ADVERTISEMENT

ಕೊಳ್ಳೇಗಾಲದಲ್ಲಿ ಬಸ್‌ ಕೊರತೆ: ಗ್ರಾಮೀಣ ಜನರ ಪಡಿಪಾಟಲು

ಸಮಪರ್ಪಕವಾಗಿರದ ಸಾರಿಗೆ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆ

ಅವಿನ್ ಪ್ರಕಾಶ್
Published 2 ಅಕ್ಟೋಬರ್ 2022, 19:30 IST
Last Updated 2 ಅಕ್ಟೋಬರ್ 2022, 19:30 IST
ಗ್ರಾಮೀಣ ಭಾಗಗಳಿಗೆ ಹೋಗುವ ಬಸ್‌ಗಳಿಗಾಗಿ ಕೊಳ್ಳೇಗಾಲದಲ್ಲಿ ಕಾಯುತ್ತಿರುವ ಸಾರ್ವಜನಿಕರು ವಿದ್ಯಾರ್ಥಿಗಳು
ಗ್ರಾಮೀಣ ಭಾಗಗಳಿಗೆ ಹೋಗುವ ಬಸ್‌ಗಳಿಗಾಗಿ ಕೊಳ್ಳೇಗಾಲದಲ್ಲಿ ಕಾಯುತ್ತಿರುವ ಸಾರ್ವಜನಿಕರು ವಿದ್ಯಾರ್ಥಿಗಳು   

ಕೊಳ್ಳೇಗಾಲ: ತಾಲ್ಲೂಕು ಕೇಂದ್ರದಿಂದ ಗ್ರಾಮೀಣ ಭಾಗಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ‌ ಇಲ್ಲದೇ ಇರುವುದರಿಂದಪ್ರತಿದಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಎಲ್ಲ ಗ್ರಾಮಗಳಿಗೂ, ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ‌ ಬಸ್‌ಗಳು ಸಂಚರಿಸಿದ ಕಾರಣ, ನಗರ ಹಾಗೂ ಇತರ ಕಡೆಗಳಿಗೆ ಹೋಗಲು ಗ್ರಾಮೀಣ ಭಾಗದ ಮಕ್ಕಳು ಹಾಗೂ ನಾಗರಿಕರು ಬಾಡಿಗೆ, ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ ಎಂಬುದು‌ ಸಾರ್ವಜನಿಕರ ದೂರು.

ಹಳ್ಳಿಗಳಲ್ಲಿ ಅನುಕೂಲಕ್ಕೆ‌ ತಕ್ಕಂತೆ ಬಸ್ ಇಲ್ಲದಿರುವುದರಿಂದ ನಿಗದಿತ ಸಮಯಕ್ಕಿಂತ ಕೊಂಚ ತಡವಾದರೂ ವಿದ್ಯಾರ್ಥಿಗಳು ಮತ್ತೆ ಗಂಟೆ ಕಟ್ಟಲೆ ಕಾಯಬೇಕು. ಇಲ್ಲವೇ ವಾಪಸ್ ಮನೆಗೆ‌ ಬರಬೇಕು.

ADVERTISEMENT

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆ‌ ಕೆಎಸ್‌ಆರ್‌ಟಿಸಿ‌ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರ ನಡುವೆ ಆಗಾಗ ವಾಗ್ವಾದ, ಜಗಳಗಳು ನಡೆಯುತ್ತಾ ಇರುತ್ತವೆ.

ತಾಲ್ಲೂಕಿನ ಚಿಕ್ಕಲ್ಲೂರು, ತೆಳ್ಳನೂರು, ಕೊತ್ತನೂರು, ಬಾಣೂರು, ಜಾಗೇರಿ, ಜಕ್ಕಳಿ, ಅರೇ ಪಾಳ್ಯ, ಹಿತ್ತಲದೊಡ್ಡಿ, ಎರಕಟ್ಟೆ, ಲೊಕ್ಕನಹಳ್ಳಿ, ಸೇರಿದಂತೆ ಅನೇಕ ಕಡೆ ಬಸ್ ಗಳ ಕೊರತೆ ಇದೆ. ಕೆಲವು ಸಂದರ್ಭಗಳಲ್ಲಿ ಬಸ್ ಬರುವುದೇ ಇಲ್ಲ. ಹಾಗಾಗಿ ಜನರು ಆಟೋವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.

