ADVERTISEMENT

ಸಮಸ್ಯೆಗಳ ಹೊದ್ದು ಮಲಗಿದ 16ನೇ ವಾರ್ಡ್‌

ಕೊಳ್ಳೇಗಾಲ: ನಗರದ ಹೃದಯಭಾಗದಲ್ಲಿರುವ 16ನೇ ವಾರ್ಡ್‌ನಲ್ಲಿ ಮೂಲಸೌಕರ್ಯ

ಅವಿನ್ ಪ್ರಕಾಶ್
Published 21 ಅಕ್ಟೋಬರ್ 2022, 6:38 IST
Last Updated 21 ಅಕ್ಟೋಬರ್ 2022, 6:38 IST
16ನೇ ವಾರ್ಡ್‌ನ ರಸ್ತೆ ಬದಿಯಲ್ಲೇ ಕಸ ಹಾಕಿರುವುದು
16ನೇ ವಾರ್ಡ್‌ನ ರಸ್ತೆ ಬದಿಯಲ್ಲೇ ಕಸ ಹಾಕಿರುವುದು   

ಕೊಳ್ಳೇಗಾಲ: ಇಲ್ಲಿನ ನಗರಸಭೆಯ 16ನೇ ವಾರ್ಡ್‌ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದು ಮಲಗಿದೆ. ರಸ್ತೆ, ಚರಂಡಿ, ಕಸದ ರಾಶಿ, ಕುಡಿಯುವ ನೀರಿನ ಸಮಸ್ಯೆ ಇಲ್ಲಿನ ಜನರನ್ನು ಬಾಧಿಸುತ್ತಿದೆ.

ನಗರದ ಹೃದಯ ಭಾಗದಲ್ಲೇ ಈ ವಾರ್ಡ್‌ ಇದೆ. ಐದು ಬ್ಯಾಂಕ್‌ಗಳು, ಎಂಟು ಸರ್ಕಾರಿ ಕಚೇರಿಗಳು, ಮೂರು ಕಲ್ಯಾಣ ಮಂಟಪಗಳು, ಶಾಲಾ ಕಾಲೇಜುಗಳು, ಹೋಟೆಲ್‍ಗಳನ್ನು ಹೊಂದಿರುವ ವಹಿವಾಟು ಕೇಂದ್ರಿತ ವಾರ್ಡ್‌ ಇದು.

‘ಇಲ್ಲಿ ಆರ್ಯವೈಷ್ಯ, ಬ್ರಾಹ್ಮಣ, ಲಿಂಗಾಯತರು, ಗೌಡರು, ಕುರುಬರು, ತಮಿಳರು, ಸೇರಿದಂತೆ 1,200 ಜನಸಂಖ್ಯೆ ಇದೆ. 470ಕ್ಕೂ ಕುಟುಂಬಗಳಿವೆ. ಆರ್ಥಿಕವಾಗಿ ಸಬಲವಾಗಿರುವವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಣಿಜ್ಯ ವಹಿವಾಟು ಇಲ್ಲಿ ಹೆಚ್ಚಿದೆ. ನಗರಸಭೆಗೆ ಉತ್ತಮ ಆದಾಯವೂ ಇಲ್ಲಿಂದ ಬರುತ್ತದೆ. ಇಲ್ಲಿಯೇ ಇಷ್ಟು ಸಮಸ್ಯೆಗಳಿದ್ದರೆ, ಬೇರೆ ಬಡಾವಣೆಗಳ ಪರಿಸ್ಥಿತಿ ಹೇಗಿರಬಹುದು’ ಎಂದು ಸ್ಥಳೀಯ ನಿವಾಸಿ ಮಹೇಶ್ ಪ್ರಶ್ನಿಸಿದರು.

ADVERTISEMENT

ಪೌರ ಕಾರ್ಮಿಕರ ಸಮಸ್ಯೆ: ವಾರ್ಡ್‌ನಲ್ಲಿ ಕಸ ವಿಲೇವಾರಿ ವೈಜ್ಞಾನಿಕವಾಗಿ ಆಗುತ್ತಿಲ್ಲ. ಕಸ ಎಲ್ಲೆಂದಿರಲ್ಲಿ ಬಿದ್ದಿರುತ್ತದೆ.ಪ್ರತಿಯೊಂದು ರಸ್ತೆ ತಿರುವಿನಲ್ಲೂ ಕಸದ ರಾಶಿ ಕಂಡು ಬರುತ್ತದೆ.

