ADVERTISEMENT

ಚಾಮರಾಜನಗರ | ಮಳೆಯ ಆರ್ಭಟ: ಕೋಡಿ ಬಿದ್ದ ಕೆರೆಗಳು

ಹಳ್ಳ ಕೊಳ್ಳಗಳಲ್ಲಿ ನೀರು, ತುಂಬುತ್ತಿವೆ ಕೆರೆಗಳ ಒಡಲು, ಜಮೀನುಗಳಲ್ಲಿ ಆರದ ತೇವಾಂಶ

​ಪ್ರಜಾವಾಣಿ ವಾರ್ತೆ
Published 23 ಮೇ 2024, 16:14 IST
Last Updated 23 ಮೇ 2024, 16:14 IST
ಹನೂರು ತಾಲ್ಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವುದು
ಹನೂರು ತಾಲ್ಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವುದು   

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲೆಯಲ್ಲಿ ಗುರುವಾರ ಮಳೆ ಕೊಂಚ ಬಿಡುವು ನೀಡಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣ ಇದ್ದರೂ, ಅಲ್ಲಲ್ಲಿ ತುಂತುರು ಮಳೆಯಷ್ಟೇ ಆಗಿದೆ. 

ಆದರೆ, ಬುಧವಾರ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮಿಂಚು ಸಹಿತ ಭರ್ಜರಿಯಾಗಿ ಮಳೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ ದಾಖಲೆಯ 3.8 ಸೆಂ.ಮೀ ಮಳೆಯಾಗಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಮೈದುಂಬಲು ಆರಂಭಿಸಿದ್ದು, ಕೆರೆ ಕಟ್ಟೆಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.

ADVERTISEMENT

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 25 ಗಂಟೆಗಳ ಅವಧಿಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 5 ಸೆಂ.ಮೀ ಮಳೆಯಾಗಿದೆ. 15 ದಿನಗಳಲ್ಲಿ ಸುರಿದ ಮಳೆಗೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನ ಬೇರಂಬಾಡಿ ಕೆಂಪು ಸಾಗರ ಕೆರೆ, ಹೊನ್ನೇಗೌಡನಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿವೆ.

ಬರಗಿ ಕೆರೆ, ಮುಂಟೀಪುರ ಕೆರೆ, ದೇವರಹಳ್ಳಿ ಕೆರೆ, ಗೋಪಾಲಪುರ ಕೆರೆ, ಕನ್ನೇಗಾಲ ಕೆರೆ, ಕೂತನೂರು ಕೆರೆ, ಹಂಗಳ ಹೀರಿಕೆರೆ, ಹಂಗಳ ದೊಡ್ಡಕೆರೆ, ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಮರಹಳ್ಳಿ ಕೆರೆ, ದೇವಲಾಪುರ ಕೆರೆ, ಕುರುಬರಹುಂಡಿ ಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ 50ರಷ್ಟು ನೀರು ತುಂಬಿದೆ. ಕಾಲುವೆಗಳ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿದು ಬರುತ್ತಿದೆ.

ವಡ್ಡಗೆರೆ ಕೆರೆಗೆ ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ನೀರು ಬರುತ್ತಿದ್ದು, ತುಂಬಿ ಕೋಡಿ ಬೀಳುವ ಹಂತ ತಲುಪಿದೆ. ಹಂಗಳ ಹೋಬಳಿ, ಕಸಬಾ, ತೆರಕಣಾಂಬಿ, ಬೇಗೂರು ಹೋಬಳಿ ವ್ಯಾಪ್ತಿಯ ಸಣ್ಣಪುಟ್ಟ ಕೆರೆ ಹಾಗೂ ಕಟ್ಟೆಗಳಿಗೂ ಮಳೆ ನೀರು ಹರಿದು ಬರುತ್ತಿದ್ದು, ಹಂತ ಹಂತವಾಗಿ ತುಂಬಲಾರಂಭಿಸಿವೆ.

