ಚಾಮರಾಜನಗರ:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವರನಟ ಡಾ.ರಾಜ್‌ಕುಮಾರ್ ಅವರ 92ನೇ ಜನ್ಮದಿನವನ್ನು ಶುಕ್ರವಾರ ಅತ್ಯಂತ ಸರಳವಾಗಿ ನಗರದಲ್ಲಿ ಆಚರಿಸಲಾಯಿತು.
ಡಾ.ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಪರಿಶ್ರಮ, ಶ್ರದ್ಧೆ, ಬದ್ಧತೆ ಹಾಗೂ ಕಾಯಕದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಡಾ. ರಾಜ್‌ಕುಮಾರ್ ಅವರು ಕನ್ನಡ ಸಂಸ್ಕೃತಿಯ ಅಸ್ಮಿತೆಯಾಗಿದ್ದಾರೆ’ ಎಂದು ಪ್ರತಿಪಾದಿಸಿದರು.
‘ಮನೋಜ್ಞ ನಟನೆಯ ಮೂಲಕ ಮಾನವೀಯ ಮೌಲ್ಯಗಳ ಶ್ರೇಷ್ಠ ಚಿಂತನೆಗಳನ್ನು ವ್ಯಕ್ತಪಡಿಸುತ್ತಿದ್ದ ಡಾ. ರಾಜ್‌ಕುಮಾರ್ ತಮ್ಮ ಸರಳ ಜೀವನಶೈಲಿಯಿಂದ ಕನ್ನಡಿಗರು ಸೇರಿದಂತೆ ಎಲ್ಲ ಜನರಲ್ಲಿ ಬೆರೆತಿದ್ದಾರೆ. ಕನ್ನಡದ ಸ್ಪಷ್ಟ ಉಚ್ಚಾರಣೆ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಕರ್ನಾಟಕದ ಸಾಂಸ್ಕೃತಿಕ ಶಕ್ತಿಯಾಗಿದ್ದರು’ ಎಂದರು.
‘ರಾಜ್‌ಕುಮಾರ್ ನಮ್ಮ ಜಿಲ್ಲೆಯ ಹೆಮ್ಮೆ. ಕನ್ನಡದ ನಾಡು, ನುಡಿ, ನೆಲ, ಜಲ, ಭಾಷೆಯ ವಿಷಯದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರು ಕನ್ನಡತನವನ್ನು ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲೂ ಬಿಟ್ಟುಕೊಡುತ್ತಿರಲಿಲ್ಲ. ಅಂತಹ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ರವಿ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಅವರು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ರಾಜ್ ಒಡನಾಡಿಗಳಲ್ಲಿ ಒಬ್ಬರಾಗಿದ್ದ ಜಯಸಿಂಹ, ಉಪನ್ಯಾಸಕ ಸುರೇಶ್ ಋಗ್ವೇದಿ, ಇತರರು ಇದ್ದರು.
ರಾಜ್ ಸಹೋದರಿಗೆ ಸನ್ಮಾನ:ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ನಗರ ಜನಾರ್ದನ ಪ್ರತಿಷ್ಠಾನದ ವತಿಯಿಂದ ಗಡಿಭಾಗದ ತಾಳವಾಡಿ ಸಮೀಪದ ಗಾಜನೂರಿನಲ್ಲಿ ಅವರ ಸಹೋದರಿ ನಾಗಮ್ಮ ಅವರನ್ನು ಸನ್ಮಾನಿಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಅನಂತ ಪ್ರಸಾದ್, ನಾಗಮ್ಮ ಅವರ ಪುತ್ರ ಗೋಪಾಲ್, ಕುಟುಂಬದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.