ADVERTISEMENT

ಚಾಮರಾಜನಗರ: ಫ್ಲೆಕ್ಸ್‌ ಬ್ಯಾನರ್ ಅಳವಡಿಕೆಗೆ ಬೇಕು ‘ಅಂಕುಶ’

ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಹುಟ್ಟುಹಬ್ಬಗಳಲ್ಲಿ ಮಿತಿಮೀರಿ ಅಳವಡಿಕೆ; ಅಪಘಾತ ಆತಂಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 7:17 IST
Last Updated 30 ಜೂನ್ 2025, 7:17 IST
ಚಾಮರಾಜನಗರದ ಸಂತೇಮರಹಳ್ಳಿ ಸರ್ಕಲ್‌ನಲ್ಲಿ ಅಳವಡಿಸಿರುವ ಫ್ಲೆಕ್ಸ್‌
ಚಾಮರಾಜನಗರದ ಸಂತೇಮರಹಳ್ಳಿ ಸರ್ಕಲ್‌ನಲ್ಲಿ ಅಳವಡಿಸಿರುವ ಫ್ಲೆಕ್ಸ್‌   

ಚಾಮರಾಜನಗರ: ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಸಮಾವೇಶ, ನಾಯಕರ, ಗಣ್ಯರ, ಚಿತ್ರ ನಟರ ಹುಟ್ಟುಹಬ್ಬ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಹಬ್ಬ, ಜಾತ್ರೆ ಹೀಗೆ ಯಾವುದೇ ಸನ್ನಿವೇಶವಾದರೂ ಜಿಲ್ಲೆಯಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರ ಹೆಚ್ಚಾಗುತ್ತಿದೆ. ನಗರ, ಪಟ್ಟಣಗಳ ಪ್ರಮುಖ ವೃತ್ತಗಳು, ಅಪಾಯಕಾರಿ ತಿರುವುಗಳು, ಜನನಿಬಿಡ ಸ್ಥಳಗಳು ಫ್ಲೆಕ್ಸ್‌ಗಳಿಂದ ತುಂಬಿ ತುಳುಕುತ್ತವೆ. 

ನಗರದ ಅಂದಗೆಡಿಸುತ್ತಿರುವ, ಅಪಘಾತಗಳಿಗೆ ಕಾರಣವಾಗುತ್ತಿರುವ ಫ್ಲೆಕ್ಸ್‌ಗಳನ್ನು ತೆರೆವುಗೊಳಿಸುವ ಕಾರ್ಯಕ್ಕೆ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಕ್ರಮ ಜರುಗಿಸದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೂ ಮುನ್ನ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ನಿಗದಿತ ಶುಲ್ಕ ಪಾವತಿಸಿ ಸ್ಥಳೀಯಾಡಳಿತ ಗುರುತಿಸಿರುವ ಸ್ಥಳಗಳಲ್ಲಿ ಮಾತ್ರ ಅಳವಡಿಕೆ ಮಾಡಬೇಕು. ಫ್ಲೆಕ್ಸ್‌ನ ಕೆಳಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪರವಾನಗಿಯ ಸಂಖ್ಯೆ ಹಾಗೂ ಎಷ್ಟು ದಿನ ಅಳವಡಿಕೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನೂ ನಮೂದಿಸಬೇದು.

ADVERTISEMENT

ಫ್ಲೆಕ್ಸ್ ಅಳವಡಿಕೆ ಅವಧಿ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಆದರೆ, ಜಿಲ್ಲೆಯಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಬಹುತೇಕ ಫ್ಲೆಕ್ಸ್‌, ಬ್ಯಾನರ್‌ಗಳಲ್ಲಿ ಅನುಮತಿ ಸಂಖ್ಯೆಯಾಗಲಿ, ದಿನಾಂಕವಾಗಲಿ ಕಾಣಸಿಗುವುದಿಲ್ಲ.

ನಿರ್ಬಂಧಿತ ಪ್ರದೇಶಗಳಾದ ಅಪಘಾತ ವಲಯ, ಹಲವು ರಸ್ತೆಗಳು ಕೂಡುವ ಸ್ಥಳಗಳಲ್ಲಿ, ಆಸ್ಪತ್ರೆ, ಶಾಲಾ ಕಾಲೇಜುಗಳ ಮುಂದೆ ಹೀಗೆ ಮನಸ್ಸಿಗೆ ತೋಚಿದ ಕಡೆಗಳಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಆಳವಡಿಕೆ ಮಾಡಲಾಗುತ್ತಿದೆ.

