ADVERTISEMENT

ಚಾಮರಾಜನಗರ: ತೆರಕಣಾಂಬಿ ಕಾಲೇಜು ಸ್ಥಳಾಂತರದ ವಿರುದ್ಧ ಪ್ರತಿಭಟನೆ

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ ಕುಮಾರ್‌ ವಿರುದ್ಧ ರೈತ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 12:24 IST
Last Updated 29 ಜುಲೈ 2020, 12:24 IST
ಕಾಲೇಜು ಸ್ಥಳಾಂತರ ಖಂಡಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು
ಕಾಲೇಜು ಸ್ಥಳಾಂತರ ಖಂಡಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಸರ್ಕಾರಿ ಪದವಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿಗೆ ಸ್ಥಳಾಂತರ ಮಾಡುತ್ತಿರುವುದನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಾಲೇಜು ಉಳಿಸಿಕೊಳ್ಳಲು ಸ್ಥಳೀಯ ಶಾಸಕರ ಸಿ.ಎಸ್‌.ನಿರಂಜನಕುಮಾರ್‌ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆಯಲ್ಲಿ ಸಾಗಿ, ನಂತರ ಅಲ್ಲಿ ಪ್ರತಿಭಟನೆ ನಡೆಸಿದರು. ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

‘ತೆರಕಣಾಂಬಿಯಲ್ಲಿ ಕಾಲೇಜು ಇರುವುದರಿಂದ ಉನ್ನತ ಶಿಕ್ಷಣ ಪಡೆಯಲು ಬಯಸುವ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ.₹8 ಕೋಟಿ ವೆಚ್ಚದಲ್ಲಿ ಕಾಲೇಜಿಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದ ಬಳಿಕ, ಅದನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು ಖಂಡನೀಯ. ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ತೆರಕಣಾಂಬಿ ಕಾಲೇಜು ವರ್ಗಾವಣೆಗೆ ಶಾಸಕ ಸಿ.ಎಸ್‌.ನಿರಂಜನ ಕುಮಾರ್‌ ಅವರೇ ಕಾರಣ’ ಎಂದು ಆರೋಪಿಸಿದರು.

‘ಸ್ಥಳೀಯ ಹಳ್ಳಿಗಳ ರೈತರ ಮಕ್ಕಳು ಆ ಕಾಲೇಜಿಗೆ ಹೋಗುತ್ತಾರೆ. ಅದಕ್ಕೆ ಇನ್ನಷ್ಟು ಶಕ್ತಿ ತುಂಬಿ, ಉನ್ನತೀಕರಿಸಲು ಕ್ರಮ ಕೈಗೊಳ್ಳುವುದು ಬಿಟ್ಟು, ಕಾಲೇಜನ್ನು ಮಾರಾಟ ಮಾಡಿ ‌ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅವರಿಗೆ ಎಲ್ಲರೂ ಹೂವಿನ ಹಾರ ಹಾಕುತ್ತಿದ್ದಾರೆ. ಚಪ್ಪಲಿ ಹಾರ ಹಾಕಬೇಕಿತ್ತು’ ಎಂದು ಆಕ್ರೋಶ ವ್ಯಕ್ರಪಡಿಸಿದರು.

‘‌ನಿರಂಜನಕುಮಾರ್‌ ಅವರುಗುಂಡ್ಲುಪೇಟೆಯಲ್ಲಿ ರೈತ ಸಂಘವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಇದು ಅವರ ಮೂರ್ಖತನ. ರೈತ ಸಂಘವನ್ನು ನಿರ್ನಾಮ ಮಾಡಲು ರಾಜ್ಯದ ಕೆಲವು ಮುಖ್ಯಮಂತ್ರಿಗಳಿಗೇ ಸಾಧ್ಯವಾಗದೆ ಅಧಿಕಾರ ಕಳೆದುಕೊಂಡರು. ಶಾಸಕರಿಗೂ ಅದೇ ಪರಿಸ್ಥಿತಿ ಬರುತ್ತದೆ’ ಎಂದರು.

‘ಶಾಸಕರಾಗಿ ನಿರಂಜನಕುಮಾರ್‌ ಅವರು ಏನೂ ಕೆಲಸ ಮಾಡಿಲ್ಲ. ಕೆರೆಗಳಿಗೆ ನೀರು ತುಂಬಿಸಿಲ್ಲ. ಬೆಳೆ ವಿಮೆ ಕೊಡಿಸಿಲ್ಲ’ ಎಂದು ದೂರಿದರು.

ವಿವಿಧ ಬೇಡಿಕೆಗಳು: ‘ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಚಂಗಡಿ ಗ್ರಾಮ ಸ್ಥಳಾಂತರ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದ್ದರೂ ಪುನರ್ಸತಿಗೆ ಜಾಗ ಗುರುತಿಸಲು ಜಿಲ್ಲಾಡಳಿತ ವಿಫಲವಾಗಿದೆ. ಮಹದೇಶ್ವರ ಬೆಟ್ಟದ ವ್ಯಾಪ್ತಿಗೆ ಬರುವ ಇಂಡಿಗನತ್ತ, ತುಳಸಿಕೆರೆ, ಮೆಂದಾರೆ ಗ್ರಾಮಗಳಲ್ಲಿ ಸೋಲಾರ್ ವಿದ್ಯುತ್‌ ಮೂರು ತಿಂಗಳುಗಳಿಂದ ಹಾಳಾಗಿದ್ದು, ಜನರು ಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಎಲ್ಲ ಕೆರೆಗಳ ಹೂಳು ತೆರವುಗೊಳಿಸಬೇಕು. ಹೊಸ ಕೆರೆಗಳನ್ನು ನಿರ್ಮಿಸಬೇಕು. ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಾಡಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಅಕ್ರಮ ಗಣಿಗಾರಿಕೆ ತಡೆಯಬೇಕು. ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಬೇಕು. ಜಿಲ್ಲೆಯಲ್ಲಿರುವ ಸಂತೆಗಳಲ್ಲಿ ದಿನಸಿ ಪದಾರ್ಥ ಹಾಗೂ ಬೆಲ್ಲ ಮಾರಾಟಕ್ಕೆ ಅವಕಾಶ ಕೊಡಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಕುಂದಕೆರೆ ಸಂಪತ್ತು, ಮಾಡ್ರಹಳ್ಳಿ ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಪೃಥ್ವಿ, ಬಿ.ಎಲ್.ಷಣ್ಮುಖ, ವಿನೋದ್‌ಕುಮಾರ್ ಸೇರಿದಂತೆ ಅನೇಕ ರೈತರು ಇದ್ದರು.

ಸಚಿವರೊಂದಿಗೆ ಚರ್ಚಿಸುವ ಭರವಸೆ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ರೈತ ಮುಖಂಡರಿಂದ ಮನವಿ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರು ಇನ್ನೆರಡು ದಿನಗಳಲ್ಲಿ ಜಿಲ್ಲೆಗೆ ಬರಲಿದ್ದು, ಈ ಸಂದರ್ಭದಲ್ಲಿ ಕಾಲೇಜು ಸ್ಥಳಾಂತರ ವಿಚಾರವನ್ನು ಪ್ರಸ್ತಾಪಿಸಿ, ಅದನ್ನು ತೆರಕಣಾಂಬಿಯಲ್ಲೇ ಉಳಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಆ ನಂತರ ರೈತ ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.