
ಹನೂರು: ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ಪ್ರಥಮ ಬಾರಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅತ್ಯಂತ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಮಧ್ಯಾಹ್ನ 12ಕ್ಕೆ ಜರುಗಿದ ರಥೋತ್ಸವದಲ್ಲಿ ದೇವರನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣಿ ಹಾಕಲಾಯಿತು. ರಥೋತ್ಸವ ಜರುಗುತ್ತಿದ್ದಂತೆ ಗರುಡ ಎರಡು ಬಾರಿ ಹಾರಾಡಿದ್ದು ವಿಶೇಷವಾಗಿತ್ತು. ದೊಡ್ಡಬಾಯಿ ಬೀಗದಾರಿಗಳು ರಥ ಎಳೆಯುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಜಯ ಘೋಷ ಕೂಗಿದರು. ನೆರೆದಿದ್ದ ಭಕ್ತರು ಹಣ್ಣು ಜವನ ಎಸೆದು ಹರಕೆ ತೀರಿಸಿದರು.
ಜಿಲ್ಲೆಯ ಗ್ರಾಮಗಳಲ್ಲಿ ಮಾರಮ್ಮನ ದೇವಾಲಯದಲ್ಲಿ ಹೆಣ್ಣು ದೇವರಿಗೆ ರಥೋತ್ಸವ ಜರುಗಿದ್ದು ವಿಶೇಷವಾಗಿತ್ತು. ಉತ್ಸವಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇದಕ್ಕೂ ಮುನ್ನ ಸೋಮವಾರ ರಾತ್ರಿ ಜಾಗರ ಸಮರ್ಪಣೆ ಸಲ್ಲಿಸಲಾಯಿತು. ನವ ವಸ್ತ್ರಗಳಿಂದ ಕಂಗೋಳಿಸುತ್ತಿದ್ದ ಬಾಲೆಯರು ವಿವಿಧ ಧಾನ್ಯಗಳಿಂದ ಮೊಳಕೆ ಒಡೆದ ಜಾಗರ ಹೊತ್ತು ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ದೇವರಿಗೆ ಸಮರ್ಪಿಸಿ ಪುನೀತರಾದರು.
ಬಿಗಿ ಪೊಲೀಸ್ ಬಂದುಬಸ್ತ್: ನಾಲ್ಕು ದಿನ ನಡೆಯುವ ಮಹೋತ್ಸವದಲ್ಲಿ ಪೊಲೀಸರು ಬಂದು ಬಸ್ತ್ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.