ADVERTISEMENT

ಹನೂರು: ನಾದ ಸ್ವರದಲ್ಲಿ ಸೈ, ಗಾಯನದಲ್ಲಿ ಎತ್ತಿದ ಕೈ

ತಂಡ ಕಟ್ಟಿ ಯುವಕರಿಗೆ ಅವಕಾಶ ಕೊಡುತ್ತಿರುವ ಸಿ.ಕೆ.ಕೃಷ್ಣಕುಮಾರ್‌

ಬಿ.ಬಸವರಾಜು
Published 18 ಅಕ್ಟೋಬರ್ 2022, 19:30 IST
Last Updated 18 ಅಕ್ಟೋಬರ್ 2022, 19:30 IST
ನಟ ಶಿವಕುಮಾರ್‌ ಹಾಗೂ ನಿರ್ದೇಶಕ ಎಸ್‌.ಮಹೇಂದರ್‌ ಅವರಿಂದ ಕೃಷ್ಣಕುಮಾರ್‌ ‘ಕನ್ನಡ ಸೇವಾ ರತ್ನ ಪ್ರಶಸ್ತಿ’ ಸ್ವೀಕರಿಸಿದ ಸಂಭ್ರಮದ ಕ್ಷಣ
ನಟ ಶಿವಕುಮಾರ್‌ ಹಾಗೂ ನಿರ್ದೇಶಕ ಎಸ್‌.ಮಹೇಂದರ್‌ ಅವರಿಂದ ಕೃಷ್ಣಕುಮಾರ್‌ ‘ಕನ್ನಡ ಸೇವಾ ರತ್ನ ಪ್ರಶಸ್ತಿ’ ಸ್ವೀಕರಿಸಿದ ಸಂಭ್ರಮದ ಕ್ಷಣ   

ಹನೂರು: ಕಲಾ ಸೇವೆಯಲ್ಲಿ ತೊಡಗಿದ್ದ ತಂದೆ ಹಾಗೂ ಅಣ್ಣನನ್ನು ಅನುಕರಣೆ ಮಾಡುತ್ತಾ ಬೆಳೆದ ತಾಲ್ಲೂಕಿನ ಮಣಗಳ್ಳಿಯ ಸಿ.ಕೆ.ಕೃಷ್ಣಕುಮಾರ್ ಜಿಲ್ಲೆಯ ಉತ್ತಮ ಗಾಯಕರಲ್ಲೊಬ್ಬರು. ದೇಸಿ ವಾದ್ಯ ನಾದಸ್ವರ ನುಡಿಸುವುದರಲ್ಲೂ ಪರಿಣತರು.

ಗಾಯನವನ್ನು ಹೆಚ್ಚು ಇಷ್ಟ ಪಡುವ ಕೃಷ್ಣಕುಮಾರ್‌ ‘ರಾಜ್‌ ಮೆಲೋಡಿಯಸ್‌’ ಎಂಬ ತಂಡ ಕಟ್ಟಿಕೊಂಡಿದ್ದಾರೆ.ಸಂಗೀತ ಮನೆತನದಿಂದ ಬ‌ಂದಿರುವ ಇವರು ಇದೀಗ ಬೇಡಿಕೆಯ ಗಾಯಕ. ರಾಷ್ಟ್ರ ನಾಯಕರ ಜನ್ಮ ದಿನಾಚರಣೆಯಿರಲಿ, ಸರ್ಕಾರಿ ಕಾರ್ಯಕ್ರಮಗಳಿರಲಿ ಇವರಿಗೆ ಆಮಂತ್ರಣ ಇದ್ದೇ ಇರುತ್ತದೆ.ತಾಲ್ಲೂಕಿನಲ್ಲಿ ಇರುವ ಪ್ರತಿಭಾನ್ವಿತ ಗಾಯಕರನ್ನು ಗುರುತಿಸಿ ತಮ್ಮ ತಂಡದಲ್ಲಿ ಅವಕಾಶ ಕಲ್ಪಿಸಿ ಕೊಡುವ ಮೂಲಕ ಮೂಲ ದೇಶಿ ಗಾಯಕರನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.

ಕಲೆಯ ಆಸಕ್ತಿ ಕೃಷ್ಣಕುಮಾರ್‌ ಅವರಿಗೆ ಬಾಲ್ಯದಲ್ಲೇ ಇತ್ತು. ಅವರ ತಂದೆ ಚಿಕ್ಕಕರುಗಯ್ಯ ಪ್ರಸಿದ್ಧ ನಾದಸ್ವರ ವಾದಕರು.

