ಕೊಳ್ಳೇಗಾಲ: ‘ನಗರದ ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ವಿಸ್ತರಣೆ ಬಹು ವರ್ಷಗಳ ಬೇಡಿಕೆ. ಇದನ್ನು ಶೀಘ್ರ ನೆರವೇರಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಡಾ.ರಾಜ್ ಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ವಿಸ್ತರಣೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆಯ ವಿಸ್ತರಣೆ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ. ಕೊಳ್ಳೇಗಾಲ ನಗರಸಭೆ ವ್ಯಾಪ್ತಿ ದಿನ ದಿನಕ್ಕೂ ಬೆಳೆಯುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತರಣೆ ಅಗತ್ಯವಾಗಿದೆ. ಈಗಾಗಲೇ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಅಂಗಡಿಯವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಎರಡು ರಸ್ತೆ ಅಭಿವೃದ್ಧಿ ಮಾಡಬೇಕಾದರೆ ₹100 ಕೋಟಿ ಹಣ ಬೇಕಾಗುತ್ತದೆ. ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಹ ರಸ್ತೆಯನ್ನು ವೀಕ್ಷಣೆ ಮಾಡಿದ್ದಾರೆ. ಅನುದಾನ ನೀಡುವ ಭರವಸೆಯನ್ನು ನೀಡಿದ್ದಾರೆ. ಹಾಗಾಗಿ ರಸ್ತೆ ವಿಸ್ತರಣೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ನಕಲಿ ಖಾತೆಗಳು ಸೃಷ್ಟಿ: ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದಾರೆ. ಇದರಲ್ಲಿ ಬಹುತೇಕ ಎಲ್ಲಾ ಅಂಗಡಿಯವರು ನಗರಸಭೆ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಈಗ 80 ಅಡಿಗೆ ವಿಸ್ತರಣೆ ಮಾಡಬೇಕು ಎಂಬುದಾಗಿ ತೀರ್ಮಾನ ಕೈಗೊಂಡಿದ್ದೇವೆ. ಆದರೆ 1978ರಲ್ಲಿ ಅಂದಿನ ಅಧಿಕಾರಿಗಳು 110 ಅಡಿ ರಸ್ತೆ ವಿಸ್ತರಣೆಗೆ ತೀರ್ಮಾನ ಮಾಡಿದ್ದರು. ಇದಾದ ಬಳಿಕ 1990ರಲ್ಲಿ 100 ಅಡಿ ರಸ್ತೆ ಮಾಡುವುದಾಗಿ ಒಪ್ಪಿಗೆ ಸೂಚಿಸಿದರು. ಆದರೂ ಸಹ ರಸ್ತೆ ವಿಸ್ತರಣೆ ಆಗಲೇ ಇಲ್ಲ ಎಂದು ತಿಳಿಸಿದರು.
ಬಹುತೇಕ ಎಲ್ಲರೂ ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಮೂಲ ನಕ್ಷೆ ಪ್ರಕಾರ ಸರ್ವೆ ಮಾಡಿದರೆ ಯಾವ ಅಂಗಡಿಯೂ ಉಳಿಯುವುದಿಲ್ಲ. ಹಾಗಾಗಿ 80 ಅಡಿ ರಸ್ತೆಗೆ ಸೀಮಿತಗೊಳಿಸಲಾಗುವುದು ಎಂದರು.
ಮತ್ತೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಮೂಲ ನಕ್ಷೆಯ ಪ್ರಕಾರ ಸರ್ವೆ ನಡೆಸಿ ನೀಲಿ ನಕ್ಷೆ ತಯಾರಿಸಿ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ವರದಿ ನೀಡಬೇಕು. ಇದನ್ನು ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಕಾಮಗಾರಿ ಮಾಡಿಸಲು ಕ್ರಮಕೈಗೊಳ್ಳಲಾವುದು ಎಂದರು.
ಕೆಲ ಅಂಗಡಿಯವರು ನಗರಸಭೆ ಅಧಿಕಾರಿಗಳ ಜೊತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ನಮ್ಮದೇ ಅಂಗಡಿ ಎಂದು ಹೇಳುತ್ತಿದ್ದಾರೆ. ನಗಲಿ ದಾಖಲಾತಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಖಾತೆ ಮಾಡಿಕೊಟ್ಟ ಅಧಿಕಾರಿಗಳ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಒತ್ತುವರಿ ತೆರವು ಮಾಡಿ: ರಸ್ತೆ ಸೇರಿದಂತೆ ಅನೇಕ ನಗರಸಭೆ ಜಾಗಗಳನ್ನು ಒತ್ತುವರಿಯಾಗಿದೆ. ಯಾರು ನಗರಸಭೆ ಆಸ್ತಿ, ಇನ್ನಿತರ ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪಟ್ಟಿ ಮಾಡಿ ಪ್ರತಿಯೊಂದು ನಗರಸಭೆ ಆಸ್ತಿಯ ಜಾಗದಲ್ಲಿ ನಾಮಫಲಕ ಹಾಕಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಪೌರಾಯುಕ್ತ ರಮೇಶ್, ಲೋಕ ಉಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಸುರೇಂದ್ರ ಇದ್ದರು.
‘ನಗರಸಭೆಯಲ್ಲಿ ಖಾತೆ ಕೆಲಸ ವಿಳಂಬ’:
‘ನನ್ನ ಕ್ಷೇತ್ರದ ನಗರಸಭೆಯಲ್ಲಿ ಖಾತೆ ಸಂಬಂಧಪಟ್ಟ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ತುಂಬಾ ನೋವು ಉಂಟಾಗಿದೆ. ನಗರಸಭೆ ಅಧಿಕಾರಿಗಳು ಸಾರ್ವಜನಿಕರನ್ನು ಖಾತೆಗೆ ಅಲೆದಾಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ರಾಜ್ಯದ ಗಮನ ಸೆಳೆದೆ: ಚಳಿಗಾಲದ ಅಧಿವೇಶನದಲ್ಲಿ ಎ ಖಾತೆ ಹಾಗೂ ಬಿ ಖಾತೆ ಮಾಡಬೇಕು ಎಂಬುದಾಗಿ ಸರ್ಕಾರದ ಗಮನ ಸೆಳೆದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಖಾತೆ ಮಾಡುವಲ್ಲಿ ಮುಂದಾಯಿತು. ಎಲ್ಲಾ ನಗರಸಭೆಯಲ್ಲಿ ಉತ್ತಮವಾಗಿ ಎ ಖಾತೆ ಹಾಗೂ ಬಿ ಖಾತೆ ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.