ADVERTISEMENT

ಕೊಳ್ಳೇಗಾಲ: ಇತಿಹಾಸ ಸಾರುವ ಹಳೆ ಅಣಗಳ್ಳಿ

ಕಾವೇರಿ ತೀರದ ಹಳೆ ಅಣಗಳ್ಳಿಯಲ್ಲಿವೆ ಶಾಸನ, ವೀರಗಲ್ಲು, ರವಳೇಶ್ವರ ವಿಗ್ರಹ

ಅವಿನ್ ಪ್ರಕಾಶ್
Published 28 ಮೇ 2022, 19:31 IST
Last Updated 28 ಮೇ 2022, 19:31 IST
ಕೊಳ್ಳೇಗಾಲ ತಾಲ್ಲೂಕಿನ ಹಳೆ ಅಣಗಳ್ಳಿ ಪತ್ತೆಯಾಗಿರುವ ರವಳೇಶ್ವರ (ಬಲ) ಹಾಗೂ ವೀರಗಲ್ಲು
ಕೊಳ್ಳೇಗಾಲ ತಾಲ್ಲೂಕಿನ ಹಳೆ ಅಣಗಳ್ಳಿ ಪತ್ತೆಯಾಗಿರುವ ರವಳೇಶ್ವರ (ಬಲ) ಹಾಗೂ ವೀರಗಲ್ಲು   

ಕೊಳ್ಳೇಗಾಲ: ತಾಲ್ಲೂಕಿನ ಕಾವೇರಿ ನದಿ ತೀರದಲ್ಲಿರುವ ಹಳೆ ಅಣಗಳ್ಳಿ ಗ್ರಾಮ ರಾಜ್ಯದ ಇತಿಹಾಸ, ಪರಂಪರೆಯನ್ನು ಸಾರುವ ಊರು.

ಹಿಂದಿನ ಕಾಲದ ಹಲವು ಅವಶೇಷಗಳು, ಶಾಸನಗಳು, ವೀರಗಲ್ಲುಗಳು ಇಲ್ಲಿ ಪತ್ತೆಯಾಗಿವೆ. ಆದರೆ, ಇವುಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಹುಡುಕಾಡಿದರೆ ಇನ್ನೂ ಹಲವು ಶಾಸನ, ವೀರಗಲ್ಲುಗಳು ಪತ್ತೆಯಾಗಬಹುದು ಎಂದು ಹೇಳುತ್ತಾರೆ ಸ್ಥಳೀಯರು.

ಈ ಗ್ರಾಮದಲ್ಲಿ ರವಳೇಶ್ವರನ (ರಾವಣ) ಪ್ರತಿಮೆ ಇದೆ. ಗ್ರಾಮದವರು ರವಳೇಶ್ವರ ವಿಗ್ರಹಕ್ಕೆ ಪೂಜೆಯನ್ನೂ ಮಾಡುತ್ತಿದ್ದಾರೆ. ಈಗ ಪೂಜೆ ಮಾಡುವ ಕೊಠಡಿ ದುರಸ್ತಿಯಲ್ಲಿದೆ.ಗ್ರಾಮದ ಮಧ್ಯಭಾಗದಲ್ಲಿರುವ ರವಳೇಶ್ವರನ ಪ್ರತಿಮೆ 3 ಅಡಿ ಎತ್ತರ, 3 ಅಡಿ ಅಗಲವಿದೆ. 6 ಕೈಗಳು ಹಾಗೂ 10 ತಲೆಗಳನ್ನು ಹೊಂದಿರುವ ವಿಶಿಷ್ಟವಾದ ಶಿಲ್ಪ ಇದು. ರವಳೇಶ್ವರ ಎಂದರೆ ರಾವಣ. ಕೈಯಲ್ಲಿ ಕತ್ತಿ, ಬಿಲ್ಲು ಬಾಣ, ಗದೆ, ಸೊಂಟದಲ್ಲಿ ಕತ್ತಿ, ಕುಡುಗೂಲಿನ ಕೆತ್ತನೆಯನ್ನು ಹೊಂದಿರುವ ಈ ಪ್ರತಿಮೆ, ಯುದ್ಧಕ್ಕೆ ಹೊರಟಿರುವ ರಾವಣನ್ನು ಬಿಂಬಿಸುತ್ತದೆ.

