ಚಾಮರಾಜನಗರ: ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಹೊಲಯ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧಧರ್ಮ ಎಂದು ನಮೂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೆ.22ರಿಂದ ಆರಂಭವಾಗಿರುವ ಸಮೀಕ್ಷೆಯಲ್ಲಿ ಬಲಗೈ ಸಮುದಾಯಗಳಿಗೆ ಸೇರಿದವರು ಧರ್ಮದ ಕಾಲಂನಲ್ಲಿ ಭೌದ್ಧ ಧರ್ಮ, ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿಯ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು.
1956ರಲ್ಲಿ ಅಂಬೇಡ್ಕರ್ ಹಿಂದೂಧರ್ಮದಲ್ಲಿದ್ದ ಅಸಮಾನತೆ, ತಾರತಮ್ಯದಿಂದ ಬೇಸತ್ತು ಭಾರತದಲ್ಲಿ ಜನ್ಮತಾಳಿದ ಸೋದರತೆ, ಸಮಾನತೆ ಸೌಹಾರ್ದತೆ ಇರುವ ಬೌರ್ಧ ಧರ್ಮವನ್ನು ಸ್ವೀಕರಿಸಿದರು. ಅಂಬೇಡ್ಕರ್ ಅನುಯಾಯಿಗಳಾದ ನಾವೆಲ್ಲರೂ ಅವರ ಆಶಯದಂತೆ ನಡೆಯಬೇಕಿದ್ದು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸಬೇಕು ಎಂದರು.
ಬೌದ್ಧ ಧರ್ಮ ಸ್ವೀಕರಿಸಿ ಪರಿಶಿಷ್ಟ ಜಾತಿಯಲ್ಲಿ ಉಳಿದುಕೊಂಡಿರುವವರಿಗೆ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡಬಹುದು ಎಂದು 1990 ಹಾಗೂ 2011ರಲ್ಲಿ ಸರ್ಕಾರವೇ ಸ್ಪಷ್ಟಪಡಿಸಿರುವುದರಿಂದ ಸಮುದಾಯ ಆತಂಕಪಡುವ ಅಗತ್ಯವಿಲ್ಲ, ಮೀಸಲಾತಿ ಪಡೆಯುವಲ್ಲಿ ಸಮಸ್ಯೆಯಾಗುವುದಿಲ್ಲ ಎಂದರು.
ಡೋಂಗಿ ಅಂಬೇಡ್ಕರ್ ವಾದಿಗಳು: ಇಚ್ಛೆಯ ಧರ್ಮ ಸ್ವೀಕರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಾಗಾಗಿ, ಹೊಲೆಯ ಸಮಾಜ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ಬರೆಸುವುದು ಬೇಡ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಡೋಂಗಿ ಅಂಬೇಡ್ಕರ್ ವಾದಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು ಕಿವಿಗೊಡಬಾರದು ಎಂದರು.
ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪ ಜಾತಿ ಬರೆಸುವ ಮಾಹಿತಿ ನೀಡಲು ಸೆ.30ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಬಿ.ಆರ್.ಅಂಅಂಬೇಡ್ಕರ್ ಭವನದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಂಸದ ಸುನೀಲ್ ಬೋಸ್, ಕೊಳ್ಳೇಗಾಲ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎನ್.ಮಹೇಶ್, ಎಸ್. ಬಾಲರಾಜು, ಐಎಫ್ಎಸ್ ನಿವೃತ್ತ ಅಧಿಕಾರಿ ಡಾ.ರಾಜು, ಗಡಿ,ಕಟ್ಟೆಯ ಯಜಮಾನರು ಭಾಗವಹಿಸುತ್ತಿದ್ದು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಹದೇವು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಅಧ್ಯಕ್ಷ ನಲ್ಲೂರು ಸೋಮೇಶ್ವರ, ಮುಖಂಡರಾದ ಆರ್.ಪಿ.ನಂಜುಂಡಸ್ವಾಮಿ, ನಲ್ಲೂರು ಮಹದೇವಸ್ವಾಮಿ, ಸೋಮಣ್ಣ, ಗೋವಿಂದರಾಜ, ರಂಗಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.