ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಮೇ 2020, 16:50 IST
Last Updated 19 ಮೇ 2020, 16:50 IST
ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು
ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಎಂಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್‌ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು, ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಅಲ್ಲಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ ಈ ಕಾಯ್ದೆಯಿಂದ ಸ್ಥಳೀಯ ಮಾರುಕಟ್ಟೆ ಹಾಗೂ ರೈತರ ನಡುವೆ ಒಂದು ಒಪ್ಪಂದ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ. ಈ ಕಾನೂನು ರೈತರಿಗೆ ಮರಣ ಶಾಸನ’ ಎಂದು ಆರೋಪಿಸಿದರು.

ADVERTISEMENT

‘ಈ ಕಾಯ್ದೆಯಿಂದಾಗಿ ದೈತ್ಯ ಕಂಪನಿಗಳುನೀತಿ ನಿಯಮಗಳನ್ನು ಗಾಳಿಗೆ ತೂರಿ ತಮ್ಮದೇ ರೀತಿಯಲ್ಲಿ ವರ್ತಿಸಲಿವೆ. ಸ್ವಲ್ಪ ದಿನ ರೈತರಿಗೆ ಅನುಕೂಲವಾಗುವ ರೀತಿ ನಡೆದುಕೊಂಡು, ನಂತರ ಬೆಳೆಗಾರರನ್ನು ಕಾಲ ಕಸದಂತೆ ಮಾಡಲಿವೆ. ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿರುವ ಕಾಯ್ದೆಯು ಕಂಪನಿಗಳ ಉದ್ಧಾರಕ್ಕಾಗಿಯೇ ವಿನಾಃ ರೈತರ ಉದ್ಧಾರಕ್ಕಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ರೈತ ಪರ ಸಾಲ ನೀತಿ, ಬೆಲೆ ನೀತಿ, ಕೃಷಿ ನೀತಿ, ವೈಜ್ಞಾನಿಕ ಬೆಲೆ ಬಗ್ಗೆ ಹೋರಾಟ ನಡೆಯುತ್ತಲೇ ಇವೆ. ಆದರೆ, ಸರ್ಕಾರ ರೈತರ ಹಕ್ಕಿನ ಬಗ್ಗೆ ಒತ್ತು ನೀಡಿಲ್ಲ. ಈ ಕಾಯ್ದೆಯಿಂದಾಗಿ ಸರ್ಕಾರವು ಎಪಿಎಂಸಿ ಮೇಲಿನ ನಿಯಂತ್ರಣ ಕಳೆದುಕೊಳ್ಳಲಿದೆ’ ಎಂದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಪ್ರತಿಭಟನನಿರತರ ಅಹವಾಲು ಸ್ವೀಕರಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಮೂಕಳ್ಳಿ ಮಹದೇವಸ್ವಾಮಿ, ಮೂಡ್ಲುಪುರ ಪಟೇಲ್ ಶಿವಮೂರ್ತಿ, ಕೊಣನೂರು ಬಸವಣ್ಣ, ಹಾಡ್ಯ ರವಿ, ಆಲೂರು ಸಿದ್ದರಾಜು, ಬಾಣಹಳ್ಳಿಕುಮಾರ್, ಕಿನಕಹಳ್ಳಿ ಬಸವಣ್ಣ, ಎಂ.ಡಿ.ರಾಜು, ನಂಜಪುರ ಸತೀಶ್, ನಾಗರಾಜು ಶಿವಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.