ADVERTISEMENT

ಎಂಎಸ್ಸಿ ಪದವಿಧರನ ಸಮಗ್ರ ಕೃಷಿ ‘ಅಕ್ಷಯ’

ಕೆಸ್ತೂರು ಗ್ರಾಮದಲ್ಲಿ ಅಪ್ಪ-ಮಕ್ಕಳ ಕೃಷಿ ಖುಷಿ

ನಾ.ಮಂಜುನಾಥ ಸ್ವಾಮಿ
Published 18 ನವೆಂಬರ್ 2022, 5:29 IST
Last Updated 18 ನವೆಂಬರ್ 2022, 5:29 IST
ಸುಗಂಧರಾಜ ಹೂವಿನ ತೋಟದಲ್ಲಿ ಅಕ್ಷಯ್‌ ಕುಮಾರ್
ಸುಗಂಧರಾಜ ಹೂವಿನ ತೋಟದಲ್ಲಿ ಅಕ್ಷಯ್‌ ಕುಮಾರ್   

ಯಳಂದೂರು: ‘ಹದವರಿತ ಬೇಸಾಯ, ಒಗ್ಗಟ್ಟಿನ ದುಡಿಮೆ, ಯಾಂತ್ರೀಕರಣ, ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರ ಇದ್ದರೆ ಸಮಗ್ರ ಕೃಷಿಯಲ್ಲಿ ಹತ್ತಾರು ಬೆಳೆ ವೈವಿಧ್ಯ ಕಾಣಬಹುದು ಮತ್ತು ಕೃಷಿಕರ ಉತ್ಪನ್ನಗಳು ಲಾಭದತ್ತ ಮುಖ ಮಾಡುವುದನ್ನು ದಾಖಲಿಸಬಹುದು’ ಎಂಬುದನ್ನು ಕೆಸ್ತೂರು ಗ್ರಾಮದ ಅಪ್ಪ ಮಕ್ಕಳು ತೋರಿಸಿಕೊಟ್ಟಿದ್ದಾರೆ.

ತಾಲ್ಲೂಕಿನ ಕೆಸ್ತೂರು ಗ್ರಾಮದ ರೈತ ಕುಟುಂಬದ ನಾಗರಾಜಪ್ಪ ಮತ್ತು ಕೆ.ಎನ್‌.ಅಕ್ಷಯ್ ಕುಮಾರ್‌ ನಾಲ್ಕು ಎಕರೆ ಭೂಮಿಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿದ್ದಾರೆ.

ಕಬ್ಬು, ಚೆಂಡು ಹೂ , ಸೇವಂತಿಗೆ, ಸುಗಂಧರಾಜ, ಅಡಿಕೆ, ತೆಂಗು, ಟೊಮೆಟೊ, ಸೊಪ್ಪು, ತರಕಾರಿ, ಹಣ್ಣಿನ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆದು, ಬೆಲೆ ಬೇಡಿಕೆಗಳ ವ್ಯತ್ಯಾಸದಿಂದ ಉಂಟಾಗುವ ನಷ್ಟವನ್ನು ತಡೆದು, ಆರ್ಥಿಕ ಸದೃಢದತ್ತ ಮುಖ ಮಾಡಿ ಯಶಸ್ವಿಯಾಗಿದ್ದಾರೆ.

ADVERTISEMENT

ವೆಚ್ಚ ತಗ್ಗಿಸಲು ಯಾಂತ್ರೀಕರಣ: ‘ಆರಂಭದಲ್ಲಿ ವಾಣಿಜ್ಯ ಬೆಳೆ ಕಬ್ಬು ಬೆಳೆಯಲು ಆದ್ಯತೆ ನೀಡಿದ್ದೆವು. ಹೆಚ್ಚು ರಾಸಾಯನಿಕ ಗೊಬ್ಬರ ಪೂರೈಸಬೇಕಿತ್ತು. ಈಗ ಅದೇ ತಾಕಿನಲ್ಲಿ ಹತ್ತಾರು ಬೆಳೆಗಳನ್ನು ಬೆಳೆಯುತ್ತಿದ್ದು, ಹಂತ ಹಂತವಾಗಿ ರಸಗೊಬ್ಬರ ತಗ್ಗಿಸಿ, ಹಟ್ಟಿ ಗೊಬ್ಬರದ ಪ್ರಮಾಣವನ್ನು ಹೆಚ್ಚಿಸಿದ್ದೇವೆ. ಇದರಿಂದ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಾಗಿ ತೋಟಗಾರಿಕಾ ಬೆಳೆಗಳು ಸಮೃದ್ಧವಾಗಿ ಅರಳಿವೆ. ಹಣ್ಣುಗಳನ್ನು ತಿನ್ನಲು ಪಕ್ಷಿಗಳು ಬರುತ್ತಿದ್ದು, ಇವು ವಿಸರ್ಜಿಸುವ ಹಿಕ್ಕೆಗಳು ಮಣ್ಣಿನ ಕಸುವು ಹೆಚ್ಚಿಸಲು ಸಹಾಯಕವಾಗಿವೆ. ತೋಟದ ಸುತ್ತಲೂ ಗಿಡಗಳನ್ನು ನೆಡಲು, ಕಳೆ ತೆಗೆಯಲು, ಗುಂಡಿ ತೋಡಲು ಯಂತ್ರಗಳನ್ನು ಬಳಸುವುದರಿಂದ ಶ್ರಮದ ವೆಚ್ಚ ತಗ್ಗಿದೆ’ ಎಂದು ನಾಗರಾಜಪ್ಪ ಹೇಳಿದರು.