ಚರಂಡಿಗಳು ಕಟ್ಟಿಕೊಂಡಿದ್ದು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿ ಸ್ವಚ್ಛತೆ ನಿಯಮಿತವಾಗಿ ನಡೆಯುತ್ತಿಲ್ಲ. ಇಡೀ ವಾರ್ಡ್‌ಗೆ ಒಬ್ಬರೇ ಪೌರ ಕಾರ್ಮಿಕರಿದ್ದಾರೆ.

‘ಪೌರಕಾರ್ಮಿಕರ ಸಮಸ್ಯೆ ಇದೆ. ಹಾಗಾಗಿ ಕಸವನ್ನು ಸರಿಯಾಗಿ ತೆಗೆಯಲು ಆಗುವುದಿಲ್ಲ. ನಗರಸಭೆ ಎಷ್ಟೇ ಹೇಳಿದರೂ ಆಯುಕ್ತರು ಇದರ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ನಗರಸಭೆ ಸದಸ್ಯೆ ಸಿರೀಶ ಸತೀಶ್ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ: ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ನೀರು ಸರಿಯಾಗಿ ಬರುವುದಿಲ್ಲ. ಬಂದರೂ 30 ನಿಮಿಷ ಮಾತ್ರ ಬರುತ್ತದೆ. ಹಾಗಾಗಿ, ನೀರಿಗೆ ಬಹಳ ತೊಂದರೆಯಾಗುತ್ತಿದೆ. ವಾರ್ಡ್‌ನಲ್ಲಿ ನೀರನ್ನು ಬೇರೆ ಕಡೆ ತರುತ್ತಾರೆ. ಇಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇದೆ. ತಿಂಗಳಿಗೆ 10ಕ್ಕೂ ಹೆಚ್ಚು ಬಾರಿ ಕೆಟ್ಟು ನಿಲ್ಲುತ್ತದೆ.

‘ಬಡಾವಣೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಿತ್ಯವೂ ತೊಂದರೆಯಾಗುತ್ತಿದೆ. ಕಸದ ರಾಶಿಗಳು ರಸ್ತೆಯ ಅಂಚಿನಲ್ಲಿ ಬಿದ್ದಿರುತ್ತದೆ. ಜನರಿಗೆ ಸೌಲಭ್ಯ ಕಲ್ಪಿಸಲು ನಗರಸಭೆ ಮುಂದಾಬೇಕು’ ಎಂದು ನಿವಾಸಿ ಮೋಹನ್‌ ಕುಮಾರ್‌ ಒತ್ತಾಯಿಸಿದರು.

‘ಮೊದಲಿನ ರಸ್ತೆ ಚೆನ್ನಾಗಿತ್ತು’

ಬಡಾವಣೆಯ ರಸ್ತೆಗಳು ಮೊದಲು ಚೆನ್ನಾಗಿದ್ದವು. ಆದರೆ 24x7 ಶುದ್ದ ಕುಡಿಯುವ ನೀರಿನ ಪೈಪ್‌ಲೈನ್‌ ಹಾಗೂ ಒಳಚರಂಡಿ ನಿರ್ಮಾಣಕ್ಕಾಗಿ ನೆಲ ಅಗೆದ ನಂತರ ರಸ್ತೆ ಹಾಳಾಗಿದೆ.

‘ಮಳೆ ಬಂದರೆ ಸಾಕು, ಕೆಲವು ರಸ್ತೆಗಳಲ್ಲಿ ನೀರು ಕೆರೆಯಂತೆ ನಿಲ್ಲುತ್ತದೆ. ಚರಂಡಿಗಳಲ್ಲಿ ಹೂಳು ತೆಗೆಯದ ಕಾರಣ ಮಳೆಗೆ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತದೆ’ ಎಂದು ನಿವಾಸಿ ಲಕ್ಷ್ಮಿ ದೂರಿದರು.

-ಸಿರೀಶ ಸತೀಶ್, ವಾರ್ಡ್‌ ಸದಸ್ಯೆ

16ನೇ ವಾರ್ಡ್‌ಗೆ ಭೇಟಿ ನೀಡಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು. ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಲಾಗುವುದು

- ನಂಜುಂಡಸ್ವಾಮಿ, ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.