ಬಂಡೀಪುರ ಕೆರೆಗಳಿಗೆ ಜೀವಕಳೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ ವಲಯ, ಕುಂದುಕೆರೆ ವಲಯ, ಮದ್ದೂರು ವಲಯ, ಓಂಕಾರ ವಲಯಕ್ಕೂ ಉತ್ತಮ ಮಳೆಯಾಗಿದ್ದು, ಕಾಡಿನಲ್ಲಿ 100ಕ್ಕೂ ಅಧಿಕ ಕೆರೆಗಳು ತುಂಬಿವೆ. ಜೊತೆಗೆ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ ವನ್ಯಜೀವಿಗಳಿಗೆ ನೀರಿನ ಕೊರತೆ ಕಾಣದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಾಮರಾಜನಗರ ತಾಲ್ಲೂಕಿನಲ್ಲೂ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಒಂದೇ ದಿನ 3.97 ಸೆಂ.ಮೀನಷ್ಟು ವರ್ಷಧಾರೆಯಾಗಿದೆ. ಅವಳಿ ಜಲಾಶಯಳಾದ ಚಿಕ್ಕಹೊಳೆ, ಸುವರ್ಣಾವತಿಯ ಒಳಹರಿವು ಹೆಚ್ಚಾಗಿದೆ. ಚಂದಕವಾಡಿ ಹೋಬಳಿ ವ್ಯಾಪ್ತಿಯಲ್ಲಿ ಹಾದುಹೋಗುವ ಸುವರ್ಣಾವತಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗಿದೆ. ತಾಲ್ಲೂಕು ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. 

ಕೊಳ್ಳೇಗಾಲ ವರದಿ: ಕೊಳ್ಳೇಗಾಲ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 3.34 ಸೆಂ.ಮೀನಷ್ಟು ಮಳೆಯಾಗಿದೆ.  

ಹಳ್ಳಕೊಳ್ಳಲು ಸೇರಿದಂತೆ ಅನೇಕ ನಾಲೆಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಹಳೆ ಹಂಪಾಪುರ ಗ್ರಾಮದ ಮನೆಯೊಂದು ಕುಸಿದು ಬಿದ್ದು, ದಂಪತಿ ಪಾರಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಶೀಲ್ದಾರ್‌ ಮಂಜುಳ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. 

ನಗರದ ಹೊಸ ಕುರುಬರ ಬೀದಿಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದೆ. ವಾರದಿಂದ ಬೀಳುತ್ತಿರುವ ನಿರಂತರ ಮಳೆಗೆ ಜಲಮೂಲಗಳಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಯಳಂದೂರು ವರದಿ: ಯಳಂದೂರು ತಾಲ್ಲೂಕಿನಲ್ಲಿ ಬುಧವಾರ 3.16 ಸೆಂ.ಮೀನಷ್ಟು ಮಳೆಯಾಗಿದೆ. ಬಿಆರ್‌ಟಿ ವ್ಯಾಪ್ತಿ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಈಚೆಗೆ ಸುರಿದ ಮಳೆಯಿಂದ ಜಲಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ಮೂಡಿಸಿದೆ. ಸುವರ್ಣಾವತಿ ನದಿ ಮತ್ತು ಕಾಲುವೆಗಳಲ್ಲಿ ನೀರು ರಭಸವಾಗಿ ಹರಿಯಲು ಆರಂಭಿಸಿದೆ. 

ಎರಡು ದಿನಗಳ ಹಿಂದೆ ಹೊಳೆಯಲ್ಲಿ ನೀರು ಇರಲಿಲ್ಲ. ಚಾನೆಲ್ಗಳಲ್ಲಿ ಜಲ ಮೂಲ ಇಲ್ಲದೆ ಭಣಗುಟ್ಟುತ್ತಿತ್ತು. ಸಾಕು ಪ್ರಾಣಿಗಳ ದಾಹ ನೀಗಿಸುವುದು ಸಾಕಣೆದಾರರಿಗೆ ಕಷ್ಟವಾಗಿತ್ತು. ಆದರೆ. ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಒಂದೆರಡು ಅಡಿಯಷ್ಟು ನೀರು ನದಿ ಮತ್ತು ಕಾಲುವೆಯತ್ತ ಹರಿದು ಬರುತ್ತಿದೆ. 

ಹನೂರು, ಮಹದೇಶ್ವರ ಬೆಟ್ಟ ವರದಿ: ಬುಧವಾರ ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ 3.19 ಸೆಂ.ಮೀ ಮಳೆಯಾಗಿದೆ. 

