ADVERTISEMENT

ಚಾಮರಾಜನಗರ: ಸುತ್ತೋಲೆ ಖಂಡಿಸಿ ಬಿಎಸ್‌ಪಿ ಪ್ರತಿಭಟನೆ

ಸಂವಿಧಾನ ದಿನ-ಭಾರತ ಪ್ರಜಾಪ್ರಭುತ್ವದ ತಾಯಿ: ಆದೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 15:56 IST
Last Updated 6 ಡಿಸೆಂಬರ್ 2022, 15:56 IST
ಕೇಂದ್ರ ಸರ್ಕಾರದ ಸುತ್ತೋಲೆ ಖಂಡಿಸಿ ಬಿಎಸ್‌ಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ಕೇಂದ್ರ ಸರ್ಕಾರದ ಸುತ್ತೋಲೆ ಖಂಡಿಸಿ ಬಿಎಸ್‌ಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಸಂವಿಧಾನ ದಿನವನ್ನು‘ಭಾರತ: ಪ್ರಜಾಪ್ರಭುತ್ವದ ತಾಯಿ’ ಎಂಬ ಹೆಸರಿನಲ್ಲಿ ಆಚರಿಸಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಭುವನೇಶ್ವರಿ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಮಾನವ ಸರಪಳಿ ರಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ದ ಘೋಷಣೆ ‌ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಸಂವಿಧಾನ ವಿರೋಧಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸುತ್ತೋಲೆ ಪ್ರತಿಯನ್ನು ಸುಟ್ಟು ಹಾಕಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾಗಯ್ಯ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಅಧಿಕಾರದಕ್ಕೆ ಬಂದ ನಂತರ ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದ್ದು, ಬಡವಾಳ ಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿದೆ’ ಎಂದು ದೂರಿದರು.

ADVERTISEMENT

‘ಸಂವಿದಾನದ ಆಶಯಗಳಿಗೆ ಎಂದಿಗೂ ಬದ್ದವಾಗಿರದಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದೆಡೆಯಾದರೆ, ಇವುಗಳನ್ನು ಮೀರಿ ಬಿಜೆಪಿ ಸಂವಿಧಾನ ಬದಲಾಯಿಸಲು ಪ್ರಯತ್ನಿಸುತ್ತಲೇ ಇದೆ. ಇದೀಗ ಕೇಂದ್ರದಲ್ಲಿರುವ ಮೋದಿ ಸರ್ಕಾರವು ಸಂವಿಧಾನ ದಿನವನ್ನು ‘ಭಾರತ ಪ್ರಜಾಪ್ರಭುತ್ವದ ತಾಯಿ’ ಎಂದು ಘೋಷಿಸಿ, ವೇದಕಾಲದಲ್ಲೇ ಭಾರತ ದೇಶದಲ್ಲಿ ಪ್ರಜಾಫ್ರಭುತ್ವ ಇದ್ದುದಾಗಿ ಸುಳ್ಳು ಇತಿಹಾಸವನ್ನು ನಮ್ಮ ಮೇಲೆ ಹೇರುವ ಹುನ್ನಾರ ನಡೆಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ,ತಾಲ್ಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ಸಂಯೋಜಕ ಎಸ್.ಪಿ.ಮಹೇಶ್, ತಾಲ್ಲೂಕು ಉಪಾಧ್ಯಕ್ಷ ರಾಜು ಕೋಡಿಉಗನೆ, ಜಿಲ್ಲಾ ಖಜಾಂಚಿ ರಾಜೇಂದ್ರ, ಗ್ರಾಮ ಪಂಚಾಹಿತಿ ಸದಸ್ಯರಾದ ಶಿವಣ್ಣ, ಬಾಲರಾಜು, ಅಲೋಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.