ADVERTISEMENT

ಭದ್ರತಾ ಲೇಬಲ್‌ ರಹಿತ ₹15.23 ಲಕ್ಷ ಮೌಲ್ಯದ ಮದ್ಯ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 14:39 IST
Last Updated 6 ಏಪ್ರಿಲ್ 2023, 14:39 IST
ವಶಪಡಿಸಿಕೊಂಡಿರುವ ಮದ್ಯದೊಂದಿಗೆ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ
ವಶಪಡಿಸಿಕೊಂಡಿರುವ ಮದ್ಯದೊಂದಿಗೆ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ   

ಚಾಮರಾಜನಗರ: ಹಾಸನ ಡಿಸ್ಟಿಲರಿಯಿಂದ ಚಾಮರಾಜನಗರ ಕೆಎಸ್‌ಬಿಸಿಎಲ್‌ ಡಿಪೊಗೆ ಸರಬರಾಜಾದ ಮದ್ಯದ ಪೆಟ್ಟಿಗೆಗಳಲ್ಲಿ ಅಬಕಾರಿ ಭದ್ರತಾ ಲೇಬಲ್‌ಗಳು (ಇಎಲ್‌) ಇರದ ಕಾರಣಕ್ಕೆ ₹15.23 ಲಕ್ಷ ಮೌಲ್ಯದ 4320 ಲೀಟರ್‌ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆಯಿಂದ ಪರವಾನಗಿ ಹೊಂದಿರುವ ಹಾಸನದ ವುಡ್‌ ಪೆಕ್ಕರ್‌ ಡಿಸ್ಟಿಲರಿಯಿಂದ ಕೆಎಸ್‌ಬಿಸಿಎಲ್‌ ಡಿಪೊಗೆ ಗುರುವಾರ ಸೂಪರ್‌ ಡಿಲಕ್ಸ್‌ ಪ್ರೀಮಿಯಂ ವಿಸ್ಕಿ 4,320 ಲೀಟರ್‌ಗಳಷ್ಟು ಸರಬರಾಜಾಗಿತ್ತು. ವಿಸ್ಕಿಯನ್ನು ತುಂಬಲಾಗಿದ್ದ 500 ರಟ್ಟಿನ ಪೆಟ್ಟಿಗಳ ಪೈಕಿ 10 ರಟ್ಟಿನ ಪೆಟ್ಟಿಗೆಗಳಲ್ಲಿ ಅಬಕಾರಿ ಭದ್ರತಾ ಲೇಬಲ್‌ಗಳು ಇಲ್ಲದಿರುವುದು ಪರಿಶೀಲನೆ ವೇಳೆ ಕಂಡು ಬಂದಿತ್ತು.

‘ಪ್ರತಿ ಪೆಟ್ಟಿಗೆಗೂ ನಿರ್ದಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಮದ್ಯವು ಎಲ್ಲಿಗೆ ಪೂರೈಕೆಯಾಗಿದೆ ಎಂಬುದನ್ನು ಈ ಸಂಖ್ಯೆಯ ಮೂಲಕ ತಿಳಿಯಬಹುದು. ಹಾಗಾಗಿ, ಪ್ರತಿಯೊಂದು ಪೆಟ್ಟಿಗೆಯಲ್ಲೂ ಲೇಬಲ್‌ ಇರುವುದು ಬಹು ಮುಖ್ಯ. 10 ಪೆಟ್ಟಿಗೆಗಳಲ್ಲಿ ಲೇಬಲ್‌ ಇರಲಿಲ್ಲ. ಹಾಗಾಗಿ ಎಲ್ಲ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿಸ್ಟಿಲರಿ ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಉದ್ದೇಶಪೂರ್ವಕವಾಗಿ ಲೇಬಲ್‌ ಹಾಕಿಲ್ಲವೇ ಅಥವಾ ಕಣ್ತಪ್ಪಿನಿಂದಾಗಿದೆಯೇ ಎಂಬುದನ್ನು ತನಿಖೆ ನಡೆಸಲಾಗುವುದು. ಚುನಾವಣೆ ಮುಗಿಯುವರೆಗೂ ಮದ್ಯ ನಮ್ಮ ವಶದಲ್ಲೇ ಇರಲಿದೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಾರ್ಯಾಚರಣೆಯಲ್ಲಿ ಆರ್.ನಾಗಶಯನ, ಅಬಕಾರಿ ಸೂಪರಿಂಟೆಂಡೆಂಟ್‌ ಎಂ.ಡಿ.ಮೋಹನ್ ಕುಮಾರ್, ಇನ್‌ಸ್ಪೆಕ್ಟರ್‌ ಮೀನಾ, ಕೆಎಸ್‌ಬಿಸಿಎಲ್ ಡಿಪೊ ವ್ಯವಸ್ಥಾಪಕ ಬಸವರಾಜು, ಡಿಪೊದ ಇನ್‌ಸ್ಪೆಕ್ಟರ್‌ ಗುರುನಾಥಶೆಟ್ಟಿ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.