ADVERTISEMENT

ಮಕ್ಕಳ ಮೂಲಕ ಕೋಮು ದಳ್ಳುರಿ ಸೃಷ್ಟಿಸುತ್ತಿರುವ ಬಿಜೆಪಿ: ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 9:36 IST
Last Updated 9 ಫೆಬ್ರುವರಿ 2022, 9:36 IST
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ   

ಚಾಮರಾಜನಗರ: ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣವಾಗಿದ್ದು, ಮುಗ್ಧ ಮಕ್ಕಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೋಮುದಳ್ಳುರಿ ಸೃಷ್ಟಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಬುಧವಾರ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಾಮರಸ್ಯ, ಸೌಹಾರ್ದತೆ ಮನೆ ಮಾಡಿತ್ತು. ಗಣೇಶೋತ್ಸವ, ಹೋಳಿ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುತ್ತಿದ್ದರು. ಮುಸ್ಲಿಂ ವಿದ್ಯಾರ್ಥಿಗಳೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಂತಹ ವಾತಾವರಣವನ್ನು ಬಿಜೆಪಿ ಈಗ ಕಲುಷಿತಗೊಳಿಸಿದೆ' ಎಂದು ದೂರಿದರು.

'ಮುಸ್ಲಿಂ ವಿದ್ಯಾರ್ಥಿನಿಯರು ಹಿಂದಿನಿಂದಲೇ ಹಿಜಾಬ್ ಹಾಕಿಕೊಂಡೇ ಶಾಲಾ ಕಾಲೇಜಿಗೆ ಬರುತ್ತಿದ್ದುದು ಈಗಲ್ಲ. ಆದರೆ, ಕೆಲವು ದಿನಗಳಿಂದ ಈ ಸಮಸ್ಯೆ ಉಂಟಾಗಿದೆ. ಬಿಜೆಪಿ ಮುಖಂಡರು ಹಿನ್ನಲೆಯಲ್ಲಿದ್ದುಕೊಂಡು ಈ ವಿವಾದವನ್ನು ಹುಟ್ಟುಹಾಕುತ್ತಿದ್ದಾರೆ' ಎಂದು ಅವರು ದೂರಿದರು.

ADVERTISEMENT

'ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಬಿಜೆಪಿ ಸರ್ಕಾರ ಅವುಗಳನ್ನು‌ ನಿವಾರಿಸಲು ಗಮನಹರಿಸುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಕಂಡು ಬರುತ್ತಿರುವಾಗಲೇ, ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿಯು ಶಾಲಾ ಕಾಲೇಜುಗಳ ಮುಗ್ಧ ಮಕ್ಕಳನ್ನು ಬಳಸಿಕೊಂಡು ಕೋಮುಗಲಭೆ ಸೃಷ್ಟಿಸುತ್ತಿದೆ' ಎಂದರು.

'ವಿದ್ಯಾರ್ಥಿಗಳು ತಮ್ಮನ್ನು ವಿಭಜಿಸುವ ಶಕ್ತಿಗಳ ಬಗ್ಗೆ ಗಮನ ಹರಿಸಬಾರದು' ಎಂದು ಅವರು ಮನವಿ ಮಾಡಿದರು.
'ಈ ವಿವಾದದ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳು ನ್ಯಾಯಪರವಾದ ತೀರ್ಮಾನ ನೀಡುತ್ತದೆ ಎಂಬ ವಿಶ್ವಾಸ ಇದೆ' ಎಂದರು.

ಆರ್ ಎಸ್ ಎಸ್ ಕೈಗೊಂಬೆ: ವಿವಾದಕ್ಕೆ ಕಾಂಗ್ರೆಸ್ ಕಾರಣ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ ಅವರು, 'ಕೆ.ಎಸ್.ಈಶ್ವರಪ್ಪ ಅವರು ಆರ್ ಎಸ್ ಎಸ್ ನ ಕೈಗೊಂಬೆ. ಅವರಿಗೆ ಸ್ವಲ್ಪವೂ ವಿದ್ಯಾಭ್ಯಾಸ ಇಲ್ಲ. ಪ್ರಗತಿಪರ ಆಲೋಚನೆಗಳೂ‌ ಇಲ್ಲ. ಈಶ್ವರಪ್ಪ ಹಾಗೂ ಸಿ.ಟಿ.ರವಿ ಅವರು ಆರ್ ಎಸ್ ಎಸ್ ಬರೆದುಕೊಟ್ಟಿದ್ದನ್ನು ಹೇಳುವವರು. ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತಿರುವ ಈಶ್ವರಪ್ಪ ಅವರಿಗೆ ನಾಚಿಕೆಯಾಗಬೇಕು' ಎಂದು ಖಾರವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.