ಸಿಡಿಲು ಬಡಿದು ಪೊನ್ನಾಚಿ ಗ್ರಾಮದಲ್ಲಿ ಬಸವಣ್ಣ ಎಂಬುವವರಿಗೆ ಸೇರಿದ ಎಮ್ಮೆಯೊಂದು ಮೃತಪಟ್ಟಿದೆ. 

ಮಹದೇಶ್ವರಬೆಬೆಟ್ಟದಿಂದ ತಾಳಬೆಟ್ಟ ಮಾರ್ಗವಾಗಿ ಹನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾದ ಹಣೆಹೊಲದ ಸಮೀಪ ಮುಖ್ಯರಸ್ತೆಗೆ ಮಳೆಯಿಂದಾಗಿ ಬಿದಿರ ಮೆಳೆ ಮಗುಚಿದ್ದು, ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ.

ಹನೂರು ತಾಲ್ಲೂಕಿನ ಮಾರ್ಟಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ವಡ್ಡರದೊಡ್ಡಿಯಲ್ಲಿ 5.26 ಸೆಂ.ಮೀ, ಮಾರ್ಟಳ್ಳಿಯಲ್ಲಿ 4.82 ಸೆಂ.ಮೀ, ಸಂದನಪಾಳ್ಯದಲ್ಲಿ 4.5 ಸೆಂ.ಮೀ ಮಳೆ ದಾಖಲಾಗಿದೆ. 

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನಲ್ಲಿ ಬೇರಂಬಾಡಿ ಕೆರೆ ಕೋಡಿ ಬಿದ್ದಿರುವುದು
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಗೆ ಬಿದಿರ ಮೆಳೆ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯಲ್ಲಿ ಸುವರ್ಣಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು

ಮುಂಗಾರು ಪೂರ್ವ: ವಾಡಿಕೆಗಿಂತ ಹೆಚ್ಚು ಮಳೆ

ವಾರದಿಂದೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಈ ಬಾರಿ ಮುಂಗಾರು ಪೂರ್ವ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದೆ.   ಮಾರ್ಚ್‌ 1ರಿಂದ ಮೇ 23ರವರ ನಡುವಿನ ಅವಧಿಯಲ್ಲಿ ಸಾಮಾನ್ಯವಾಗಿ 16.3 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 18.3 ಸೆಂ.ಮೀ ನಷ್ಟು ಮಳೆ ಬಿದ್ದಿದೆ. ಒಂದು ವಾರದ ಅವಧಿಯಲ್ಲೇ 11. 8 ಸೆಂ.ಮೀ ವರ್ಷಧಾರೆಯಾಗಿದೆ.  ಜನವರಿ 1ರಿಂದ ಮೇ 23ರವರೆಗೆ 19.1 ಸೆಂ.ಮೀ ಮಳೆಯಾಗಿದೆ. ವಾಡಿಕೆಯಲ್ಲಿ 17.4 ಸೆಂ.ಮೀ ಮಳೆಯಾಗುತ್ತದೆ.  ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೆಳೆ ಜಲಾವೃತ; ರೈತರಿಗೆ ಸಂಕಷ್ಟ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿ ನೀರು ಸಂಗ್ರಹವಾಗಿದ್ದು ಬೆಳೆಗಳು ಜಲಾವೃತವಾಗಿವೆ. ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗದಿರುವುದು ಒಂದೆಡೆಯಾದರೆ ಬಿತ್ತನೆ ಮಾಡಿದ ಬೆಳೆ ಕೊಚ್ಚಿ ಹೋಗುವ ಆತಂಕ ಇನ್ನೊಂದೆಡೆ. ಇದರೊಂದಿಗೆ ಬೆಳೆದ ಫಸಲುಗಳು ಜಲಾವೃತವಾಗಿರುವುದು ಬೆಳೆ ನಷ್ಟದ ಭೀತಿಯನ್ನು ತಂದೊಡ್ಡಿದೆ.    ಗುಂಡ್ಲುಪೇಟೆ ತಾಲ್ಲೂಕಿನ ಕೊತನೂರು ಗ್ರಾಮದಲ್ಲಿ ಮಳೆ ನೀರು ರೈತರೊಬ್ಬರ ಜಮೀನಿಗೆ ನುಗ್ಗಿದ್ದು ಈರುಳ್ಳಿ ಹಾಗೂ ಅರಿಸಿನ ಬೆಳೆ ನೀರಿನಲ್ಲಿ ಮುಳುಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.