
ಕೊಳ್ಳೇಗಾಲ: ‘ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ತಾಲ್ಲೂಕು ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಸೆಲ್ವರಾಜ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರು ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುವ ಸರಳ ವ್ಯಕ್ತಿ. ಮೂರು ಬಾರಿ ಶಾಸಕರಾಗಿ ಜನಪ್ರಿಯ ಕೆಲಸಗಳನ್ನು ಮಾಡಿ ಹೆಸರುವಾಸಿಯಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನವನ್ನು ನೀಡಿ ಮತ್ತಷ್ಟು ಜವಾಬ್ದಾರಿಯನ್ನು ವಹಿಸಬೇಕು’ ಎಂದು ಮನವಿ ಮಾಡಿದರು.
‘ಅವರು ತಂದೆ ದಿ. ಬಿ.ರಾಚಯ್ಯ ಹಾದಿಯಲ್ಲಿ ನಡೆಯುತ್ತಿರುವುದು ನಿಜಕ್ಕೂ ನಮಗೆ ಸಂತೋಷದ ವಿಷಯ. ದೀನ ದಲಿತರಿಗೆ, ಬಡವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರತಿನಿತ್ಯ ಹೋರಾಡುತ್ತಿದ್ದಾರೆ. ಕ್ರೈಸ್ತರ ಭವನ ಸೇರಿದಂತೆ ಇತರ ಸಮುದಾಯ ಭವನಗಳಿಗೆ ಅನುದಾನಗಳನ್ನು ತಂದಿದ್ದಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಸಚಿವ ಸ್ಥಾನ ನೀಡಿದರೆ ಹಿಂದುಳಿದ ಜಿಲ್ಲೆ ಹಣೆಪಟ್ಟಿ ಹೋಗಲಾಡಿಸುವುದರಲ್ಲಿ ಅನುಮಾನವೇ ಇಲ್ಲ. ಕೊಳ್ಳೇಗಾಲವೂ ಅಭಿವೃದ್ಧಿಯಾಗುತ್ತದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ವಿನ್ಸೆಂಟ್, ಉಪಾಧ್ಯಕ್ಷ ಜಾನ್ ಪೀಟರ್, ವಿಲ್ಸನ್ ಸಾಧು, ಕರುಣಾಕರ್ ಕಾರ್ಯದರ್ಶಿ ಸದಾನಂದ ಸಾಧು, ನಿರ್ದೇಶಕ ಸುದರ್ಶನ್, ಕಾಂತರಾಜು, ನಗರಸಭೆ ನಾಮನಿರ್ದೇಶನ ಸದಸ್ಯ ದೇವಾನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.