ಚಾಮರಾಜನಗರ:ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ನಿರಾಕರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) ಕೋರ್ಸ್‌ನ ವಿದ್ಯಾರ್ಥಿಗಳು ಯಡಪುರದಲ್ಲಿರುವ ಕಾಲೇಜಿನಲ್ಲಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಪರೀಕ್ಷೆಗೆ ಶುಲ್ಕ ಪಾವತಿಸಲು ಶುಕ್ರವಾರ ಕಡೆಯ ದಿನ. ಕೆಲವು ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಕಚೇರಿಗೆ ತೆರಳಿ ಚಲನ್ ಕೇಳಿದ್ದಾರೆ. ಹಾಜರಾತಿ ಕಡಿಮೆ ಇರುವುದರಿಂದ ಚಲನ್ ನೀಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
‘ಕಾಲೇಜಿನಲ್ಲಿ 81 ಮಂದಿ ಪ್ಯಾರಾ ಮೆಡಿಕಲ್ ಕೋರ್ಸ್ ಮಾಡುತ್ತಿದ್ದೇವೆ. ಯಾವ ವಿದ್ಯಾರ್ಥಿಗೂ ಶೇ 70ರಷ್ಟು ಹಾಜರಾತಿ ಇಲ್ಲ ಎಂದು ಹೇಳುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ಇದೆ ಎಂದರೆ ಒಪ್ಪಬಹುದು. ಆದರೆ ಯಾರಿಗೂ ಇಲ್ಲ ಎಂದರೆ ಹೇಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೋಧಕರ ಕೊರತೆಯಿಂದ ಆರೇಳು ತಿಂಗಳುಗಳಿಂದ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳುವವರೂ ಇಲ್ಲ’ ಎಂದು ಆರೋಪಿಸಿದರು.
‘ಪ್ಯಾರಾ ಮೆಡಿಕಲ್ ಕೋರ್ಸ್ ಮಾಡುತ್ತಿರುವವರಿಗೆ ಹಾಸ್ಟೆಲ್ ಸೌಲಭ್ಯ ಇಲ್ಲ. ವಾಹನ ವ್ಯವಸ್ಥೆಯೂ ಇಲ್ಲ. ನಗರದಿಂದ ಏಳು ಕಿ.ಮೀ ದೂರದಿಂದ ಬರಬೇಕಾಗಿದೆ. ಉಪನ್ಯಾಸಕರೇ ತರಗತಿಗೆ ಬಾರದಿದ್ದರೆ ನಾವು ಏನು ಮಾಡಬೇಕು’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು
ಎಲ್ಲರಿಗೂ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ನೀಡಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ, ಕಾಲೇಜಿನ ಸಿಇಒ ಸಿ.ಎಲ್.ಆನಂದ್ ಅವರು ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಕಾಲೇಜಿನ ಪ್ರಾಂಶುಪಾಲ ಗಿರೀಶ್ ಅವರ ಜತೆ ಮಾತನಾಡಿ, ಶುಕ್ರವಾರ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದರು.
ಆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.