ADVERTISEMENT

ಹುಲಿ ಯೋಜನೆಗೆ ವಿರೋಧ, ಮೂಲಸೌಕರ್ಯಕ್ಕೆ ಆಗ್ರಹ

ಮಹದೇಶ್ವರ ಬೆಟ್ಟದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:03 IST
Last Updated 17 ನವೆಂಬರ್ 2022, 4:03 IST
ಹುಲಿ ಯೋಜನೆ ಘೋಷಣೆ ವಿರೋಧಿಸಿ, ಅರಣ್ಯದ ಅಂಚಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತರು ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು
ಹುಲಿ ಯೋಜನೆ ಘೋಷಣೆ ವಿರೋಧಿಸಿ, ಅರಣ್ಯದ ಅಂಚಿನ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರೈತರು ಹಾಗೂ ಸ್ಥಳೀಯರು ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು   

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದನ್ನು ವಿರೋಧಿಸಿ ಹಾಗೂ ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರೈತ ಮುಖಂಡರು ಹಾಗೂ ಸ್ಥಳೀಯರು ಬೆಟ್ಟದಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಬೆಟ್ಟದ ಚೆಕ್‌ಪೋಸ್ಟ್‌ನಲ್ಲಿ ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ಸರ್ಕಾರ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತೊಳಸಿಕೆರೆ ಗ್ರಾಮದ ರೈತ ಮುಖಂಡ ಕೆಂಪಣ್ಣ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಿಂದಲೂ ನಮ್ಮ ಬದುಕು ಮೂರ ಬಟ್ಟೆಯಾಗಿದ್ದು, ಇದುವರೆವಿಗೂ ನಮ್ಮ ಗ್ರಾಮಗಳು ಮೂಲ ಸೌಕರ್ಯ ಕಂಡಿಲ್ಲ. ನಮ್ಮ ಗ್ರಾಮಗಳತ್ತ ಸರ್ಕಾರ ಗಮನಹರಿಸಿಲ್ಲ. ವನ್ಯಧಾಮವನ್ನು ಹುಲಿ ರಕ್ಷಿತ ಅರಣ್ಯವಾಗಿ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ಘೋಷಣೆ ಆದರೆ, ನಮ್ಮ ಸ್ಥಿತಿ ಶೋಚನೀಯವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಅಡುಗೆ ಮಾಡಿ ಹೊಟ್ಟೆಯನ್ನು ತುಂಬಿಸಿಕೊಳ್ಳಲೂ ನಮ್ಮ ಕೈಯಲ್ಲಿ ಆಗದೆ ನಿಸ್ಸಾಯಕರಾಗಿ ಬದುಕನ್ನು ಸಾಗಿಸುತಿದ್ದೇವೆ. ಕಾಡಿನಿಂದ ಸೌದೆ ತರುವುದನ್ನು ನಿಲ್ಲಿಸುವುದಕ್ಕೆ ಅರಣ್ಯ ಇಲಾಖೆಯಿಂದ ಅಡುಗೆ ಮಾಡಲು ಅಡುಗೆ ಅನಿಲವನ್ನು ನೀಡಿ ಸೌದೆಗೆ ತಡೆಮಾಡಿದರು. ಈಗ ಅಡುಗೆ ಅನಿಲಕ್ಕಾಗಿ ₹1,150 ನೀಡಬೇಕು. ಒಂದು ಪ್ಯಾಕೆಟ್‌ ಉಪ್ಪು ಖರೀದಿ ಮಾಡಲು ನಿಸ್ಸಾಯಕರಾಗಿರುವಾಗ ಅನಿಲ ಕೊಳ್ಳಲು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಸ್ಥಳೀಯ ನಿವಾಸಿ ಮಾದೇವಿ ಮಾತನಾಡಿ, ‘ಬೆಟ್ಟದ ಸುತ್ತಮುತ್ತಲೂ ಇರುವ ಹಳ್ಳಿಗಳಿಗೆ ರಸ್ತೆ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುವವರು ಸರಿಯಾದ ಸಮಯಕ್ಕೆ ಆರೋಗ್ಯ ಕೇಂದ್ರಕ್ಕೆ ತಲುಪದೆ ಕೆಲ ಮಕ್ಕಳು, ಗರ್ಭಿಣಿಯರು ಮೃತಪಟ್ಟಿರುವ ಹಲವಾರು ಘಟನೆಗಳು ಗತಿಸಿ ಹೋಗಿವೆ. ಮಹದೇಶ್ವರ ಬೆಟ್ಟದಲ್ಲಿ ಈಗಿರುವಂತಹ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಹಲವಾರು ಬಾರಿ ಮನವಿಯನ್ನು ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಈಗಿರುವಂತಹ ಆರೋಗ್ಯಾಧಿಕಾರಿಗಳು ತಪಾಸಣೆಗೆ ಹಣವನ್ನು ಕೇಳುತ್ತಾರೆ’ ಎಂದು ದೂರಿದರು.

