ADVERTISEMENT

ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್‌ ಮಾಧ್ಯಮದ ಶುಲ್ಕ ಹೆಚ್ಚಳ: ಶಾಲೆ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 16:44 IST
Last Updated 1 ಜುಲೈ 2021, 16:44 IST
ಪೋಷಕರು ಶಾಲಾ ಆಡಳಿತ ಮಂಡಳಿ ಸದಸ್ಯರೊಂದಿಗೆ ಗುರುವಾರ ಮಾತುಕತೆ ನಡೆಸಿದರು
ಪೋಷಕರು ಶಾಲಾ ಆಡಳಿತ ಮಂಡಳಿ ಸದಸ್ಯರೊಂದಿಗೆ ಗುರುವಾರ ಮಾತುಕತೆ ನಡೆಸಿದರು   

ಚಾಮರಾಜನಗರ: ಇಲ್ಲಿನ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ 2021–22ನೇ ಸಾಲಿನ ಶುಲ್ಕವನ್ನು ಶೇ 25ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಗುರುವಾರ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶಾಲೆಯ ಮುಂದೆ ಪ್ರತಿಭಟನೆಯನ್ನೂ ನಡೆಸಿದರು.

ಹೊಸ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆರಂಭಿಸಿರುವ ಶಿಕ್ಷಣ ಸಂಸ್ಥೆ, ಜುಲೈ ಮೊದಲ ವಾರದ ಒಳಗಾಗಿ ಶುಲ್ಕ ಪಾವತಿಸುವಂತೆ ಪೋಷಕರಿಗೆ ಸೂಚಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರತಿ ತರಗತಿಯ ಶುಲ್ಕವನ್ನು ₹4,000 ದಿಂದ ₹5,000 ಹೆಚ್ಚಿಸಲಾಗಿದೆ ಎಂಬುದು ಪೋಷಕರ ಆರೋಪ.

ಶುಲ್ಕ ಹೆಚ್ಚಳದ ವಿರುದ್ಧ ಕೆಲವು ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ದೂರನ್ನು ನೀಡಿದ್ದರು. ಇದರ ಆಧಾರದಲ್ಲಿ ಶಾಲಾ ಆಡಳಿತ ಮಂಡಳಿಯು ಗುರುವಾರ ಪೋಷಕರ ಸಭೆ ಕರೆದಿತ್ತು.

ADVERTISEMENT

ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಪೋಷಕರು ಶುಲ್ಕ ಹೆಚ್ಚಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಕೋವಿಡ್‌ನಿಂದ ಜನರೆಲ್ಲರೂ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸಿರುವುದು ಎಷ್ಟು ಸರಿ? ಕಳೆದ ವರ್ಷಕ್ಕಿಂತ ಹೆಚ್ಚು ಶುಲ್ಕವನ್ನು ಯಾವುದೇ ಕಾರಣಕ್ಕೂ ನಾವು ಕೊಡುವುದಿಲ್ಲ’ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಮಂಡಳಿ ಸದಸ್ಯರು, ‘ಶೇ 15ರಷ್ಟು ಶುಲ್ಕ ಹೆಚ್ಚಿಸಲು ಅವಕಾಶ ಇದೆ. ಸರ್ಕಾರ ಈ ವರ್ಷದ ಶುಲ್ಕಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದ ಸೂಚನೆಯನ್ನು ನಾವು ಪಾಲಿಸುತ್ತೇವೆ’ ಎಂದು ಹೇಳಿದರು.

‘ಇದನ್ನು ಒಪ್ಪದ ಪೋಷಕರು, ಹೆಚ್ಚುವರಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಈ ಹಿಂದಿನ ಶುಲ್ಕವನ್ನೇ ಕಟ್ಟುತ್ತೇವೆ. ಈಗ ಶೇ 50ರಷ್ಟು ಶುಲ್ಕ ಪಾವತಿಸಿ, ನಂತರ ಹೈಕೋರ್ಟ್‌ ನೀಡುವ ತೀರ್ಮಾನದಂತೆ ಶುಲ್ಕ ಪಾವತಿಸುತ್ತೇವೆ. ಎಲ್ಲ ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳು ಆರಂಭವಾಗಿದ್ದು, ಇಲ್ಲೂ ತಕ್ಷಣವೇ ಆರಂಭಿಸಿ’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಪೋಷಕರ ನಡುವೆ ಕೆಲ ಕಾಲ ವಾಗ್ವಾದವೂ ನಡೆಯಿತು.

