ADVERTISEMENT

ಅಮಾನತಿನಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ ಆತ್ಮಹತ್ಯೆಗೆ ಯತ್ನ?

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:49 IST
Last Updated 4 ಡಿಸೆಂಬರ್ 2018, 19:49 IST
ಎಂ. ಕುಮಾರಸ್ವಾಮಿ
ಎಂ. ಕುಮಾರಸ್ವಾಮಿ   

ಚಾಮರಾಜನಗರ: ಅಮಾನತಿನಲ್ಲಿದ್ದ ಮೀಸಲು ಪೊಲೀಸ್‌ ಪಡೆಯ ಹೆಡ್‌ ಕಾನ್‌ಸ್ಟೆಬಲ್‌ ಎಂ. ಕುಮಾರಸ್ವಾಮಿ (42) ಅವರು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪೊಲೀಸರು ಇದನ್ನು ದೃಢಪಡಿಸಿಲ್ಲ.

ಅಸ್ವಸ್ಥಗೊಂಡಿರುವ ಕುಮಾರಸ್ವಾಮಿ ಅವರನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಾರಸ್ವಾಮಿ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಾರಿಗೆ ವಿಭಾಗದಲ್ಲಿ ಚಾಲಕರಾಗಿದ್ದರು. ಇತ್ತೀಚೆಗೆ ಸಾರಿಗೆ ವಿಭಾಗದ ಇನ್‌ಸ್ಪೆಕ್ಟರ್‌ (ಎಂಟಿಒ) ಸೋಮಣ್ಣ ಹಾಗೂ ಕುಮಾರಸ್ವಾಮಿ ಅವರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಸೋಮಣ್ಣ ಅವರು ಕುಮಾರಸ್ವಾಮಿ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.

ADVERTISEMENT

ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿತ್ತು. ಇದರಿಂದ ಅವರು ನೊಂದಿದ್ದರು ಎಂದು ಹೇಳಲಾಗಿದೆ. ಪತ್ನಿ, ಮೂವರು ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಇನ್‌ಸ್ಪೆಕ್ಟರ್‌ ಸೋಮಣ್ಣ ಅವರನ್ನು ಭೇಟಿ ಮಾಡಿ ಅಮಾನತು ಆದೇಶ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಇನ್‌ಸ್ಪೆಕ್ಟರ್‌ ಒಪ್ಪಿರಲಿಲ್ಲ ಎನ್ನಲಾಗಿದೆ.

ಇದರಿಂದ ಮನನೊಂದಿದ್ದ ಕುಮಾರಸ್ವಾಮಿ ಅವರು ಮಂಗಳವಾರ ರಾಮಸಮುದ್ರದಲ್ಲಿರುವ ತಮ್ಮ ವಸತಿಗೃಹದಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮದ್ಯದಲ್ಲಿ ವಿಷ ಬೆರೆಸಿ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ನಂತರ ಸಶಸ್ತ್ರ ಮೀಸಲು ಪಡೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿರುವ ಚೆನ್ನನಾಯಕ ಎಂಬುವವರಿಗೆ ಕರೆ ಮಾಡಿ, ‘ನನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ವಿಷ ಕುಡಿದಿದ್ದೇನೆ. ಸಾಯುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಕ್ಷಣ ಚೆನ್ನನಾಯಕ ಅವರು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಕುಮಾರಸ್ವಾಮಿ ಅವರು ಅಸ್ವಸ್ಥರಾಗಿ ಬಿದ್ದಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಲಾಯಿತು.

ದೃಢಪಡಿಸದ ಪೊಲೀಸರು: ಈ ಮಧ್ಯೆ, ಕುಮಾರಸ್ವಾಮಿ ಅವರು ಆತ್ಮಹತ್ಯೆಗೆ ಯತ್ನಿಸಿರುವುದನ್ನು ಪೊಲೀಸರು ದೃಢಪಡಿಸಿಲ್ಲ.

ಈ ಸಂಬಂಧ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಚಾಮರಾಜನಗರ ಪಟ್ಟಣ ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್‌.ಸಿ. ನಾಗೇಗೌಡ ಅವರು, ‘ಕುಮಾರಸ್ವಾಮಿ ಅವರು ಕಂಠಪೂರ್ತಿ ಕುಡಿದಿದ್ದರು. ಕೆಲವು ಮಾತ್ರೆಗಳನ್ನು ನುಂಗಿದಂತೆ ಕಾಣುತ್ತಿದೆ. ವಿಷವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವರು ಒಪ್ಪಿಲ್ಲ. ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ. ಅವರಿಂದ ಹೇಳಿಕೆ ಪಡೆದ ನಂತರವಷ್ಟೇ ಪ್ರಕರಣ ದಾಖಲಿಸಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.