ಚಾಮರಾಜನಗರದ ಭುವನೇಶ್ವರಿ ವೃತ್ತ (ಪಚ್ಚಪ್ಪ ಸರ್ಕಲ್‌), ಸಂತೇಮರಹಳ್ಳಿ ಸರ್ಕಲ್‌, ಗುಂಡ್ಲುಪೇಟೆ ಸರ್ಕಲ್‌ನಲ್ಲಿ ಫ್ಲೆಕ್ಸ್‌ಗಳ ಅಬ್ಬರ ಹೆಚ್ಚಾಗಿದೆ. ಶಾಲಾ ಕಾಲೇಜು, ಧಾರ್ಮಿಕ ಸ್ಥಳಗಳ ಎದುರೂ ಹೆಚ್ಚಾಗಿ ಕಾಣಬಹುದು. ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಸಂದರ್ಭವಂತೂ ಇಡೀ ಜಿಲ್ಲೆ ಫ್ಲೆಕ್ಸ್ ಬ್ಯಾನರ್‌ಗಳಿಂದು ತುಂಬಿಹೋಗಿತ್ತು. 

ಚಾಮರಾಜನಗರ ಹಾಗೂ ಮಲೆ ಮಹದೇಶ್ವರ ಬೆಟ್ಟ ಸಂಪರ್ಕಿಸುವ 110 ಕಿ.ಮೀ ಮಾರ್ಗದ ಇಕ್ಕೆಗಳಲ್ಲಿ ಮುಖ್ಯಮಂತ್ರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಪ್ಲಾಸ್ಟಿಕ್ ನಿರ್ಬಂಧಿತ ಪ್ರದೇಶವಾದ ಮಲೆ ಮಹದೇಶ್ವರ ವನ್ಯಜೀವಿ ವಲಯದೊಳಗೂ ಫ್ಲೆಕ್ಸ್‌ಗಳು ಪ್ರವೇಶಿಸಿ ಪರಿಸರಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದವು. ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆಗೆ ಸ್ಥಳೀಯಾಡಳಿತಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ನಾಗರಿಕರು. 

ಗ್ರಾಮೀಣ ಭಾಗದಲ್ಲೂ ಫ್ಲೆಕ್ಸ್ ಕಿರಿಕಿರಿ

ಯಳಂದೂರು: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಫ್ಲೆಕ್ಸ್ ಹಾವಳಿ ಹೆಚ್ಚುತ್ತಿದೆ. ಜನ್ಮ ದಿನ, ಚಿತ್ರ ಬಿಡುಗಡೆ, ನಿಧನರಾದವರ ಭಾವಚಿತ್ರ, ಹಬ್ಬ, ಜಾತ್ರೆಗಳಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡುವ ಸಂಸ್ಕೃತಿ ಹೆಚ್ಚಾಗಿದೆ. ಇದರಿಂದ ಪಟ್ಟಣದ ಸೌಂಧರ್ಯಕ್ಕೆ ಧಕ್ಕೆಯಾದರೆ, ರಸ್ತೆ ಇಕ್ಕೆಲಗಳು, ಬಸ್ ನಿಲ್ದಾಣ ಹಾಗೂ ದೇವಾಲಯಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತಿದೆ.

