ADVERTISEMENT

ರಾಮಸಮುದ್ರ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:18 IST
Last Updated 22 ಅಕ್ಟೋಬರ್ 2020, 13:18 IST
ರಾಮಸಮುದ್ರ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಮಸಮುದ್ರ ಅಭಿವೃದ್ಧಿ ಸಮಿತಿಯವರು ಪ್ರತಿಭಟನೆ ನಡೆಸಿದರು
ರಾಮಸಮುದ್ರ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಮಸಮುದ್ರ ಅಭಿವೃದ್ಧಿ ಸಮಿತಿಯವರು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಮಸಮುದ್ರದ ಅಭಿವೃದ್ಧಿ ವಿಚಾರದಲ್ಲಿ ಚಾಮರಾಜನಗರ ನಗರಸಭೆ ಹಾಗೂ ಜಿಲ್ಲಾಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಾಮಸಮುದ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಅವರು, ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ರಾಮಸಮುದ್ರದಲ್ಲಿ ಐದು ವಾರ್ಡ್‌ಗಳಿದ್ದು, 15 ಸಾವಿರ ಜನಸಂಖ್ಯೆ ಇದೆ. ನಗರಸಭೆ, ಜಿಲ್ಲಾಡಳಿತವು ಪ್ರತಿಯೊಂದು ಅಭಿವೃದ್ಧಿ ವಿಚಾರದಲ್ಲಿ ರಾಮಸಮುದ್ರವನ್ನು ಕಡೆಗಣಿಸುತ್ತಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ದಸರಾ ಅಂಗವಾಗಿ ಜೋಡಿ ರಸ್ತೆಗೆ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಅದನ್ನು ಅರ್ಧಕ್ಕೆ ಸೀಮಿತಗೊಳಿಸಲಾಗಿದೆ. ಆದರೆ, ಇಡೀ ಜೋಡಿ ರಸ್ತೆಗೆ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗುತ್ತಿದೆ’ ಎಂದು ದೂರಿದರು.

‘ರಾಮಸಮುದ್ರದ ಐದು ವಾರ್ಡ್‌ಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೇ ಅವ್ಯವಸ್ಥೆಯಾಗಿದೆ. ವಾರ್ಡ್‌ಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಚಾಮರಾಜನಗರದಿಂದ ರಾಮಸಮುದ್ರದ ಕೊನೆಯ ಭಾಗದವರೆಗೂ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಬೇಕು. ದಸರಾ ಅಂಗವಾಗಿ ಜೋಡಿ ರಸ್ತೆಗೆ ಅಳವಡಿಸಿರುವ ದೀಪಾಲಂಕಾರವನ್ನು ರಾಮಸಮುದ್ರದ ಕೊನೆಯವರೆಗೂ ವಿಸ್ತರಿಸಬೇಕು. ಐದು ವಾರ್ಡ್‌ಗಳ ವ್ಯಾಪ್ತಿಗೂ ವಾರಕ್ಕೆ ಐದು ಬಾರಿ ಕಾವೇರಿ ನೀರು ಪೂರೈಸಬೇಕು. ಅಪೂರ್ಣವಾಗಿರುವ ಒಳಚರಂಡಿ ಹಾಗೂ ಹದಗೆಟ್ಟ ರಸ್ತೆಯನ್ನು ಸರಿಪ‍ಡಿಸಬೇಕು. ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಮಹದೇವಸ್ವಾಮಿ, ಮಣಿ, ಶ್ರೀನಿವಾಸ, ಕುಮಾರ, ಶಿವರಾಜು, ಚಂದ್ರು, ಮಹೇಶ್‌, ಆರ್‌.ಮಂಜು, ಬಾಬು, ನಾಗೇಶ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.