ADVERTISEMENT

ಮಠಗಳು ನೆಮ್ಮದಿ ನೀಡುವ ಸಾಂತ್ವನ ಕೇಂದ್ರಗಳು: ಸಿದ್ದಲಿಂಗ ಸ್ವಾಮೀಜಿ

ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ಗುರುಪಟ್ಟಾಧಿಕಾರ ರಜತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:12 IST
Last Updated 17 ಡಿಸೆಂಬರ್ 2025, 6:12 IST
ಚಾಮರಾಜನಗರ ಸಮೀಪದ ಮರಿಯಾಲ ಗ್ರಾಮದಲ್ಲಿ ಮಂಗಳವಾರ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳ ಗುರು ಪಟ್ಟಾಧಿಕಾರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಬೆಳ್ಳಿ ಕಿರೀಟ ತೊಡಿಸಿ ಗುರುವಂದನೆ ಸಲ್ಲಿಸಲಾಯಿತು
ಚಾಮರಾಜನಗರ ಸಮೀಪದ ಮರಿಯಾಲ ಗ್ರಾಮದಲ್ಲಿ ಮಂಗಳವಾರ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳ ಗುರು ಪಟ್ಟಾಧಿಕಾರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಬೆಳ್ಳಿ ಕಿರೀಟ ತೊಡಿಸಿ ಗುರುವಂದನೆ ಸಲ್ಲಿಸಲಾಯಿತು   

ಚಾಮರಾಜನಗರ: ನಾಡಿನ ಮಠ ಮಾನ್ಯಗಳು ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ, ನೆಮ್ಮದಿ ನೀಡುವ, ಬದುಕುವ ಚೈತನ್ಯ ತುಂಬುವ ಶಕ್ತಿ ಕೇಂದ್ರಗಳಾಗಿವೆ ಎಂದು ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಮರಿಯಾಲ ಗ್ರಾಮದಲ್ಲಿ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ಗುರುಪಟ್ಟಾಧಿಕಾರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ನಾಡಿನ ಉದ್ದಗಲಕ್ಕೂ ಚಾಚಿಕೊಂಡಿರುವ ಮಠಗಳು, ಧಾರ್ಮಿಕ ಸಂಸ್ಥೆಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ದಾಸೋಹದ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದರು.

ಯಡಿಯೂರು ಸಿದ್ದಲಿಂಗೇಶ್ವರ, ಮಹದೇಶ್ವರ ಅವರಂತಹ ಮಹಾನ್ ಪುರುಷರು ನೆಲಸಿರುವ ಈ ಭಾಗದಲ್ಲಿ ಮಠಗಳ ಮೇಲೆ ಭಕ್ತರು ವಿಶೇಷ ಪ್ರೀತಿ, ಗೌರವ ಇರಿಸಿಕೊಂಡಿದ್ದಾರೆ. ಮಠಗಳು ಸಹ ಹಲವು ಶಿಕ್ಷಣ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಶಿಕ್ಷಣ ಕೈಗೆಟುಕುವಂತೆ ಮಾಡಿದ್ದು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ ಎಂದು ಶ್ಲಾಘಿಸಿದರು. 

ADVERTISEMENT

ಹಿರಿಯ ಗುರುಗಳಾದ ಮಹಾಂತ ಶ್ರೀಗಳು ನಡೆದು ಬಂದ ಹಾದಿಯಲ್ಲಿ ಸಾಗುತ್ತಿರುವ ಇಮ್ಮಡಿ ಮುರುಘ ರಾಜೇಂದ್ರ ಶ್ರೀಗಳು ಗುರು ಪರಂಪರೆಗೆ ಚ್ಯುತಿ ಬಾರದಂತೆ ಮಠವನ್ನು ಮುನ್ನಡೆಸುತ್ತಿದ್ದಾರೆ. ಸಮಾಜಕ್ಕೆ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಭಕ್ತರಿಗೆ ಆಚಾರ–ವಿಚಾರ, ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕತೆಯ ಮನೋಭಾವ ಬೆಳೆಸುತ್ತಿದ್ದಾರೆ ಎಂದರು.

ವ್ಯಕ್ತಿಯ ಸಾಧನೆಯನ್ನು ವಯಸ್ಸಿನಿಂದ ಅಳೆಯದೆ ಸಾಧನೆಗಳಿಂದ ಅಳೆದರೆ ಹೆಚ್ಚು ತೂಕ ಬರಲಿದೆ. ಹಾಗೆಯೇ, 25 ವರ್ಷಗಳಲ್ಲಿ ಇಮ್ಮಡಿ ಮುರುಘ ರಾಜೇಂದ್ರ ಶ್ರೀಗಳು ಸಾಧನೆಗಳಿಂದ ಗಮನ ಸೆಳೆದಿದ್ದಾರೆ ಎಂದು ಸಿದ್ದಗಂಗಾ ಶ್ರೀಗಳು ಶ್ಲಾಘಿಸಿದರು.

