ADVERTISEMENT

ಚಾಮರಾಜನಗರದಲ್ಲಿ ಟ್ರ್ಯಾಕ್ಟರ್ ಖರೀದಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 9:53 IST
Last Updated 16 ಜೂನ್ 2023, 9:53 IST
   

ಚಾಮರಾಜನಗರ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಅವರು ಶುಕ್ರವಾರ ಚಾಮರಾಜನಗರಕ್ಕೆ ಭೇಟಿ ನೀಡಿ, ಟ್ರ್ಯಾಕ್ಟರ್ ಖರೀದಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ (ಬಂಡೀಪುರ ಸಮೀಪ) ರೋಜರ್ ಬಿನ್ನಿಯವರು 36 ಎಕರೆ ಜಮೀನು ಹೊಂದಿದ್ದು, ಕೃಷಿ‌ ಮಾಡುವುದಕ್ಕಾಗಿ ಮಹೀಂದ್ರಾ ಟ್ರ್ಯಾಕ್ಟರ್ ಖರೀದಿಸಿದರು.

ನಗರದ ನಂಜನಗೂಡು ರಸ್ತೆಯಲ್ಲಿರುವ ಈಶ್ವರಿ ಟ್ರ್ಯಾಕ್ಟರ್ಸ್ ಶೋ ರೂಂ ಗೆ ಭೇಟಿ ನೀಡಿದ ಬಿನ್ನಿಯವರನ್ನು ಶೋ ರೂಂ ಮಾಲೀಕರಾದ ಅಶೋಕ್ ಮತ್ತು ಪ್ರಶಾಂತ್ ಅವರು ಸನ್ಮಾನಿಸಿ ಗೌರವಿಸಿದರು. ನಂತರ ಹೊಸ ಟ್ರ್ಯಾಕ್ಟರ್ ನ ಕೀಯನ್ನು ಹಸ್ತಾಂತರಿಸಿದರು.

ADVERTISEMENT

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರೋಜರ್ ಬಿನ್ನಿ, 'ನಮ್ಮ ಪೂರ್ವಿಕರು ಕೃಷಿಕರಲ್ಲ. ಆದರೆ ನಾನು 25 ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ.‌ ಕೃಷಿ ಬಗ್ಗೆ ನನಗೆ ವಿಶೇಷ ಆಸಕ್ತಿ' ಎಂದು ಹೇಳಿದರು.

ಟೆಸ್ಟ್‌ನಲ್ಲಿ ಕ್ರಿಕೆಟ್‌ನ ಭವಿಷ್ಯ
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಸೋತಿರುವ ಬಗ್ಗೆಯೂ‌ ಮಾತನಾಡಿದ ಅವರು, 'ವಿಭಿನ್ನ ವಾತಾವರಣದಲ್ಲಿ ಕ್ರಿಕೆಟ್ ಆಡುವಾಗ ಪಿಚ್‌ನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಆಗುತ್ತದೆ. ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಫೈನಲ್ ನಲ್ಲಿ ತಂಡದ ಆಯ್ಕೆಯ ವೇಳೆ ಸಣ್ಣ ತಪ್ಪು ‌ನಡೆದಿದೆ. ಅದು ನಡೆಯುತ್ತಿರುತ್ತದೆ. ಮೊದಲ ದಿನದಿಂದಲೇ ನಾವು ಚೆನ್ನಾಗಿ ಆಡಿದ್ದರೆ ಪಂದ್ಯ ಗೆಲ್ಲುವುದಕ್ಕೆ ಅವಕಾಶ ಇತ್ತು. ಮೊದಲ ದಿನವೇ ನಾವು ಚೆನ್ನಾಗಿ ಆಡಲಿಲ್ಲ' ಎಂದು ಹೇಳಿದರು.

ಫೈನಲ್ ಪಂದ್ಯಕ್ಕೂ ಮೊದಲು ಆಟಗಾರರಿಗೆ ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಗದಿರುವ ಬಗ್ಗೆ ಕೇಳಿದ್ದಕ್ಕೆ, 'ಆಟಗಾರರು ಈಗ ಇಡೀ ವರ್ಷ ಕ್ರಿಕೆಟ್ ಆಡುವುದರಿಂದ ಅಭ್ಯಾಸ ಸಾಕಷ್ಟು ಆಗುತ್ತದೆ' ಎಂದು ಉತ್ತರಿಸಿದರು.

ಐಪಿಎಲ್ ನಿಂದ ಅಂತರರಾಷ್ಟ್ರೀಯ ಪಂದ್ಯಗಳ ಮೇಲೆ‌ ಪರಿಣಾಮ ಬೀರುತ್ತಿದೆಯೇ ಎಂಬ ಪ್ರಶ್ನೆಗೆ, 'ಯಾವುದೇ ತೊಂದರೆ‌ ಇಲ್ಲ. ಟಿ- 20 ಗೂ, ಏಕದಿನ ಹಾಗು ಟೆಸ್ಟ್ ಪಂದ್ಯಗಳಿಗೆ ಸಾಕಷ್ಟು ವ್ಯತ್ಯಾಸವಿದೆ.

ನಾವು ಟೆಸ್ಟ್ ಕ್ರಿಕೆಟ್‌ನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಕ್ರಿಕೆಟ್ ನ ಭವಿಷ್ಯ ಟೆಸ್ಟ್ ಕ್ರಿಕೆಟ್. ವೀಕ್ಷಕರ ಮನರಂಜನೆಗಾಗಿ ಐಪಿಎಲ್ ನಡೆಯುತ್ತಿದೆ' ಎಂದರು.

'ಆಟಗಾರರು ಉತ್ತಮ ಕ್ರಿಕೆಟ್ ಪಟುಗಳು ಎನಿಸಿಕೊಳ್ಳಬೇಕಾದರೆ ಟಿ- ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಮೂರೂ ಮಾದರಿಗೂ ಹೊಂದಾಣಿಕೆ ಆಗಬೇಕು' ಎಂದು ರೋಜರ್ ಬಿನ್ನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.