ADVERTISEMENT

ಅಡುಗೆ ಅನಿಲ ದರ ಏರಿಕೆ ಖಂಡಿಸಿ ಪ್ರತಿಭಟನೆ

ಕರ್ನಾಟಕ ಸೇನಾಪಡೆ, ಎಸ್‌ಡಿಪಿಐ ಪ್ರತ್ಯೇಕ ಪ್ರತಿಭಟನೆ: ಬಿಜೆಪಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:45 IST
Last Updated 15 ಫೆಬ್ರುವರಿ 2020, 15:45 IST
ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸದಸ್ಯರು ಅನಿಲ ಸಿಲಿಂಡರ್‌ ಮುಂದಿಟ್ಟು ಪ್ರತಿಭಟನೆ ನಡೆಸಿದರು
ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಸದಸ್ಯರು ಅನಿಲ ಸಿಲಿಂಡರ್‌ ಮುಂದಿಟ್ಟು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಹಾಗೂ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಲಾರಿ ನಿಲ್ದಾಣದಿಂದ ಮೆರವಣಿಗೆ ಆರಂಭಿಸಿದ ಎಸ್‌ಡಿಪಿಐ ಸದಸ್ಯರು ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಬಳಿಕ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಮನವಿ ಸಲ್ಲಿಸಿದರು.

ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಇದರ ನಡುವೆಯೇ ಕೇಂದ್ರದ ಬಿಜೆಪಿ ಸರ್ಕಾರ ಒಂದೇ ದಿನದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್‌ ಅನಿಲ ದರವನ್ನು ಪ್ರತಿ ಸಿಲಿಂಡರ್‌ಗೆ₹ 144.50 ದರ ಏರಿಕೆ ಮಾಡಿರುವುದು ಸರಿಯಲ್ಲ. ದರ ದಿಢೀರ್‌ ಏರಿಕೆ ದುಷ್ಪರಿಣಾಮಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ದೂರಿದರು.

ADVERTISEMENT

₹ 697 ಇದ್ದಂತಹ 14.2 ಕೆಜಿ ತೂಕದ ಸಿಲಿಂಡರ್‌ ಬೆಲೆಯನ್ನು₹ 842.50ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ, ಸರ್ಕಾರ ಗೃಹ ಬಳಕೆದಾರರಿಗೆ ನೀಡುತ್ತಿರುವ ಸಬ್ಸಿಡಿ ದರವನ್ನು₹ 154ರಿಂದ₹ 291ಕ್ಕೆ ಏರಿಕೆ ಮಾಡಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರು ಕೂಡ ₹8 ಅನ್ನು ಹೆಚ್ಚುವರಿಯಾಗಿ ನೀಡಬೇಕಿದೆ. ಶೀಘ್ರವೇ, ಅನಿಲ ಏರಿಕೆಯನ್ನು ಹಿಂಪಡೆಯಬೇಕು ಎಂದುಒತ್ತಾಯಿಸಿದರು.

ಕೇಂದ್ರ ಸರ್ಕಾರ ಜನವಿರೋಧಿ ನಡೆಯಿಂದ ದೇಶದ ಹಿತಕ್ಕಾಗಿ ಸಬ್ಸಿಡಿ ತ್ಯಾಗ ಮಾಡಿದ ಗ್ರಾಹಕರಿಗೆ ಒಮ್ಮೆಲೆ ದರ ಏರಿಕೆಯಿಂದ ಹೆಚ್ಚುವರಿ ಆರ್ಥಿಕಹೊಡೆತ ಕೊಟ್ಟಿದೆ. ನಿರಂತರವಾಗಿ ಅಡುಗೆ ಅನಿಲ ದರ ಏರಿಕೆಯಿಂದ ಜನತೆಗೆ ತುಂಬಾ ತೊಂದರೆಯಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕರ್ನಾಟಕ ಸೇನಾಪಡೆ: ನಗರದ ಚಾಮರಾಜೇಶ್ವರ ಉದ್ಯಾನವನದ ಆವರಣದಿಂದ ಖಾಲಿ ಸಿಲಿಂಡರ್ ಹೊತ್ತು ಮೆರವಣಿಗೆ ಹೊರಟ ಕಾರ್ಯಕರ್ತರುಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ಪದೇಪದೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಬದುಕುನೊಂದಿಗೆ ಚೆಲ್ಲಾಟವಾಡುತ್ತಿದೆ.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್‌, ಜಿಲ್ಲಾಧ್ಯಕ್ಷ ಸಿ.ಎಸ್. ಸಯ್ಯದ್ ಆರೀಫ್‌, ಉಪಾಧ್ಯಕ್ಷ ಸಮೀವುಲ್ಲಾಖಾನ್‌,ನಗರಸಭೆ ಸದಸ್ಯ ಎಂ. ಮಹೇಶ್‌, ಸಮಾಜವಾದಿ ಪಕ್ಷದ ಮುಖಂಡ ಜಿ.ಎಂ.ಗಾಡ್ಕರ್, ಕಲೀಲ್‌ ಅಹಮದ್‌, ಮಹಮದ್ ಅಮೀಖ್, ಸಂಘಸೇನ, ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸ ಗೌಡ, ಗೌರವ ಅಧ್ಯಕ್ಷ ಶಾ. ಮುರಳಿ, ನಿಜಧ್ವನಿ ಗೋವಿಂದರಾಜು, ಗು. ಪುರುಷೋತ್ತಮ, ಗಡಿನಾಡ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ. ಕುಮಾರ್, ಆಲೂರು ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.