ADVERTISEMENT

ಕೋವಿಡ್‌ ಹಾವಳಿ ನಂತರ ದಾಖಲೆ; ಮಾದಪ್ಪನ ಹುಂಡಿಯಲ್ಲಿ ₹1.92 ಕೋಟಿ ನಗದು

170 ಗ್ರಾಂ ಚಿನ್ನ, 3.850 ಕೆಜಿ ಬೆಳ್ಳಿ ಕಾಣಿಕೆ ಹಾಕಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 5:38 IST
Last Updated 25 ಡಿಸೆಂಬರ್ 2020, 5:38 IST
ಮಲೆ ಮಹದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು
ಮಲೆ ಮಹದೇಶ್ವರಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆಯಿತು   

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ ಕೋವಿಡ್‌ ಹಾವಳಿಯ ನಂತರ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

42 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ₹1.92 ಕೋಟಿ ನಗದು ಸಂಗ್ರಹವಾಗಿದೆ. ನವೆಂಬರ್‌ 12ರಂದು ಹುಂಡಿ ಎಣಿಕೆ ನಡೆದಿತ್ತು.

ಭಕ್ತರು 170 ಗ್ರಾಂ ಚಿನ್ನ ಹಾಗೂ 3.850 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹುಂಡಿಗೆ ಹಾಕಿದ್ದಾರೆ. ಇದು ಕೂಡ ದಾಖಲೆಯೇ. ಇದುವರೆಗೆ ಇಷ್ಟು ಪ್ರಮಾಣದಲ್ಲಿ ಚಿನ್ನ ಹಾಗೂ ಬೆಳ್ಳಿ ಹುಂಡಿಗಳಲ್ಲಿ ಸಿಕ್ಕಿರಲಿಲ್ಲ.

ADVERTISEMENT

₹1,80,39,551 ಮೌಲ್ಯದ ನೋಟುಗಳು ಹಾಗೂ ₹12,28,332 ಮೌಲ್ಯದ ನಾಣ್ಯಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ.

ಕಾರ್ತೀಕ ಮಾಸದ ಜಾತ್ರೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಭಕ್ತರ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಹಾಗಿದ್ದರೂ ಹುಂಡಿ ಗಳಿಕೆಯಲ್ಲಿ ಏರಿಕೆಯಾಗಿದೆ.

‘ಜಾತ್ರೆಗೆ ನಿರ್ಬಂಧ ವಿಧಿಸಿದ್ದರೂ ಬಾಕಿ ದಿನಗಳಲ್ಲಿ ಹೆಚ್ಚಿನ ಭಕ್ತರು ಬಂದಿದ್ದಾರೆ. ಚಿನ್ನ ಬೆಳ್ಳಿ ಈ ಪ್ರಮಾಣದಲ್ಲಿ ಇದುವರೆಗೆ ಹುಂಡಿಯಲ್ಲಿ ಸಿಕ್ಕಿರಲಿಲ್ಲ. ಇದು ಐತಿಹಾಸಿಕ ದಾಖಲೆ’ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನವೆಂಬರ್‌ 12ರಂದು ನಡೆದಿದ್ದ ಎಣಿಕೆ ಸಂದರ್ಭದಲ್ಲಿ ₹2.21 ಕೋಟಿಹುಂಡಿಕಾಣಿಕೆ ಸಂಗ್ರಹವಾಗಿತ್ತು. ಜೊತೆಗೆ 40 ಗ್ರಾಂ ಚಿನ್ನ, 1.65 ಕೆ.ಜಿ. ಬೆಳ್ಳಿಯೂ ಹುಂಡಿಯಲ್ಲಿ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.