ಮರಿಯಾಲದ ಇಮ್ಮಡಿ ಮರುಘರಾಜೇಂದ್ರ ಸ್ವಾಮಿ ಮಾತನಾಡಿ ‘1895ರಲ್ಲಿ ಶ್ರೀಮಠವನ್ನು ಸ್ಥಾಪಿಸಿದ ಹಿರಿಯ ಶ್ರೀಗಳು ಬಿತ್ತಿದ ಬಸವತತ್ವಗಳ ಬೀಜ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಶರಣರ ತತ್ವ, ಚಿಂತನೆಗಳ ಫಲವನ್ನು ನೀಡುತ್ತಿದೆ. ಹತ್ತಾರು ಶಾಖಾ ಮಠಗಳನ್ನು ನಿರ್ಮಾಣ ಮಾಡಿರುವ ಉಭಯ ಶ್ರೀಗಳು ಆರ್ಥಿಕ ಸದೃಢತೆ ನೀಡಿದ್ದಾರೆ’ ಎಂದು ಸ್ಮರಿಸಿದರು.

ಆರ್ಥಿಕ ಸಂಕಷ್ಟ, ಭೂಮಿ ಪರಭಾರೆಯಂತಹ ಸವಾಲುಗಳು ಎದುರಾದ ಸಂದಿಗ್ಧ ಕಾಲಘಟ್ಟದಲ್ಲೂ ಎದೆಗುಂದದೆ ಗಟ್ಟಿಯಾಗಿ ನಿಂತ ಹಿರಿಯ ಶ್ರೀಗಳು ಮಠವನ್ನು ಸಮರ್ಥವಾಗಿ ಮುನ್ನಡೆಸಿದರು. ಬಸವಣ್ಣನವರ ವಚನಗಳ ಸಾರದಂತೆ ಬದುಕಿ ತೋರಿಸಿದವರು ಎಂದರು.

ಬಾಲ್ಕಿ ಹಿರೇಮಠ ಮಹಾಸಂಸ್ಥಾನದ ಬಸವಲಿಂಗ ಪಟ್ಟದೇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಬಸವ’ ಎಂಬ ಮೂರಕ್ಷರವನ್ನು ಭಕ್ತರು  ಹೃದಯದಲ್ಲಿ ತುಂಬಿಕೊಂಡರೆ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದು ಎಂದರು.

ಗುರು ಮಹಾಂತ ಸ್ವಾಮಿ ಮಾತನಾಡಿದರು. ಹಾವೇರಿಯ ಹುಕ್ಕೇರಿ ಮಠದ ಸದಾಶಿವಸ್ವಾಮಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಚಾಮರಾಜನಗರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಆಶಯ ನುಡಿಗಳನ್ನಾಡಿದರು. ಮಹಾಂತರ ಬೆಳಗಿದ ಮುರುಘ ಪ್ರಭೆ ಅಭಿನಂದನಾ ಗ್ರಂಥವನ್ನು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು

ಬಸವ ತತ್ವ ಸಾಹಿತ್ಯ ಪಾಲಿಸೋಣ

ಸಮಾಜ ಬಸವತತ್ವ ಸೂತ್ರ ಹಾಗೂ ವಚನ ಸಾಹಿತ್ಯವನ್ನು ಪಾಲಿಸುವ ಮೂಲಕ ಒಗ್ಗಟ್ಟಾಗಿ ನಿಲ್ಲಬೇಕು. ಬಸವಣ್ಣ ಹಾಗೂ ಶರಣರ ವಚನ ಸಾಹಿತ್ಯವನ್ನು ನಾಡಿನೆಲ್ಲೆಡೆ ಪ್ರಚಾರ ಮಾಡುವ ಮೂಲಕ ವಚನ ಸಂಸ್ಕೃತಿಯನ್ನು ಪಾಲಿಸಬೇಕು. ಪ್ರಜಾಪ್ರಭುತ್ವದ ಬುನಾದಿ ಹಾಕಿದ ಸಮ ಸಮಾಜವನ್ನು ನಿರ್ಮಾಣ ಮಾಡಿ ಅಸ್ಪೃಶ್ಯತೆಯನ್ನು ತೊಡೆದುಹಾಕುವ ಯತ್ನಗಳು ನಡೆದಿದ್ದು 12ನೇ ಶತಮಾನದ ಶರಣರ ಕಾಲದಲ್ಲಿ ಎಂಬುದನ್ನು ಮರೆಯಬಾರದು ಎಂದು ಬಸವಲಿಂಗ ಪಟ್ಟದೇವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.