
ಯಳಂದೂರು: ‘ಪ್ರಜಾ ಪ್ರಭುತ್ವ ರಕ್ಷಣೆ, ನ್ಯಾಯಸಮ್ಮತ ಆಡಳಿತ ಮತ್ತು ಸಾಮಾಜಿಕ ನ್ಯಾಯ ಸಾಧಿಸುವ ನಿಟ್ಟಿನಲ್ಲಿ ಒಬಿಸಿ ಸಮುದಾಯಗಳನ್ನು ಒಗ್ಗೂಡಿಸುವುದೇ ವಾಯ್ಸ್ ಆಫ್ ಒಬಿಸಿ ಗುರಿಯಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಯ್ಸ್ ಆಫ್ ಒಬಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದರೂ, ಅವುಗಳನ್ನು ಅಂಗೀಕರಿಸಿ ಜಾರಿ ಮಾಡುವ ನಿಟ್ಟಿನಲ್ಲಿ ಪ್ರಬಲ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತವೆ. ಹೀಗಾಗಿ, ಹಿಂದುಳಿದವರು ಜಾಗೃತರಾಗಿ ಸಂಘಟನಾ ಹೋರಾಟಗಳನ್ನು ಮಾಡಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ಈ ದಿಸೆಯಲ್ಲಿ ಜಾಗೃತಿ ಮೂಡಿಸುವ ತುರ್ತು ಎದುರಾಗಿದೆ. ರಾಜ್ಯದಾದ್ಯಂತ ಕಾರ್ಯಕ್ರಮ ಆಯೋಜಿಸಿ ಒಬಿಸಿಗಳನ್ನು ಸಂಘಟಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಅನಿವಾರ್ಯ ಎಂದರು.
ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ಆಶಯದಂತೆ ಹಿಂದುಳಿದ ವರ್ಗಳ ಜನರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಇವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಹಿಂದುಳಿದಿದ್ದು, ಇಂತಹ ವರ್ಗಗಳನ್ನು ಗುರುತಿಸಿ, ಅವರನ್ನು ಎಲ್ಲಾ ವಲಯಗಳಲ್ಲೂ ಮೇಲೆತ್ತಲೂ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ರಾಜ್ಯ ನಾಯಕರು ಹಿಂದುಳಿದವರ ಸಂಘಟನೆ ಮತ್ತು ಅರಿವು ಮೂಡಿಸಲು ಪಣತೊಟ್ಟಿದ್ದಾರೆ, ಇದರ ಅಂಗವಾಗಿ ಕೊಳ್ಳೇಗಾಲ ಕ್ಷೇತ್ರದಲ್ಲೂ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ‘ಜಾತಿ ಸಮೀಕ್ಷೆಯನ್ನು ಬಿಜೆಪಿ ವಿರೋಧಿಸುತ್ತಿದೆ, ಕೆಲವರ ವಿರೋಧದ ನಡುವೆಯೂ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಂಕಿ-ಅಂಶಗಳನ್ನು ಸಂಗ್ರಹಿಸಿ ಒಬಿಸಿಗಳ ಕಲ್ಯಾಣಕ್ಕೆ ಹೆಚ್ಚಿನ ನೆರವು ನೀಡಲಾಗುವುದು. ಮೀಸಲಾತಿ ವಂಚಿತ ಸಮುದಾಯಗಳಿಗೂ ಕಾರ್ಯಕ್ರಮ ರೂಪಿಸಲು ಸಾಧ್ಯವಾಗಲಿದೆ’ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ‘ಅಹಿಂದ ಸಮುದಾಯ ಕಾಂಗ್ರೆಸ್ ಜೊತೆಗಿದೆ. ಪಕ್ಷದ 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾದಾಯದಲ್ಲಿ ಹೆಚ್ಚಳವಾಗಿದೆ. ಜನ ಸಮುದಾಯದ ಆರ್ಥಿಕ ಮಟ್ಟ ಉತ್ತಮವಾಗಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಯ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗಲು 200 ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಚಿಂತಿಸಲಾಗಿದೆ ಹಾಗೂ ಕೆಪಿಎಸ್ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಮುಖಂಡರಾದ ಜಿ.ಎನ್.ನಂಜುಂಡಸ್ವಾಮಿ, ರೇಖಾ ರಮೇಶ್, ಕಿನಕಹಳ್ಳಿ ಪ್ರಭುಪ್ರಸಾದ್, ರಾಜೇಂದ್ರ, ತೋಟೇಶ್, ಪ.ಪಂ. ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ಶಾಂತಮ್ಮ ಜೆ. ಯೋಗೇಶ್, ಆರ್.ಚೇತನ್‌ಕುಮಾರ್, ಮಹದೇವಶೆಟ್ಟಿ, ನಂಜುಂಡಸ್ವಾಮಿ, ಚಂದ್ರಶೇಖರ್, ಭಾಗ್ಯ, ಯೋಗೇಂದ್ರ, ವಿನೋದ್‌ರಾಜ್, ರಮ್ಯ ಇದ್ದರು.