ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 12:15 IST
Last Updated 2 ಸೆಪ್ಟೆಂಬರ್ 2021, 12:15 IST
ಅಡುಗೆ ಅನಿಲ, ಇಂಧನ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಅಡುಗೆ ಅನಿಲ, ಇಂಧನ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಅಡುಗೆ ಅನಿಲ, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇ‌ನಾ ಪಡೆ ಕಾರ್ಯಕರ್ತರು ನಗರದಲ್ಲಿ ಗುರುವಾರಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು, ಖಾಲಿ ಅಡುಗೆ ಸಿಲಿಂಡರ್ ಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ‌.ರಂ.ಶ್ರೀನಿವಾಸಗೌಡ ಅವರು ಮಾತನಾಡಿ, ' ಕೇಂದ್ರ ಸರ್ಕಾರ ಕೋವಿಡ್ ಸಂದರ್ಭದಲ್ಲೂ ಇಂಧನ, ತೈಲ, ಅಡುಗೆ ಎಣ್ಣೆ ಸೇರಿದಂತೆ ದಿನನಿತ್ಯದ ಅಗತ್ಯವಸ್ತುಗಳ ಬೆಲೆಯನ್ನು ದಿನೇ ದಿನೇ ಏರಿಕೆ ಮಾಡುವ ಮೂಲಕ ಬಡವರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದೆ' ಎಂದು ಆರೋಪಿಸಿದರು.

ADVERTISEMENT

'ಜನಸಾಮಾನ್ಯರಿಗೆ ಸಂಕಷ್ಟದ ವೇಳೆಯಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗದ ಕೇಂದ್ರ ಸಚಿವರು ಯಾವ ಪುರುಷಾರ್ಥಕ್ಕಾಗಿ ಅಧಿಕಾರ ನಡೆಸುತ್ತಿದ್ದಾರೆ' ಎಂದು ಪ್ರಶ್ನಿಸಿದರು.

'ಕೂಡಲೇ ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಜನರು ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬೀಳಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ' ಎಂದರು.

ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ನಿಜಧ್ವನಿಗೋವಿಂದರಾಜು, ಚಾ.ಸಿ.ಸೋಮನಾಯಕ, ವೀರಭದ್ರ, ತಾಂಡವಮೂರ್ತಿ, ಶಿವಶಂಕರನಾಯಕ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಸಾಗರ್ ಸಾವತ್, ದೊರೆ, ಸೂರಿ, ಸುರೇಶ್, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.