ADVERTISEMENT

ಹಾಸ್ಟೆಲ್‌ಗಳಲ್ಲಿ ಶುಚಿ–ರುಚಿಯ ಊಟ ಕೊಡಿ: ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 16:30 IST
Last Updated 9 ಮೇ 2025, 16:30 IST
ಚಾಮರಾಜನಗರ ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆ ಸಿಬ್ಬಂದಿ ಮತ್ತು ಸಹಾಯಕರಿಗೆ ಹಮ್ಮಿಕೊಂಡಿದ್ದ ವಿಶೇಷ ಪುನಶ್ಚೇತನ ಕಾರ್ಯಗಾರವನ್ನು ಎಡಿಸಿ ಗೀತಾ ಹುದೇದ ಉದ್ಘಾಟಿಸಿದರು
ಚಾಮರಾಜನಗರ ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆ ಸಿಬ್ಬಂದಿ ಮತ್ತು ಸಹಾಯಕರಿಗೆ ಹಮ್ಮಿಕೊಂಡಿದ್ದ ವಿಶೇಷ ಪುನಶ್ಚೇತನ ಕಾರ್ಯಗಾರವನ್ನು ಎಡಿಸಿ ಗೀತಾ ಹುದೇದ ಉದ್ಘಾಟಿಸಿದರು   

ಚಾಮರಾಜನಗರ: ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಅಡುಗೆ ಸಿಬ್ಬಂದಿ ಮತ್ತು ಸಹಾಯಕರಿಗೆ ಹಮ್ಮಿಕೊಂಡಿದ್ದ ವಿಶೇಷ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಅಡುಗೆ ಸಿಬ್ಬಂದಿ ಹಾಗೂ ಸಹಾಯಕರಿಗೆ ನಿರಂತರ ತರಬೇತಿ ಕಾರ್ಯಕ್ರಮ, ಆರೋಗ್ಯ ಶಿಬಿರ ಆಯೋಜಿಸಬೇಕು. ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದರೆ ವಿದ್ಯಾರ್ಥಿ ನಿಲಯಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬಹುದು. ಹಾಸ್ಟೆಲ್ ಸಂಬಂಧಿತ ಸಮಸ್ಯೆಗಳಿದ್ದರೆ ಗಮನಕ್ಕೆ ತೊಂದರೆ ಬಗೆಹರಿಸಲಾಗುವುದು ಎಂದರು.

ADVERTISEMENT

ಪ್ರತಿದಿನ ಮೆನುವಿನಲ್ಲಿರುವಂತೆ ರುಚಿಕರವಾಗಿ ಅಡುಗೆ ತಯಾರಿಸಬೇಕು, ಬೇರೆ ಊರುಗಳಿಂದ ವಿದ್ಯಾರ್ಥಿ ನಿಲಯಗಳಿಗೆ ಬಂದಿರುವ ಮಕ್ಕಳ ಮನಸಿಗೆ ನೋವಾಗದಂತೆ ವರ್ತಿಸಬೇಕು, ಅಡುಗೆ ಮಾಡುವಾಗ ಮುಖ್ಯವಾಗಿ ಎಚ್ಚರಿಕೆ ಹಾಗೂ ಜವಾಬ್ದಾರಿ ಇರಬೇಕು. ಅಡುಗೆಗೆ ಅವಧಿ ಮೀರಿದ ಆಹಾರ ಪದಾರ್ಥ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆಹಾರ ತಯಾರಿಸುವ ಮೂನ್ನ ಜಾಗರೂಕತೆಯಿಂದ ಪದಾರ್ಥಗಳನ್ನು ಪರಿಶೀಲನೆ ಮಾಡಿ ಗುಣಮಟ್ಟ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬ ದೂರುಗಳಿದ್ದು, ಮಕ್ಕಳ ಬಳಕೆ ಸಲ್ಲದು. ಹಾಸ್ಟೆಲ್‌ಗಳ ಹೊರಭಾಗ ಹಾಗೂ ಒಳಭಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ  ಹಿಂದುಳಿದ ವರ್ಗಗಳ ನಿಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮತ್ತಷ್ಟು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಗೀತಾ ಹುಡೇದ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ನಿವೃತ್ತ ಕಲ್ಯಾಣಾಧಿಕಾರಿ ಶರಣಪ್ಪ ಎಂ.ಮೊಗಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಪ್ತ ಸಮಾಲೋಚಕಿ ಮೇಘಶ್ರೀ, ನಿವೃತ್ತ ನಿಲಯ ಪಾಲಕಿ ಮಂಜುಳಾ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶಿವಾಜಿರಾವ್ ಪವಾರ್, ಆರೋಗ್ಯ ಇಲಾಖೆಯ ಅಧಿಕಾರಿ ಶಾಂತಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿಶ್ವನಾಥ್, ತಾಲ್ಲೂಕು ಅಧಿಕಾರಿ ಲಿಂಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.