ಚಾಮರಾಜನಗರ: ನಗರದ ಗುಂಡ್ಲುಪೇಟೆ ರಸ್ತೆಯ ಮಲ್ಲಯ್ಯನಪುರದ ಬಳಿ ಇರುವ ಗಾಳಿಪುರ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ) ಕಟ್ಟಡದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಲು ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಗುಂಡ್ಲುಪೇಟೆ ರಸ್ತೆಯಲ್ಲಿರುವ ವಕ್ಫ್ ಮಂಡಳಿಯ ಕಟ್ಟಡದಿಂದ ಆರ್‌ಟಿಒ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಸೋಮವಾರದಿಂದ (ಜೂನ್ 3) ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.
ಹಳೆಯ ಕಟ್ಟಡವನ್ನು ಈಗಾಗಲೇ ಖಾಲಿ ಮಾಡಲಾಗಿದ್ದು, ಕಡತಗಳು, ಕಂಪ್ಯೂಟರ್ ಸೇರಿದಂತೆ ಎಲ್ಲ ಸಾಮಗ್ರಿಗಳನ್ನುಹೊಸ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.
ಮಲ್ಲಯ್ಯನಪುರದಲ್ಲಿ ನಾಲ್ಕೂವರೆ ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ 2013ರ ಅಕ್ಟೋಬರ್ 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ₹8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು 2016ರ ಸೆಪ್ಟೆಂಬರ್ 19ರಂದು ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು.
ಕಟ್ಟಡ ಉದ್ಘಾಟನೆಗೊಂಡಿದ್ದರೂ ಇದುವರೆಗೂ ಕಚೇರಿ ಸ್ಥಳಾಂತರ ಆಗಿರಲಿಲ್ಲ. ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಚಾಲನೆ ಪರೀಕ್ಷೆ ಟ್ರ್ಯಾಕ್, ಇಂಟರ್‌ನೆಟ್, ವಿದ್ಯುತ್ ಸಂಪರ್ಕ ಆಗಿಲ್ಲ ಎಂಬ ಕಾರಣಕ್ಕೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಅಧಿಕಾರಿಗಳು ಮನಸ್ಸು ಮಾಡಿರಲಿಲ್ಲ.ಇಕ್ಕಟ್ಟಾಗಿದ್ದ ಹಳೆ ಕಚೇರಿಯಲ್ಲಿ ಸಿಬ್ಬಂದಿ ಮಾತ್ರವಲ್ಲದೇ ಸಾರ್ವಜನಿಕರೂ ತೊಂದರೆ ಅನುಭವಿಸುತ್ತಿದ್ದರು.
‘ಈಗಲೂ ಬಿಎಸ್‌ಎನ್‌ಎಲ್ ಸಂಪರ್ಕ ಸರಿಯಾಗಿಲ್ಲ. ಒಂದು ವಾರದಿಂದೀಚೆಗೆ ಪ್ರಯತ್ನ ಪಡುತ್ತಿದ್ದೇವೆ. ಮಾಡಿಕೊಡುತ್ತೇವೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೇಳಿದ್ದಾರೆ’ ಎಂದು ಆರ್‌ಟಿಒ ಕಚೇರಿ ಸೂಪರಿಂಟೆಂಡೆಂಟ್ ಕಮರಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಳೆ ಕಟ್ಟದಲ್ಲಿ ಜಾಗದ ಕೊರತೆ ಇತ್ತು. ಹೊಸ ಕಟ್ಟಡ ಸುಸಜ್ಜಿತವಾಗಿದೆ. ಬೇಕಾದಷ್ಟು ಸ್ಥಳಾವಕಾಶ ಇದೆ. ಸಿಬ್ಬಂದಿ ಅಲ್ಲದೆ, ಜನರಿಗೂ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.