‘ಕಾಡಂಚಿನಲ್ಲಿರುವ ಗ್ರಾಮಗಳಿಗೆ 15 ದಿನಗಳ ಒಳಗಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸ‌ಬೇಕು. ಪ್ರತೀ ಹಳ್ಳಿಗೂ ವಿದ್ಯುತ್ ಪೂರೈಕೆಯಾಗಬೇಕು. ಇಲ್ಲವಾದರೆ ಮುಂಬರುವ ಚುಣಾವಣೆಯನ್ನು ಬಹಿಷ್ಕಾರ ಮಾಡಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಕಪ್ಪು ಬಾವುಟ ಪ್ರದರ್ಶನ: ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ‘ಮೂಲ ಸೌಕರ್ಯಕ್ಕೆ ಆಗ್ರಹಿಸಿ ಹಾಗೂ ಅರಣ್ಯ ಅಧಿಕಾರಿಗಳು ಕಾಡಂಚಿನಲ್ಲಿರುವ ಗ್ರಾಮಸ್ಥರಿಗೆ ನೀಡುವ ಕಿರುಕುಳದ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆಗಳು ನಡೆಸಿದ್ದರೂ ಇಲಾಖೆಯವರು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಇಲ್ಲಿಯವರೆವಿಗೂ ಮೂಲ ಸೌಕರ್ಯ ಸಮರ್ಪಕವಾಗಿ ಒದಗಿಸಿಕೊಟ್ಟಿಲ್ಲ. ಕೂಡಲೇ ಎಲ್ಲ ಸೌಕರ್ಯಗಳನ್ನು ನೀಡಬೇಕು. ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬಾರದು. ಕಾಡಂಚಿನಲ್ಲಿ ವಾಸಿಸುತ್ತಿರುವ ಜನರನ್ನು ಕಾಡು ಮಕ್ಕಳಾಗಿಯೇ ಬದುಕಲು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಮುಖ್ಯಮಂತ್ರಿಗಳು ಬೆಟ್ಟಕ್ಕೆ ಬರುವ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಲಾಗುವುದು’ ಎಚ್ಚರಿಸಿದರು.

ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಕೆ.ವಿ.ಮಾದೇಶ್, ಜೇನುಗೂಡು ಮಹಿಳಾ ವ್ಯವಸ್ಥಾಪಕ ಮಂಜುನಾಥ್, ಮಹಿಳಾ ಸಂಘದ ಸದಸ್ಯರು ಇದ್ದರು.

‘6 ತಿಂಗಳೊಳಗೆ ಸಮುದಾಯ ಆರೋಗ್ಯ ಕೇಂದ್ರ’

‘ಮಹದೇಶ್ವರ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲು ಈಗಾಗಲೇ ಎಲ್ಲ ಸಿದ್ದತೆಗಳು ಮುಗಿದಿದ್ದು, ಪ್ರಾಧಿಕಾರದ ವತಿಯಿಂದ ಆಸ್ಪತ್ರೆ ನಿರ್ಮಾಣ ಮಾಡಲು 2 ಎಕರೆ ಜಾಗವನ್ನು ಗುರುತಿಸಲಾಗಿದೆ. ₹13 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, 3 ತಿಂಗಳ ಒಳಗೆ ಅರ್ಧ ಕಾಮಗಾರಿ ಮುಗಿಯುತಿದ್ದಂತೆಯೇ ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ತಿಳಿಸಿದರು.

ಸೆಸ್ಕ್‌ ಇಇ ಪ್ರಕಾಶ್ ಕುಮಾರ್ ಮಾತನಾಡಿ, ‘ಅರಣ್ಯ ಇಲಾಖೆಯಿಂದ ಅನುಮತಿ ಕೊಟ್ಟರೆ ಸಾಂಪ್ರದಾಯಿಕವಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ ಸೆಪ್ಟಂಬರ್ ತಿಂಗಳಿನಲ್ಲಿ ಮೆಂದರೆ, ತೊಳಸಿಕೆರೆ, ಇಂಡಿಗನತ್ತ ಈ ಮೂರು ಗ್ರಾಮಗಳಿಗೆ ಅನುಮತಿಯನ್ನು ಕೋರಿ ಅರಣ್ಯ ಇಲಾಖೆಗೆ ಮನವಿಯನ್ನು ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.