ADVERTISEMENT

ವೀರಪ್ಪನ್‌ ಹಾರಿಸಿದ್ದ ಗುಂಡುಗಳನ್ನು ದೇಹದಲ್ಲಿಟ್ಟುಕೊಂಡಿದ್ದ ಪಿಎಸ್‌ಐ ನಿಧನ

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:32 IST
Last Updated 25 ಮೇ 2021, 16:32 IST
ಸಿದ್ಧರಾಜ ನಾಯಕ
ಸಿದ್ಧರಾಜ ನಾಯಕ   

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಚಾಮರಾಜನಗರ ಪಟ್ಟಣದ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸಿದ್ದರಾಜ ನಾಯಕ ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಇವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ.

ಎಸ್‌ಪಿ ಹರಿಕೃಷ್ಣ ಮತ್ತು ಎಸ್‌ಐ ಶಕೀಲ್ ಅಹಮ್ಮದ್ ಅವರ ನೇತೃತ್ವದಲ್ಲಿ ವೀರಪ್ಪನ್ ವಿರುದ್ಧ ನಡೆದಿದ್ದ ಕಾರ್ಯಾಚರಣೆಯಲ್ಲಿ ಸಿದ್ದರಾಜ ನಾಯಕ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಅವರ ತಲೆಗೆ ಏಳು ಗುಂಡುಗಳು ಹೊಕ್ಕಿದ್ದವು. ಶಸ್ತ್ರಚಿಕಿತ್ಸೆ ನಡೆಸಿ 4 ಗುಂಡುಗಳನ್ನು ಹೊರತೆಗೆಯಲಾಗಿತ್ತು. ಉಳಿದವುಗಳನ್ನು ತೆಗೆಯಲಾಗದೇ ಹಾಗೆಯೇ ಬಿಡಲಾಗಿತ್ತು. ನಂತರ, ಚೇತರಿಸಿಕೊಂಡ ಅವರು, ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು.

ADVERTISEMENT

ಕಳೆದ ವರ್ಷ ಪಟ್ಟಣದಲ್ಲಿ ಕೊರೊನಾ ಸೋಂಕಿನ ಪ್ರಕರಣ ವರದಿಯಾದ ಬಳಿಕ, ಸತತ ಮೂರು ತಿಂಗಳ ಕಾಲ ರಜೆ ಹಾಕದೇ ಕಾರ್ಯನಿರ್ವಹಿಸಿದ್ದ ಈ ‘ಕೊರೊನಾ ವಾರಿಯರ್’ಗೆ, ಹೂಮಳೆಗರೆದುಸಾರ್ವಜನಿಕರು ಅಭಿಮಾನ ವ್ಯಕ್ತಪಡಿಸಿದ್ದರು. ಹಲವು ಸಂಘ, ಸಂಸ್ಥೆಗಳು ಇವರನ್ನು ವಿಶೇಷವಾಗಿ ಗೌರವಿಸಿದ್ದವು.

ಫೆಬ್ರುವರಿಯಲ್ಲಿ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಅಮೃತಭೂಮಿಯಲ್ಲಿ ರೈತ ಸಂಘದ ವತಿಯಿಂದ ನಡೆದ ’ವಿಷಮುಕ್ತ ಕರ್ನಾಟಕ’ ಅಭಿಯಾನಲ್ಲಿ, ಇವರಿಗೆ ಪ್ರೊ.ಎಂಡಿಎನ್‌ ಪ್ರತಿಷ್ಠಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.

ಸಿದ್ದರಾಜ ಅವರ ನಿವೃತ್ತಿಗೆ 6 ದಿನಗಳಷ್ಟೇ ಬಾಕಿ ಇತ್ತು. ಮಧುಮೇಹದಿಂದ ಬಳಲುತ್ತಿದ್ದ ಇವರಿಗೆ ಮಂಗಳವಾರ ಮನೆಯಲ್ಲಿ ಹೃದಯಾಘಾತವಾಯಿತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಇವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮ ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.