ADVERTISEMENT

‘ಈ ರವಳೇಶ್ವರ ಕಲ್ಲುಗಳು ಕೊಳ್ಳೇಗಾಲದ ಕಾವೇರಿ ರಸ್ತೆಯಲ್ಲಿ, ಮೋಳೆ ಬಡಾವಣೆಯಲ್ಲಿ ಹಾಗೂ ವಿವಿಧ ಗ್ರಾಮಗಳಲ್ಲಿ ಕಂಡು ಬರುತ್ತವೆ. ರವಳೇಶ್ವರ ಎಂಬ ಒಕ್ಕಲಿನವರು ಈ ಶಿಲ್ಪವನ್ನು ಪೂಜೆ ಮಾಡಿ ರವಳೇಶ್ವರ ದೇವರೆಂದು ಕರೆಯುತ್ತಾರೆ. ಈ ಒಕ್ಕಲಿನವರು ರಾವಣ ವಂಶಸ್ಥರು ಎಂದು ಈ ಭಾಗದಲ್ಲಿ ನಾವು ಕರೆಯುತ್ತೇವೆ’ ಎಂದು ಗ್ರಾಮದ ಬಸವರಾಜು ಅವರು ಹೇಳಿದರು.

ಇಲ್ಲಿ ವೀರಗಲ್ಲು ಕೂಡ ಸಿಕ್ಕಿದ್ದು, ರವಳೇಶ್ವರನ ಪಕ್ಕದಲ್ಲೇ ಇದೆ. ಈ ಕಲ್ಲಿನಲ್ಲಿ ಮೂರು ಹಂತದಲ್ಲಿ ಕೆತ್ತನೆಗಳಿವೆ. ಕೆಳ ಭಾಗದಲ್ಲಿ ವೀರರು ಯುದ್ಧ ಮಾಡುತ್ತಿರುವ ಕೆತ್ತನೆ ಇದೆ. ಮಧ್ಯ ಭಾಗದಲ್ಲಿ ನರ್ತಕಿಯರು ಯುದ್ಧದಲ್ಲಿ ಮಡಿದ ವೀರರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ಕೆತ್ತನೆಗಳಿವೆ. ಮೇಲ್ಬಾಗದಲ್ಲಿ ನಂದಿ, ಶಿವಲಿಂಗದ ಕೆತ್ತನೆ ಹಾಗೂ ಭಕ್ತರು ಶಿವನನ್ನು ಪೂಜಿಸುವ ಕೆತ್ತನೆಗಳಿವೆ. ಈ ವೀರಗಲ್ಲು ಶೈವ ಪಂಥಕ್ಕೆ ಸೇರಿದೆ ಎಂದು ತಜ್ಞರು ಹೇಳುತ್ತಾರೆ.

ಶಿಲಾ ಶಾಸನ ಕೂಡ ಇಲ್ಲಿ ಪತ್ತೆಯಾಗಿದ್ದು, ಇದು ಕ್ರಿ.ಶ 13ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಹಳೆ ಗನ್ನಡದಲ್ಲಿದೆ. ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಈ ಶಾಸನದ ಬಗ್ಗೆ ಅಧ್ಯಯನವೂ ನಡೆದಿಲ್ಲ. ಹೆಚ್ಚು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದು ಹೇಳುತ್ತಾರೆ ಸ್ಥಳೀಯರು.

‘ಹೆಚ್ಚಿನ ಅಧ್ಯಯನ ಅಗತ್ಯ’

‘ಕೊಳ್ಳೇಗಾಲ ಭಾಗದಲ್ಲಿ ಹಿಂದಿನ ರಾಜರ ಕಾಲದ ಅನೇಕ ಅವಶೇಷಗಳು, ಶಿಲ್ಪಗಳು, ವೀರಗಲ್ಲುಗಳು, ಶಾಸನಗಳು ಇವೆ. ಆದರೆ, ಅವು ಬೆಳಕಿಗೆ ಬಂದಿಲ್ಲ. ಹಳೆ ಅಣಗಳ್ಳಿ ಗ್ರಾಮವು ರಾಜರ ಆಳ್ವಿಕೆ ಹೊಂದಿದ ಗ್ರಾಮ. ಕಾವೇರಿ ನದಿ ತೀರದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರೆ ಇತಿಹಾಸದ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬಹುದು. ರವಳೇಶ್ವರನ ಬಗ್ಗೆಯೇ ಅಧ್ಯಯನ ನಡೆಸುವ ಅಗತ್ಯವಿದೆ’ ಎಂದು ಸಾಹಿತಿ, ಜಾನಪದ ತಜ್ಞ ಮಹಾದೇವ ಶಂಕನಪುರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಗ್ರಾಮದಲ್ಲಿ ಪುರಾತನ ಕಾಲಕ್ಕೆ ಸಂಬಂಧಿಸಿದ ಕಲ್ಲುಗಳಿವೆ. ಕೆಲವು ಕಲ್ಲುಗಳು ಪ್ರವಾಹದ ಸಂದರ್ಭದಲ್ಲಿ ನಾಪತ್ತೆಯಾಗಿವೆ
- ಪ್ರಸನ್ನ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.