ದೈತ್ಯಾಕಾರದ ಫ್ಲೆಕ್ಸ್‌ಗಳು ಎದುರಿಗೆ ಬರುವ ವಾಹನಗಳು ಕಾಣದಂತೆ ಮರೆಮಾಚುತ್ತಿದ್ದು ಅಪಘಾತಗಳಿಗೆ ಕಾರಣವಾಗುತ್ತಿವೆ. ಸಂಬಂಧಪಟ್ಟ ಪಂಚಾಯಿತಿಗಳು ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ನಗರದ ಸೌಂದರ್ಯಕ್ಕೆ ಧಕ್ಕೆ
ಕೊಳ್ಳೇಗಾಲ ನಗರದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು ನಗರದ ಸೌಂದರ್ಯ ಹಾಳಾಗುತ್ತಿದೆ. ನಗರಸಭೆಯಿಂದ ಅನುಮತಿ ಪಡೆಯದೆ ಹಾಕಿರುವ ಫ್ಲೆಕ್ಸ್‌ಗಳ ಸಂಖ್ಯೆಯೇ ನಗರದಲ್ಲಿ ಹೆಚ್ಚಾಗಿದೆ. ವೃತ್ತ ಹಾಗೂ ತಿರುವುಗಳಲ್ಲಿ ಫ್ಲೆಕ್ಸ್ ಹಾಕುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ.

ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಸಂದರ್ಭ ಫ್ಲೆಕ್ಸ್‌ ಹಾವಳಿ ಮಿತಿಮೀರುತ್ತದೆ. ನಗರಸಭೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪರಿಸರಕ್ಕೆ ಹಾನಿ

ಅವಧಿ ಮುಗಿದರೂ ತೆರವುಗೊಳಿಸದ ಫ್ಲೆಕ್ಸ್‌ಗಳು ಮಳೆಗಾಳಿಗೆ ಹರಿದು ಸಮೀಪದ ಚರಂಡಿ ಸೇರುತ್ತಿವೆ. ಇದರಿಂದ ಮಳೆಯ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಪರಿಸರಕ್ಕೂ ಮಾರಕವಾಗಿ ಪರಿಣಮಿಸಿದೆ.