‘ಸಮಗ್ರ ಸಾಗುವಳಿಯನ್ನು ಸರಳವಾಗಿ, ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬೇಕು. ಇದರಿಂದ ಬಂಡವಾಳ ಮತ್ತು ಶ್ರಮದ ಮೇಲಿನ ಅತಿಯಾದ ವೆಚ್ಚವನ್ನು ತಗ್ಗಿಸಬಹುದು. ಕಳೆ ಹೆಚ್ಚಿರುವಲ್ಲಿ ಸೊಪ್ಪು ತರಕಾರಿ, ಬಾಳೆ ತಾಕಿನ ನಡುವೆ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ನಿರ್ವಹಣಾ ವೆಚ್ಚವನ್ನು ತಗ್ಗಿಸಬಹುದು. ಕೃಷಿಕರು ಈ ಬಗ್ಗೆ ಚಿಂತನೆ ನಡೆಸಿದರೆ ನಷ್ಟ ತಪ್ಪಿಸಬಹುದು’ ಎನ್ನುತ್ತಾರೆ ಅವರು.

ತಾಲ್ಲೂಕು ಕೃಷಿಕ ಪ್ರಶಸ್ತಿ ವಿಜೇತ

ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕೆ.ಎನ್.ಅಕ್ಷಯ್ ಕುಮಾರ್‌, ಎಂಎಸ್ಸಿ ಪದವೀಧರ. ಕೋವಿಡ್ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯನ್ನು ಪಡೆದಿದ್ದಾರೆ. ಉಳಿದ ಸಮಯದಲ್ಲಿ ಅಪ್ಪನ ಜೊತೆ ಕೃಷಿಯಲ್ಲಿ ತೊಡಗಿದ್ದಾರೆ, ಕಬ್ಬು. ಬಾಳೆ ನಡುವೆ ಮನೆ ಬಳಕೆಗೆ ಸೊಪ್ಪು, ಕಾಯಿಪಲ್ಯ ಕೈತೋಟ ಮಾಡಿದ್ದಾರೆ. ಸೇಲಂ ರಸಬಾಳೆ, ನೇಂದ್ರಕ್ಕೂ ಆದ್ಯತೆ ನೀಡಿದ್ದಾರೆ. ಪ್ರತಿ ದಿನದ ಆದಾಯಕ್ಕೆ ನಾಟಿ ಹಾಗೂ ಹೈಬ್ರಿಡ್ ಸುಗಂಧರಾಜ ಹೂ ಬೆಳೆದು ಮಾರಾಟ ಮಾಡುತ್ತಿದ್ದಾರೆ.

‘ಕಾಲುವೆ ಮತ್ತು ಕೊಳವೆ ಬಾವಿಯ ನೀರಿನ ಹಿತಮಿತ ಬಳಕೆ, ಇಂಗು ಗುಂಡಿ ನಿರ್ಮಾಣ, ಕಳೆ ಗಿಡಗಳ ಕಾಂಪೋಸ್ಟ್ ತಯಾರಿ, ಹನಿ ನೀರಾವರಿ ಪದ್ಧತಿ ಬಳಸಿಕೊಂಡು ಹೆಚ್ಚಿನ ಒಳಸರಿಯನ್ನು ತಪ್ಪಿಸಿದ್ದಾರೆ. ಇದು ಲಾಭದ ಏರಿಕೆಗೂ ಕಾರಣವಾಗಿದೆ. ಏಕ ಬೆಳೆ ಪದ್ಧತಿಯಿಂದ ಉಂಟಾಗುವ ನಷ್ಟವನ್ನು, ಮಿಶ್ರ ಕೃಷಿಯಲ್ಲಿ ಪಡೆಯುವ ಇರಾದೆಯೂ ಸಮಗ್ರ ಬೇಸಾಯದ ಭಾಗವಾಗಿದೆ’ ಎಂದು ಅಕ್ಷಯ್ ಖುಷಿಯಿಂದ ಹೇಳುತ್ತಾರೆ.

ಹೊಸ ಹೊಸ ಪ್ರಯೋಗಗಳ ಮೂಲಕ ಸಾಗುವಳಿ ಮಾಡುತ್ತಿರುವ ಯುವ ಕೃಷಿಕ ಅಕ್ಷಯ್, ಈ ಬಾರಿ ಕೃಷಿ ಇಲಾಖೆ ನೀಡುವ ಉತ್ತಮ ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.