ADVERTISEMENT

ಸಂತೇಮರಹಳ್ಳಿ: ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:23 IST
Last Updated 13 ಅಕ್ಟೋಬರ್ 2025, 2:23 IST
ಸಂತೇಮರಹಳ್ಳಿ ಸಮೀಪದ ಯಲಕ್ಕೂರು ಗ್ರಾಮದಿಂದ ಕರಡಿಮೋಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಸಂತೇಮರಹಳ್ಳಿ ಸಮೀಪದ ಯಲಕ್ಕೂರು ಗ್ರಾಮದಿಂದ ಕರಡಿಮೋಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಸಂತೇಮರಹಳ್ಳಿ: ಸಮೀಪದ ಯಲಕ್ಕೂರು ಗ್ರಾಮದಿಂದ ಕರಡಿಮೋಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಯಲಕ್ಕೂರು ಗ್ರಾಮಸ್ಥರು ಈಚೆಗೆ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿರುವ ಸ್ಥಳದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರಡಿಮೋಳೆ ಗ್ರಾಮದಿಂದ ಯಲಕ್ಕೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ ಮುಖ್ಯ ರಸ್ತೆಯನ್ನು ಮಾಜಿ ಶಾಸಕ ವಾಟಾಳ್ ನಾಗರಾಜು ಅವರ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಪಡಿಸಿ ಡಾಂಬರೀಕರಣ ಮಾಡಲಾಗಿತ್ತು. ಈಗ ಈ ರಸ್ತೆಯಲ್ಲಿ ಗುಂಡಿಗಳಾಗಿವೆ. ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿರುವ ಪರಿಣಾಮ ಸಾರ್ವಜನಿಕರು ಹಾಗೂ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ADVERTISEMENT

ಕಳೆದ 2 ವರ್ಷಗಳಿಂದ ರಸ್ತೆ ಹಾಳಾಗಿದ್ದು, ಗ್ರಾಮಕ್ಕೆ ಬರುತ್ತಿದ್ದ ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಸ್ಥಗಿತವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಚಾಮರಾಜನಗರ ಹಾಗೂ ಸಂತೇಮರಹಳ್ಳಿಗೆ ತೆರಳಬೇಕಾದರೇ ಕುದೇರು ಅಥವಾ ಯಡಿಯೂರು ಗ್ರಾಮದ ಮುಖ್ಯ ರಸ್ತೆಗೆ ತೆರಳಿ ಬಸ್ ಹತ್ತುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಕ್ಷೇತ್ರದ ಶಾಸಕರಿಗೆ ಹಲವಾರು ಬಾರಿ ಮನವಿ ನೀಡಿದರು ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಾಜೇಶ್, ಮಹದೇವಪ್ಪ, ಸಿದ್ದರಾಜು, ರಾಚಯ್ಯ, ಮಹೇಶ್, ಮಹದೇವಸ್ವಾಮಿ, ಚಂದ್ರಯ್ಯ, ಶ್ರೀಕಂಠಸ್ವಾಮಿ, ಪ್ರೀತಮ್, ರೇವಣ್ಣ, ರಂಗಸ್ವಾಮಿ, ಮಹದೇವಯ್ಯ, ಗಿರಿ, ಮಹೇಶ್, ಮಾದಯ್ಯ, ಮನೋಜ್, ಮಹದೇವಯ್ಯ ಪ್ರತಿಭಟನೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.