ADVERTISEMENT

ಅಭಿಮಾನಿಗಳಲ್ಲೇ ದೇವರು ಕಾಣುತ್ತಿದ್ದ ಡಾ.ರಾಜ್‌: ಆಪ್ತ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 11:58 IST
Last Updated 24 ಏಪ್ರಿಲ್ 2021, 11:58 IST
ಗಾಜನೂರಿನಲ್ಲಿ ಡಾ.ರಾಜ್‌ ಅವರ ಸೋದರಳಿಯ ಗೋಪಾಲ್ ಮತ್ತು ಪ್ರೇಮ ದಂಪತಿಯನ್ನು ಜನಾರ್ದನ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು
ಗಾಜನೂರಿನಲ್ಲಿ ಡಾ.ರಾಜ್‌ ಅವರ ಸೋದರಳಿಯ ಗೋಪಾಲ್ ಮತ್ತು ಪ್ರೇಮ ದಂಪತಿಯನ್ನು ಜನಾರ್ದನ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು   

ಚಾಮರಾಜನಗರ: ‘ಡಾ.ರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳಲ್ಲೇ ದೇವರನ್ನು ಕಾಣುತ್ತಿದ್ದರು’ ಎಂದು ರಾಜ್‌ಕುಮಾರ್ ಅವರಿಗೆ ಆಪ್ತರಾಗಿದ್ದ ಚಂದ್ರಶೇಖರ್ ಅವರು ಅಭಿಪ್ರಾಯಪಟ್ಟರು.

ಡಾ.ರಾಜ್‌ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಜನಾರ್ದನ ಪ್ರತಿಷ್ಠಾನದ ವತಿಯಿಂದ ಗಡಿಭಾಗವಾದ ಗಾಜನೂರಿನಲ್ಲಿ ಡಾ.ರಾಜ್‌ ಅವರ ಸೋದರಳಿಯ ಗೋಪಾಲ್ ಮತ್ತು ಪ್ರೇಮ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ರಾಜ್‌ಕುಮಾರ್ ಜೊತೆ 20 ಚಿತ್ರಗಳನ್ನು ಮಾಡಿದ್ದು ಮತ್ತು ಶಬರಿಮಲೆಗೆ 22 ವರ್ಷಗಳ ಕಾಲ ಹೋಗಿದ್ದನ್ನು ಸ್ಮರಿಸಿದರು.

‘ರಾಜ್‌ಕುಮಾರ್ ಅವರ ಮಾಡದೇ ಇರುವ ಪಾತ್ರವೇ ಇಲ್ಲ. ಯಾವುದೇ ಪಾತ್ರವಾದರೂ ಸರಿ. ಅದಕ್ಕೆ ಪರಕಾಯ ಪ್ರವೇಶ ಮಾಡಿ ಬಿಡುತ್ತಿದ್ದರು. ಅವರಿಗೆ ಆವರೇ ಸಾಟಿ’ ಎಂದು ಬಣ್ಣಿಸಿದರು.

ADVERTISEMENT

‘ಅವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇದ್ದರೂ, ಅವರು ಬಿಟ್ಟು ಹೋದ ನೆನಪುಗಳು ಮತ್ತು ಪಾತ್ರಗಳು ಇಂದಿಗೂ ಜೀವಂತವಾಗಿವೆ. ಅವುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಅವರ ಎಲ್ಲ ಸಿನಿಮಾಗಳೂ ಕುಟುಂಬ ಸಮೇತ ನೋಡುವಂತಿತ್ತು. ಸಮಾಜಕ್ಕೆ ನೀತಿ ಪಾಠವೂ ಅದರಲ್ಲಿತ್ತು’ ಎಂದರು.

‘ಅವರಿಗೆ ಗಾಜನೂರು ಅತಿ ಹೆಚ್ಚು ಪ್ರಿಯವಾದ ಜಾಗವಾಗಿತ್ತು ಮತ್ತು ಅಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದರು’ ಎಂದು ತಿಳಿಸಿದರು.

ಜನಾರ್ದನ ಪ್ರತಿಷ್ಠಾನದ ಅಧ್ಯಕ್ಷ ಅನಂತ ಪ್ರಸಾದ್ ಅವರು ಮಾತನಾಡಿ, ‘ರಾಜ್‌ಕುಮಾರ್ ಹುಟ್ಟು‌ಹಬ್ಬವನ್ನು ಪ್ರತಿವರ್ಷ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದೆವು. ಆದರೆ, ಈ ಬಾರಿ ಕೋವಿಡ್‌ ಇದ್ದುದರಿಂದ ಸರಳವಾಗಿ ಅಚರಿಸುವ ನಿಟ್ಟಿನಲ್ಲಿ ಅವರ ಮನೆಗೆ ತೆರಳಿ ಅಚರಿಸಲಾಗಿದೆ’ ಎಂದು ತಿಳಿಸಿದರು.

ಜೆಎಸ್ಎಸ್ ಆಸ್ಪತ್ರೆಯ ಡಾ.ಕುಲದೀಪ್, ಶ್ರೀನಿವಾಸ್, ಬಾಲಾಜಿ, ನರಸಿಂಹ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.