ಗುಂಡ್ಲುಪೇಟೆ: ತಾಲ್ಲೂಕಿನ ಶಿಂಡನಪುರ ಗ್ರಾಮದಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲುಗಡೆ ಮಾಡದಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಭಾನುವಾರ ಪಟ್ಟಣದ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರ ವಲಯದಲ್ಲಿ ಸಾರಿಗೆ ಸಂಸ್ಥೆ ಬಸ್ ತಡೆದು ಸಂಸ್ಥೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ‘ಶಿಂಡನಪುರ ಗ್ರಾಮ ಚಾಮರಾಜನಗರ ಮುಖ್ಯ ರಸ್ತೆಯಲ್ಲಿದ್ದು, ಸುತ್ತಮುತ್ತ ಗ್ರಾಮಗಳ ಸಂಪರ್ಕಕೊಂಡಿಯಾಗಿದೆ. ಸಾರಿಗೆ ಸಂಸ್ಥೆಯವರೇ ಎಕ್ಸ್‌ಪ್ರೆಸ್ ಸೇರಿ ಎಲ್ಲಾ ಬಸ್‍ಗಳ ನಿಲುಗಡೆ ಮಾಡಬೇಕು ಎಂಬ ನಿಯಮ ಮಾಡಿದ್ದಾರೆ. ಪ್ರಯಾಣಿಕರು ಕಾದು ನಿಂತಿದ್ದರೂ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಚಾಲಕ, ನಿರ್ವಾಹಕರು ನಿಲುಗಡೆ ಮಾಡದೇ ತೆರಳುತ್ತಿದ್ದಾರೆ’ ಎಂದು ದೂರಿದರು.
ನಂತರ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಸಂಚಾರ ನಿಯಂತ್ರಕರು ಬಸ್ ನಿಲುಗಡೆ ಮಾಡದ ಹೊರಗುತ್ತಿಗೆ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕ್ರಮ ವಹಿಸಲಾಗುವುದು. ಮೇಲಾಧಿಕಾರಿಗಳ ಜತೆ ಚರ್ಚಿಸಿ ಎಲ್ಲಾ ಬಸ್‍ಗಳ ನಿಲುಗಡೆ ಮಾಡುವಂತೆ ಸೂಚಿಸಲಾಗುವುದು. ಜೊತೆಗೆ ಫಲಕ ಹಾಕಿಸಲಾಗುದು ಎಂದು ಲಿಖಿತ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಚಂದ್ರು, ಎಸ್.ಟಿ.ಮಹದೇವಸ್ವಾಮಿ, ಸಿದ್ದಪ್ಪ, ನಾಗೇಂದ್ರ ಶಿಂಡನಪುರ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.