
ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ನಂದಿ ಧ್ವಜ, ಬ್ಯಾಂಡ್, ಕೊಂಬು, ಸತ್ತಿಗೆ, ಸೂರಿಪಾನಿ, ಮಂಗಳವಾದ್ಯ ಹಾಗೂ ವೀರಮಕ್ಕಳ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.
ಲಕ್ಷ್ಮಿನಾರಾಯಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಬಳಿಕ ಬೆಳಿಗ್ಗೆ 10 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ತೇರು, ಮಧ್ಯಾಹ್ನ 12.45ಕ್ಕೆ ನಾರಾಯಣಸ್ವಾಮಿ ದೇವಾಲಯವನ್ನು ತಲುಪಿತು.
ಭಕ್ತರು ಜಯ ಘೋಷಗಳೊಂದಿಗೆ ರಥ ಎಳೆದರು. ಬಾಳೆಹಣ್ಣು, ವೀಳ್ಯದೆಲೆಗಳನ್ನು ಎಸೆದು ನಮಿಸಿದರು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ, ಪಂಚಾಮೃತ ವಿತರಿಸಲಾಯಿತು.
ಎರಡು ದಿನಗಳ ಜಾತ್ರೆ: ಭಾನುವಾರ ಬೆಳಗಿನ ಜಾವವೇ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಉರುಳುಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಭಾನುವಾರ ಇಡೀ ರಾತ್ರಿ ವಿವಿಧ ವಿಧಿ ವಿಧಾನಗಳು ನಡೆದವು. ಅದ್ದೂರಿ ಮೆರವಣಿಗೆಯೂ ಜರುಗಿತು.
ಸೋಮವಾರ ನಸುಕಿನಲ್ಲಿ ಲಕ್ಷ್ಮೀ ದೇವಿ ದೇವಸ್ಥಾನ ಮುಂಭಾಗ ಕೊಂಡೋತ್ಸವ ನಡೆಯಿತು. ನಂತರ ರಥೋತ್ಸವದೊಂದಿಗೆ ಎರಡು ದಿನಗಳ ದಿನಗಳ ಜಾತ್ರೆಗೆ ತೆರೆ ಬಿದ್ದಿತು.
ಬಿ.ಮಲ್ಲಯ್ಯನಪುರ, ಮೇಗಲಹುಂಡಿ, ಕೆರೆಹಳ್ಳಿ, ಹೆಗ್ಗವಾಡಿ, ಭುಜಗನಪುರ, ಪಾಳ್ಯ, ಮುತ್ತಿಗೆ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ತಾವರೆಕೆರೆ ಏರಿ ಉದ್ದಕ್ಕೂ ಕಣ್ಮನ ಸೆಳೆಯುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.