ಆನ್‌ಲೈನ್‌ ತರಗತಿಯನ್ನು ತಕ್ಷಣವೇ ಆರಂಭಿಸಲು ಶಾಲಾ ಆಡಳಿತ ಮಂಡಳಿ ಸದಸ್ಯರು ಒಪ್ಪಿದರು. ಹೆಚ್ಚಿರುವ ಶುಲ್ಕವನ್ನು ಶೇ 15ರಿಂದ ಶೇ 10ಕ್ಕೆ ಇಳಿಸುವ ಭರವಸೆಯನ್ನು ನೀಡಿದರು. ಆದರೆ, ಇದಕ್ಕೆ ಒಪ್ಪದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೋಷಕ ಶ್ರೀನಿವಾಸ್‌ ಪ್ರಸಾದ್‌, ‘ಕೋವಿಡ್‌ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸಿರುವುದನ್ನು ನಾವು ವಿರೋಧಿಸಿದ್ದೇವೆ. ಶುಲ್ಕವನ್ನು ನಾವು ಪಾವತಿಸುತ್ತೇವೆ ಎಂದು ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ಹೆಚ್ಚುವರಿ ಶುಲ್ಕವನ್ನು ಕೊಡುವುದಿಲ್ಲ ಎಂಬುದು ನಮ್ಮ ವಾದ. ಹಳೆಯ ಶುಲ್ಕವನ್ನು ಕಂತಿನಲ್ಲಿ ಕಟ್ಟುವುದಕ್ಕೆ ಅವಕಾಶ ನೀಡಬೇಕು ಎಂದೂ ಕೇಳಿದ್ದೇವೆ. ಹೆಚ್ಚಿರುವ ಶುಲ್ಕವನ್ನು ಶೇ 10ಕ್ಕೆ ಇಳಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಇದಕ್ಕೆ ನಾವು ಒಪ್ಪಿಲ್ಲ. ಹಳೆ ಶುಲ್ಕವನ್ನೇ ಮುಂದುವರಿಸಬೇಕು ಎಂದು ಪ್ರತಿಭಟನೆಯನ್ನೂ ನಡೆಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಸರ್ಕಾರದ ಸೂಚನೆ ಪಾಲಿಸುತ್ತೇವೆ’
ಪೋಷಕರೊಂದಿಗೆ ನಡೆಸಿದ ಸಭೆಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಶಾಲಾ ಆಡಳಿತ ಮಂಡಳಿ ಸದಸ್ಯ ಬಾಲಸುಬ್ರಹ್ಮಣ್ಯಂ ಅವರು, ‘ಪೋಷಕರು ನಾಲ್ಕು ಬೇಡಿಕೆ ಮುಂದಿಟ್ಟಿದ್ದಾರೆ. ಮೂರನ್ನು ಒಪ್ಪಿಕೊಂಡಿದ್ದೇವೆ. ಎರಡು ವರ್ಷಗಳಿಂದ ಶುಲ್ಕವನ್ನು ಪರಿಷ್ಕರಿಸಿರಲಿಲ್ಲ. ಶೇ 15ರಷ್ಟು ಹೆಚ್ಚಿಸಲು ಅವಕಾಶ ಇದ್ದುದರಿಂದ ಅಷ್ಟು ಹೆಚ್ಚಿಸಿದ್ದೇವೆ. ಹೆಚ್ಚುವರಿ ಶುಲ್ಕವನ್ನು ಪಾವತಿಸುವುದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದು ಶೇ 15ರಿಂದ ಶೇ 10ಕ್ಕೆ ಇಳಿಸಲು ಒಪ್ಪಿದ್ದೇವೆ’ ಎಂದು ಹೇಳಿದರು.

‘ಕಳೆದ ವರ್ಷ ಶೇ 70ರಷ್ಟು ಶುಲ್ಕ ಪಡೆಯುವಂತೆ ಸರ್ಕಾರ ಸೂಚಿಸಿತ್ತು. ಅದನ್ನು ಪಾಲಿಸಿದ್ದೇವೆ. ಕಳೆದ ವರ್ಷ ಪೂರ್ಣ ಶುಲ್ಕ ಪಾವತಿಸಿದವರಿಗೆ ಶೇ 30ರಷ್ಟು ಹಣವನ್ನು ವಾಪಸ್ ಕೊಟ್ಟಿದ್ದೇವೆ ಇಲ್ಲವೇ, ಈ ವರ್ಷದ ಶುಲ್ಕಕ್ಕೆ ಅದನ್ನು ಜಮೆ ಮಾಡಲಾಗುತ್ತಿದೆ. ಈ ವರ್ಷದ ಶುಲ್ಕದ ವಿಚಾರವಾಗಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದ ಸೂಚನೆಯನ್ನು ನಾವು ಪಾಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.