ADVERTISEMENT

ದ್ವಿತೀಯ ಪಿಯು: ಚಾಮರಾಜನಗರದಲ್ಲಿ ಫಲಿತಾಂಶ ಹೆಚ್ಚಿಸುವ ಗುರಿ

ಮಾರ್ಚ್‌ 9ರಿಂದ 29ರವರೆಗೆ ವಾರ್ಷಿಕ ಪರೀಕ್ಷೆ; ಸಿದ್ಧತೆಯಲ್ಲಿ ಅಧಿಕಾರಿಗಳು, ಉಪನ್ಯಾಸಕರು

ಸೂರ್ಯನಾರಾಯಣ ವಿ
Published 21 ಫೆಬ್ರುವರಿ 2023, 2:01 IST
Last Updated 21 ಫೆಬ್ರುವರಿ 2023, 2:01 IST
   

ಚಾಮರಾಜನಗರ: 2022–23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಮಾರ್ಚ್ 9ರಿಂದ 29ರವರೆಗೆ ಜಿಲ್ಲೆಯ 17 ಕೇಂದ್ರಗಳಲ್ಲಿ ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯು ಉತ್ತಮ ಫಲಿತಾಂಶ ಪಡೆಯಲು ಸಕಲ ಸಿದ್ಧತೆ ನಡೆಸಿದೆ.

ಈ ಬಾರಿಯ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ 10ಕ್ಕಿಂತ ಒಳಗಿನ ರ‍್ಯಾಂಕ್‌ ಪಡೆಯುವ ಗುರಿಯನ್ನು ಪಿಯು ಇಲಾಖೆಯ ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 24 ಸರ್ಕಾರಿ, ಏಳು ಅನುದಾನಿತ ಮತ್ತು 29 ಖಾಸಗಿ ಪಿಯು ಕಾಲೇಜುಗಳಿವೆ. ಈ ಸಾಲಿನಲ್ಲಿ 6,630 ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಲ್ಲಿ 2,531, ವಾಣಿಜ್ಯ ವಿಭಾಗದಲ್ಲಿ 2,377 ಹಾಗೂ ವಿಜ್ಞಾನ ವಿಭಾಗದಲ್ಲಿ 1,722 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ADVERTISEMENT

ಈ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (ಹಿಂದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ) ಎಸ್ಸೆಸ್ಸೆಲ್ಸಿ ‌ಪರೀಕ್ಷೆ ಮಾತ್ರವಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ.

ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲೂ ಬದಲಾವಣೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌ ಹಾವಳಿ ಇರಲಿಲ್ಲ. ಹಾಗಾಗಿ, ಪಠ್ಯದ ಬೋಧನೆ ಪೂರ್ಣ ಪ್ರಮಾಣದಲ್ಲಿ ಆಗಿದೆ. ಪೂರ್ವಸಿದ್ಧತಾ ಪರೀಕ್ಷೆಗಳು ಈಗಾಗಲೇ ಮುಗಿದಿದೆ. ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಅಂತಿಮ ಪ್ರಾಯೋಗಿಕ ಪರೀಕ್ಷೆಗಳೂ ಈ ತಿಂಗಳಾರಂಭದಲ್ಲಿ ನಡೆದಿದೆ.

ಫಲಿತಾಂಶ ಹೆಚ್ಚಳ ಗುರಿ: ಕಳೆದ ಸಾಲಿನಲ್ಲಿ (2021–22) ಜಿಲ್ಲೆಯು ಶೇ 63.02ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 18ನೇ ಸ್ಥಾನ ಗಳಿಸಿತ್ತು. ಅದರ ಹಿಂದಿನ ವರ್ಷ ಜಿಲ್ಲೆ 12ನೇ ಸ್ಥಾನದಲ್ಲಿತ್ತು.

‘ಉತ್ತಮ ಫಲಿತಾಂಶ ಪ‍ಡೆಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಪ್ರಾಂಶುಪಾಲರೊಂದಿಗೆ ಸಭೆ ನಡೆಸಲಾಗಿದೆ. ವಿಶೇಷ ತರಗತಿ ನಡೆಯುತ್ತಿವೆ. ಶೈಕ್ಷಣಿಕವಾಗಿ ಹಿಂದುಳಿದಿ ರುವ ವಿದ್ಯಾರ್ಥಿಗಳಿಗೆ ಹೆಚ್ಚು ಗಮನ ಹರಿಸಲಾಗುತ್ತಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ಸಿ.ಮಂಜುನಾಥ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಬರೆದಿದ್ದಾರೆ. ಇಲಾಖೆ ರೂಪಿಸಿರುವ ಬೋಧನಾ ಕ್ರಮದ ಮಾದರಿಯಲ್ಲೇ ಮಕ್ಕಳಿಗೆ ಪಠ್ಯ ಕಲಿಸಲಾಗಿದೆ. ಪದವಿ ಪೂರ್ವ ಕಾಲೇಜುಗಳಿಗೆ ನಿಯಮಿತವಾಗಿ ಭೇಟಿ ನೀಡಿ ಉಪನ್ಯಾಸಕರು, ಮಕ್ಕಳೊಂದಿಗೆ ಸಮಾಲೋಚನೆಯನ್ನೂ ನಡೆಸಲಾಗಿದೆ’ ಎಂದು ಹೇಳಿದರು.

ಇಂಗ್ಲಿಷ್‌ ಕಷ್ಟ: ‘ನಮ್ಮ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷಾ ವಿಷಯ ಸ್ವಲ್ಪ ಕಷ್ಟ ವಾಗುತ್ತಿದೆ. ಅದರ ಬಗ್ಗೆ ಹೆಚ್ಚು ಗಮನಕೊಟ್ಟಿದ್ದೇವೆ. ಉಪನ್ಯಾಸಕರ ಕೊರತೆ ಇರುವಲ್ಲೆಲ್ಲಾ ಅತಿಥಿ ಉಪ ನ್ಯಾಸಕರನ್ನು ನೇಮಕ ಮಾಡಿ, ವಿದ್ಯಾ ರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಮಂಜುನಾಥ ಪ್ರಸನ್ನ ವಿವರಿಸಿದರು.

ಪ್ರಥಮ ಪಿಯು ಪರೀಕ್ಷೆ: ಈ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮಂಗಳವಾರ (ಫೆ.21) ಆರಂಭವಾಗಲಿದೆ. ಮಾರ್ಚ್‌ 2ರವರೆಗೆ ನಡೆಯಲಿದೆ.

3,678 ಗಂಡು ಮಕ್ಕಳು, 4,247 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 7,925 ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.