ಕೊಳ್ಳೇಗಾಲದ ಮುಖ್ಯ ಸರ್ಕಲ್‌ನಲ್ಲಿ ಅಳವಡಿಸಿರುವ ಫ್ಲೆಕ್ಸ್
ಅಪಘಾತಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಮುಖ್ಯ ರಸ್ತೆಯ ಮಧ್ಯೆ ಇರುವ ಡಿವೈಡರ್‌ಗಳ ಮೇಲೆ ಫ್ಲೆಕ್ಸ್‌, ಹೋರ್ಡಿಂಗ್‌ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲ. ಅಪಾಯಕಾರಿ ತಿರುವು ಹಾಗೂ ವಲಯಗಳಲ್ಲೂ ಫ್ಲೆಕ್ಸ್‌ ಹಾಕುವಂತಿಲ್ಲ. ಕಡ್ಡಾಯವಾಗಿ ಅನುಮತಿ ಪಡೆದು ಅಳವಡಿಕೆ ಮಾಡಬೇಕು. ಅನಧಿಕೃತ ಫ್ಲೆಕ್ಸ್‌ಗಳಿದ್ದರೆ ತೆರವುಗೊಳಿಸಲಾಗುವುದು.
– ಎಸ್‌.ಎ.ರಾಮದಾಸ್, ಚಾಮರಾಜನಗರ ನಗರಸಭೆ ಪೌರಾಯುಕ್ತ
ಫ್ಲೆಕ್ಸ್‌ ಅಳವಡಿಕೆಗೆ ನಗರಸಭೆಯಿಂದ ಕಡ್ಡಾಯ ಅನುಮತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಫ್ಲೆಕ್ಸ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಲಾಗುವುದು.
– ರೇಖಾ, ನಗರಸಭೆ ಅಧ್ಯಕ್ಷೆ
ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಪಡೆಯುತ್ತಾರೆ. ಆದರೆ ಕಾರ್ಯಕ್ರಮ ಮುಗಿದ ನಂತರ ತೆರವುಗೊಳಿಸದ ಪರಿಣಾಮ ಸಮಸ್ವೆ ಉಂಟಾಗುತ್ತಿದೆ. ಪಂಚಾಯಿತಿ ನೌಕರರೇ ಫ್ಲೆಕ್ಸ್ ತೆರವುಗೊಳಿಸುವ ಕೆಲಸ ಮಾಡಬೇಕಿದೆ.
– ಮಹೇಶ್ ಕುಮಾರ್, ಯಳಂದೂರು ಪ.ಪಂಚಾಯಿತಿ ಮುಖ್ಯಾಧಿಕಾರಿ
ಅಪಘಾತಗಳಿಗೆ ಎಡೆಮಾಡಿಕೊಡುವ ರಸ್ತೆಯ ತಿರುವುಗಳಲ್ಲಿ ಹಾಗೂ ರಸ್ತೆಯ ಮಧ್ಯೆ ಫ್ಲೆಕ್ಸ್ ಅಳವಡಿಕೆ ಹೆಚ್ಚುತ್ತಿದೆ. ಜನರ ಜೀವಗಳಿಗೆ ಕುತ್ತು ಉಂಟಾದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ.
– ಹರೀಶ್, ಕೊಳ್ಳೇಗಾಲ
ಫ್ಲೆಕ್ಸ್‌, ಬ್ಯಾನರ್ ಅಳವಡಿಸಬೇಕಾದರೆ ನಗರಸಭೆಗೆ ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಈ ನಿಯಮ ಕಡತದಲ್ಲಿ ಮಾತ್ರ ಇದ್ದು ಅನುಷ್ಠಾನವಾಗುತ್ತಿಲ್ಲ. ಫ್ಲೆಕ್ಸ್‌, ಬ್ಯಾನರ್ ಅಳವಡಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ನಗರದ ಸೌಂದರ್ಯ ಹಾಳಾಗುತ್ತಿದೆ, ನಗರಸಭೆಗೆ ಆದಾಯ ಕೊರತೆಯಾಗುತ್ತಿದೆ, ಸಾರ್ವಜನಿಕರ ಜೀವಕ್ಕೂ ಕಂಟಕವಾಗುತ್ತಿದೆ. ಅಧಿಕಾರಿಗಳು ಅನಧಿಕೃತ ಫ್ಲೆಕ್ಸ್‌ ಬ್ಯಾನರ್ ಅಳವಡಿಕೆಗೆ ಕಡಿವಾಣ ಹಾಕಬೇಕು.
– ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರ
ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿಕೊಂಡು ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನದಡಿ ಚಾಟಿ ಏಟು ನೀಡಿದರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಹಾಗೂ ಆಡಳಿತ ವರ್ಗ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬಹುದು.
– ಪ್ರಿಯಾಂಕ, ಚಾ.ನಗರ ನಿವಾಸಿ
ರಸ್ತೆಗಳಲ್ಲಿ ಪ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸುವುದರಿಂದ ಅಪಘಾತಗಳಾಗುತ್ತವೆ. ದಿನ ಕಳೆದಂತೆ ಪರಿಸರ ಮಾಲಿನ್ಯವಾಗುತ್ತದೆ. ಜಾನುವಾರುಗಳು ತಿಂದು ಸಾವನ್ನಪ್ಪುತ್ತವೆ. ಈ ದೊಸೆಯಲ್ಲಿ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು.
– ಪುಟ್ಟರಾಜು, ದೇಶವಳ್ಳಿ
ಪಟ್ಟಣದ ಸುತ್ತಮುತ್ತ ಫ್ಲೆಕ್ಸ್ ಹಾವಳಿ ಹೆಚ್ಚಿದ್ದು, ಒಮ್ಮೆ ಅಳವಡಿಕೆ ಮಾಡಿದ ನಂತರ ತಿಂಗಳುಗಳು ಕಳೆದರೂ ತೆರವು ಮಾಡುವುದಿಲ್ಲ. ಪರಿಣಾಮ ಪಟ್ಟಣದ ಸುತ್ತಮುತ್ತ ಫ್ಲೆಕ್ಸ್‌ಗಳು ತುಂಬಿವೆ. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುವ ಕೆಲಸ ಮಾಡಬೇಕು.
– ಸುರೇಶ್, ಯಳಂದೂರು ನಿವಾಸಿ
ಯಳಂದೂರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಹಾಕಿರುವ ಫ್ಲೆಕ್ಸ್ 
ನಿರ್ವಹಣೆ: ಬಾಲಚಂದ್ರ ಎಚ್‌. | ಪೂರಕ ಮಾಹಿತಿ: ಅವಿನ್ ಪ್ರಕಾಶ್‌ ವಿ, ನಾ.ಮಂಜುನಾಥಸ್ವಾಮಿ, ಮಹದೇವ್ ಹೆಗ್ಗವಾಡಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.