊಂಡ ನಿರ್ಮಾಣವಾಗಿದೆ. ನಿರಂತರ ಸುರಿದ ಮಳೆಯಿಂದಾಗಿ ಹೊಂಡ ಮತ್ತಷ್ಟು ವಿಸ್ತಾರವಾಗಿದ್ದು, ಅಪಘಾತದ ಸ್ಥಳವಾಗಿ ಮಾರ್ಪಟ್ಟಿದೆ. ನಗರದಿಂದ ಸಂತೇಮರಹಳ್ಳಿ ಕಡೆಗೆ ಹೋಗುವಾಗ ಈ ಗುಂಡಿ ಕಾಣುತ್ತದೆ. ಹಾಗಾಗಿ ಸವಾರರು ಭಯದಿಂದಲೇ ವಾಹನ ಓಡಿಸುತ್ತಾರೆ.

ಆದರೆ, ಸಂತೇಮರಹಳ್ಳಿ ಕಡೆಯಿಂದ ಬರುವವರಿಗೆ ಈ ಹೊಂಡ ಕಾಣಿಸುವುದಿಲ್ಲ. ರಸ್ತೆ ಹದಗೆಟ್ಟಿರುವುದರ ಅರಿವು ಇಲ್ಲದ ಹೊಸಬರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಸೇತುವೆ ದಾಟಿದ ಕೂಡಲೇ ಹೊಂಡಕ್ಕೆ ಚಕ್ರ‌ ಸಿಲುಕಿ ಅಪಘಾತ ಸಂಭವಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ನಾಲ್ಕು ಚಕ್ರ ವಾಹನಗಳ ತಳ ಭಾಗಕ್ಕೆ ಹಾನಿಯಾಗುತ್ತಿದೆ. ವಾರದ ಅವಧಿಯಲ್ಲಿ ನಾಲ್ಕು ಮಂದಿ ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಹಲವು ಕಾರುಗಳ ತಳ ಭಾಗಕ್ಕೆ ಹಾನಿಯಾಗಿದೆ.

ADVERTISEMENT

ರಿಂಗ್ ರಸ್ತೆಗೆ ಗಮನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನಗರದೊಳಕ್ಕೆ ಬರುವುದನ್ನು ತಪ್ಪಿಸುವುದಕ್ಕಾಗಿ ದೊಡ್ಡರಾಯಪೇಟೆ ಕ್ರಾಸ್ ಬಳಿಯಿಂದ ರಿಂಗ್ ರಸ್ತೆ ನಿರ್ಮಾಣವಾಗುತ್ತಿದೆ. ಈ ರಸ್ತೆಯು ಸೋಮವಾರಪೇಟೆ ಬಳಿ ಸತ್ಯಮಂಗಲ ರಸ್ತೆಯನ್ನು ಸಂಪರ್ಕಿಸುತ್ತದೆ. ರಿಂಗ್ ರಸ್ತೆ ಕಾಮಗಾರಿಯೂ ಈಗ ಸ್ಥಗಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಿಂಗ್ ರಸ್ತೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಈಗ ಇರುವ ರಸ್ತೆಯನ್ನು ಕಡೆಗಣಿಸುತ್ತಿದೆ ಎಂಬುದು ವಾಹನ ಸವಾರರ ಆರೋಪ.

'ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರತಿ ದಿನ ಸಂಚರಿಸುವ ಸ್ಥಳೀಯರಿಗೆ ರಸ್ತೆ ಹಾಳಾಗಿರುವುದು ತಿಳಿದಿರುತ್ತದೆ. ಇಲ್ಲಿ ಸಂಚರಿಸುವವರಲ್ಲಿ ಬಹುತೇಕರು ಹೊಸಜನ. ವೇಗವಾಗಿ ಬಂದು ಹೊಂಡವನ್ನು ತಪ್ಪಿಸಲಾಗದೆ ಹಲವರು ಬಿದ್ದಿದ್ದಾರೆ' ಎಂದು ಈ ಮಾರ್ಗದಲ್ಲಿ ದಿನ‌ನಿತ್ಯ ಸಂಚರಿಸುವ ದೊಡ್ಡರಾಯಪೇಟೆಯ ಗಿರೀಶ್ 'ಪ್ರಜಾವಾಣಿ'ಗೆ ತಿಳಿಸಿದರು.

'ದೊಡ್ಡರಾಯಪೇಟೆ ಕ್ರಾಸ್ ಬಳಿಯಲ್ಲಿರುವ ವಿದ್ಯುತ್ ಸರಬರಾಜು ಸ್ಥಾವರದವರೆಗೆ ರಸ್ತೆ ಚೆನ್ನಾಗಿದೆ. ಅಲ್ಲಿಂದ ನಗರದವರೆಗೆ ಹದಗೆಟ್ಟಿದೆ. ರಿಂಗ್ ರಸ್ತೆ ನಿರ್ಮಾಣವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗವನ್ನು ನಿರ್ಲಕ್ಷಿಸುತ್ತಿದ್ದಾರೆ. ಜಿಲ್ಲಾಡಳಿತ, ಸಂಸದರು, ಶಾಸಕರು ರಸ್ತೆ ಹಾಳಾಗಿರುವ ಬಗ್ಗೆ ಗಮನ ಹರಿಸಿಲ್ಲ. ಯಾರದೋ ನಿರ್ಲಕ್ಷ್ಯಕ್ಕೆ ಮುಗ್ಧ‌ಜೀವಿಗಳು ಬಲಿಯಾಗಬೇಕಾಗಿದೆ' ಎಂದು ಅವರು ಹೇಳಿದರು.

‘ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವೆ’
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, 'ನಾನು ಪ್ರತಿ ದಿ‌ನ ಇದೇ ಮಾರ್ಗದಲ್ಲಿ ಸಂಚರಿಸುತ್ತೇನೆ. ಹೊಂಡ ಬಿದ್ದಿರುವುದನ್ನು ನೋಡಿದ್ದೇನೆ. ಈ ಪ್ರದೇಶ ನಗರಸಭೆ ವ್ಯಾಪ್ತಿಗೆ‌ ಬರುವುದರಿಂದ ರಸ್ತೆ‌ ನಿರ್ವಹಣೆ ಹೊಣೆ ನಗರಸಭೆ ಕೊಡುವಂತೆ‌ ಕೇಳಿದ್ದೆವು. ಹೆದ್ದಾರಿ ಪ್ರಾಧಿಕಾರ ಒಪ್ಪಿರಲಿಲ್ಲ. ಈಗ ಸರಿಯಾಗಿ ನಿರ್ವಹಣೆಯೂ ಮಾಡುತ್ತಿಲ್ಲ. ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚಿಸೋಣ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಸಂಸದರಾಗಲಿ ಸಭೆಯನ್ನೂ ಕರೆಯುತ್ತಿಲ್ಲ' ಎಂದು ಅಸಮಾಧಾನ ವ್ಯ ಕ್ತಪಡಿಸಿದರು.

‘ಪ್ರಾಧಿಕಾರರದ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಮತ್ತೊಮ್ಮೆ ಅವರನ್ನು ಸಂಪರ್ಕಿಸಿ, ಗುಂಡಿಗಳನ್ನು‌ ಮುಚ್ಚಿಸುವಂತೆ ಸೂಚಿಸುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.