ರಸ್ತೆ‌ ಚೆನ್ನಾಗಿದ್ದರೂ ಬಸ್ ಇಲ್ಲ: ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಚೆನ್ನಾಗಿದ್ದರೂ ಬಸ್‌ಗಳು ಬರುವುದಿಲ್ಲ. ಕೆಲವು ಹಳ್ಳಿಗಳಿಗೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್ ಸೌಕರ್ಯ‌ ಇರುತ್ತದೆ. ಉಳಿದ ಸಮಯದಲ್ಲಿ ಸಂಚಾರಕ್ಕೆ ಜನರು ಆಟೊಗಳು, ಟ್ಯಾಕ್ಸಿಗಳು, ಖಾಸಗಿ ವಾಹನಗಳನ್ನು ಬಳಸಬೇಕಿದೆ.

'ರಸ್ತೆ ಚೆನ್ನಾಗಿದ್ದರೂ ಬಸ್‌ಗಳು ಓಡಾಡುವುದಿಲ್ಲ.‌ ಬಂದರೂ ನಿಗದಿತ ಸಮಯಕ್ಕೆ ಬರುವುದಿಲ್ಲ. ಹಾಗಾಗಿ, ಕೆಲವು ಗ್ರಾಮೀಣ ಪ್ರದೇಶದ ಜನರು ಬೆಳಿಗ್ಗೆ ನಗರಕ್ಕೆ ಹೋದರೆ, ಸಾಯಂಕಾಲವೇ ಬರುತ್ತಾರೆ' ಎಂದು ಜಾಗೇರಿ ಗ್ರಾಮದ ಲೂಯಿಸ್ ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಕಷ್ಟ:ಗ್ರಾಮೀಣ ಪ್ರದೇಶಗಳಲ್ಲಿ ಕಾಲೇಜುಗಳ ಕೊರತೆ ಇರುವುದರಿಂದ ಮಕ್ಕಳು ಪಟ್ಟಣ, ನಗರ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. 30-40 ಕಿ.ಮೀ ದೂರದಿಂದ ನಗರಕ್ಕೆ‌ ಬರುವ ವಿದ್ಯಾರ್ಥಿಗಳಿದ್ದಾರೆ. ಪ್ರತಿ ದಿನ ಮೈಸೂರಿಗೆ ಹೋಗುವವರಿದ್ದಾರೆ.

ಬೆಳಗಿನ ಹೊತ್ತು ಹಳ್ಳಿಗಳಲ್ಲಿರುವ ಬಸ್ ತಂಗುದಾಣಗಳಿಗೆ ತೆರಳಿದರೆ ಬಸ್‍ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳ ದಂಡೇ ಕಂಡು‌ ಬರುತ್ತದೆ.

ತರಗತಿಗಳು ತಪ್ಪಿಹೋಗುತ್ತವೆ ಎಂಬ ಕಾರಣಕ್ಕೆ ಪ್ರಾಣ ಪಣಕ್ಕಿಟ್ಟು ಬಸ್‍ಗಳ ಟಾಪ್, ಫುಟ್‍ಬೋರ್ಡ್‌ನಲ್ಲಿ ನೇತಾಡಿಕೊಂಡು ಮಕ್ಕಳು ಪ್ರಯಾಣಿಸುತ್ತಾರೆ. ಬಹುತೇಕ ಗ್ರಾಮಗಳಲ್ಲಿ ಒಂದೆರಡು ತಂಗುದಾಣಗಳಲ್ಲೇ ಬಸ್‌ಗಳು ಭರ್ತಿಯಾಗುತ್ತವೆ. ಹಾಗಾಗಿ ದಾರಿ ಮಧ್ಯೆ ಸಿಗುವ ಮಕ್ಕಳು ಹಾಗೂ ಜನರಿಗೆ‌ ಬಸ್ ಹತ್ತುವುದಕ್ಕೆ ಆಗುವುದಿಲ್ಲ. ವಿದ್ಯಾರ್ಥಿಗಳ ಬಳಿ ಪಾಸ್ ಇರುವ ಕಾರಣಕ್ಕೆ ಬಸ್ ನಿಲ್ಲಿಸದಿರುವ ಚಾಲಕರು, ನಿರ್ವಾಹಕರೂ ಇದ್ದಾರೆ.

'ವಾರದ ಹಿಂದೆ ಪಾಳ್ಯ ಗ್ರಾಮದ ವಿದ್ಯಾರ್ಥಿ ನಾಗೇಶ್ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ವಿದ್ಯಾರ್ಥಿಯ ಪ್ರಾಣಕ್ಕೆ ಅಪಾಯವಾಗಿಲ್ಲ. ಬಸ್ ಇಲ್ಲದೆ ವಿದ್ಯಾರ್ಥಿಗಳು, ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ' ಎಂದು ಗ್ರಾಮರ ರುದ್ರೇಶ್ ಹೇಳಿದರು.