ADVERTISEMENT

ಪೌರಾಣಿಕ ನಾಟಕಗಳಿಗೆ ನಾದಸ್ವರ ನುಡಿಸುವ ಮೂಲಕ ಖ್ಯಾತಿ ಗಳಿಸಿದ್ದ ಚಿಕ್ಕಕರುಗಯ್ಯ, ಡಾ.ರಾಜ್ ಕುಮಾರ್ ತಂದೆ ಪುಟ್ಟಸ್ವಾಮಿ ಅವರೊಂದಿಗೆ ಕೆಲಸ ಮಾಡಿದ್ದಾರೆ.

ತಂದೆಯ ಮರಣಾನಂತರ ಮಕ್ಕಳಾದ ಸುಂದರಾಜು, ಸಿ.ಕೆ.ಕೃಷ್ಣಕುಮಾರ್ ಅವರು ಕಲೆಯನ್ನು ಮುಂದುವರೆಸಿಕೊಂಡು ಬಂದರು. ನಾಲ್ಕೈದು ವರ್ಷಗಳ ಹಿಂದೆ ಸುಂದರಾಜು ಮೃತಪಟ್ಟಿದ್ದಾರೆ.

ಪದವಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲೇ ಕಲೆಯತ್ತ ವಾಲಿದ ಕೃಷ್ಣಕುಮಾರ್‌, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ತಂದೆ ಹಾಗೂ ಅಣ್ಣನ ಜತೆಯಲ್ಲಿ ನಾದಸ್ವರ ನುಡಿಸಲು ಜಿಲ್ಲೆ, ಹೊರ ಜಿಲ್ಲೆಗಳಿಗೆ ಹೋಗುತ್ತಿದ್ದರು. 15 ವರ್ಷ ನಾದಸ್ವರ ನುಡಿಸಿದ ಬಳಿಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು.

‘ಮದುವೆ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಕಲ್ಯಾಣ ಮಂಟಪವೊಂದರಲ್ಲಿ ನಾವು ಪರಿಶಿಷ್ಟ ಜಾತಿ ಎಂದು ತಿಳಿದು ನಮ್ಮನ್ನು ಊಟದ ಪಂಕ್ತಿಯಿಂದ ಏಳಿಸಿದರು. ಇದು ಅಣ್ಣನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಅಂದಿನಿಂದ, ‘ನೀನು ನಾದಸ್ವರ ನುಡಿಸುವುದನ್ನು ಬಿಟ್ಟು ಬೇರೆ ಯಾವುದಾರೂ ವೃತ್ತಿ ಮಾಡು’ ಎಂದು ಅಣ್ಣ ಹೇಳಿದರು. ಬಾಲ್ಯದಿಂದ ನಾದಸ್ವರ ನುಡಿಸಿಕೊಂಡು ಬಂದು ಈಗ ಯಾವ ವೃತ್ತಿ ಮಾಡುವುದು ಎಂದು ಯೋಚಿಸುತ್ತಿದ್ದಾಗ ಗಾಯಕನಾಗುವ ಆಲೋಚನೆ ಹೊಳೆದು ಈ ಕ್ಷೇತ್ರಕ್ಕೆ ಬಂದೆ’ ಎಂದು ಗಾಯನ ಕ್ಷೇತ್ರ ಆಯ್ಕೆ ಮಾಡಿಕೊಂಡ ಕಾರಣವನ್ನು ಕೃಷ್ಣಕುಮಾರ್ ವಿವರಿಸಿದರು.

ಜಾನಪದ ಭಕ್ತಿಗೀತೆಗಳಿಗೆ ಧ್ವನಿ

ಜಿಲ್ಲೆಯ ಆರಾಧ್ಯ ದೈವ ಮಲೆಮಹದೇಶ್ವರ ಸ್ವಾಮಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಗೀತೆಗಳನ್ನು ಕೃಷ್ಣಕುಮಾರ್‌ ಹಾಡಿದ್ದಾರೆ. ಅದರ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಸಿದ್ದಪ್ಪಾಜಿ, ಮಂಟೇಸ್ವಾಮಿ ಬಗ್ಗೆಯೂ ಭಕ್ತಿಗೀತೆಗಳನ್ನು ಹಾಡುವ ಮೂಲಕ ಜಾನಪದ ಗಾಯಕರಾಗಿಯೂ ಜನಮನ್ನಣೆ ಪಡೆದಿದ್ದಾರೆ.

ಎರಡು ದಶಕಗಳಿಂದ ಗಾಯನದಲ್ಲಿ ತೊಡಗಿಸಿಕೊಂಡಿರುವ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಪ್ರೆಸ್ ಕೌನ್ಸಿಲ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳು 2022ನೇ ಸಾಲಿನ ‘ಕನ್ನಡ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿವೆ. ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಕೂಡ ‘ಸಾಧಕ’ ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.