'ಗ್ರಾಮಗಳಿಂದ ತಾಲ್ಲೂಕು ಕೇಂದ್ರಕ್ಕೆ, ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ಕಚೇರಿಗೆ, ಆಸ್ಪತ್ರೆಗೆ, ಸಾರ್ವಜನಿಕ ಕೆಲಸಕ್ಕೆ ತೆರಳುವವರು ಬೆಳಿಗ್ಗೆಯೇ ಬಸ್ ನಿಲ್ದಾಣದಲ್ಲಿ ಇರುತ್ತಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಬರುತ್ತಾರೆ. ಇದರಿಂದ ಸಾರ್ವಜನಿಕರಿಗೂ ತೀವ್ರ ಸಮಸ್ಯೆಯಾಗಿದೆ. ವಯಸ್ಸಾದವರು ಬಸ್‍ಗಳಿಲ್ಲದೆ ಆಟೋ ಮೊರೆ ಹೋಗುತ್ತಿದ್ದಾರೆ' ಎಂದು ಅವರು ಹೇಳಿದರು.

ಜಾತ್ರೆ ಸಂದರ್ಭಗಳಲ್ಲಿ ಬಸ್ ಕೊರತೆ: ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ನಡೆಯುವ ಜಾತ್ರೆಗಳು ಮತ್ತು ಹಬ್ಬ ಹರಿ ದಿನಗಳಲ್ಲಿ ಗ್ರಾಮಗಳಿಗೆ ಬಸ್‍ಗಳು ಬರುವುದೇ ಇಲ್ಲ. ಇದರಿಂದಲೂ ಜನರಿಗೆ ತೊಂದರೆಯಾಗುತ್ತಿದೆ.

ಅಡ್ಡಾದಿಡ್ಡಿ ನಿಲ್ಲುವ ಬಸ್‍ಗಳು

ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹಾಗಾಗಿ, ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‍ಗಳು ತಾತ್ಕಾಲಿಕ ನಿಲ್ದಾಣಕ್ಕೆ ಹೋಗುವುದಿಲ್ಲ. ಚಾಲಕರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೇ ಬಸ್‍ಗಳನ್ನು ನಿಲ್ಲಿಸುತ್ತಾರೆ. ಇದರಿಂದ ನಿತ್ಯವೂ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಪೊಲೀಸರು ಬಂದರೆ ಮಾತ್ರ ಬಸ್ ತೆಗೆಯುತ್ತಾರೆ. ಇಲ್ಲವಾದರೆ ನಡುದಾರಿಯಲ್ಲೇ ನಿಲ್ಲಿಸುತ್ತಾರೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.

ಖಾಸಗಿ ಬಸ್‌ಗಳೂ ಅಷ್ಟೇ, ರಸ್ತೆ ಬದಿಯನ್ನೇ ನಿಲ್ದಾಣವನ್ನಾಗಿ ಮಾಡಿಕೊಂಡಿವೆ.ಬಸ್‌ಗಳು ರಸ್ತೆಯಲ್ಲೇ ನಿಲ್ಲುವುದರಿಂದ ಇತರ ವಾಹನಗಳ ಹಾಗೂ‌‌ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ.

ವಿದ್ಯಾರ್ಥಿಗಳು ಏನಂತಾರೆ?

ನಿತ್ಯವೂ ಹರಸಾಹಸ

ಕಾಲೇಜಿಗೆ ಬರಲು ನಿತ್ಯವೂ ಹರಸಾಹಸ ಪಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು

–ರಕ್ಷಿತಾ, ಕಾಲೇಜು ವಿದ್ಯಾರ್ಥಿನಿ, ಬಾಣೂರು ಗ್ರಾಮ

ಸರಿಯಾಗಿ ಬಾರದ‌ ಬಸ್

ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ. ನಾವು ಓಡಾಟಕ್ಕೆ ನಿತ್ಯವೂ ಆಟೊಗಳನ್ನೇ ಅವಲಂಬಿಸುತ್ತೇವೆ. ಆಟೊದಲ್ಲಿ ಹೆಚ್ಚಾಗಿ ಪ್ರಯಾಣ ಮಾಡಿ ಹಣದ ಕೊರತೆ ಹೆಚ್ಚಾಗಿದೆ.

-ಸಿಂಚನಾ, ಕಾಲೇಜು ವಿದ್ಯಾರ್ಥಿನಿ ತೆಳ್ಳನೂರು

ಪಾಸ್ ನಿರಾಕರಣೆ

ಕೆಲವು ಬಸ್‍ಗಳಲ್ಲಿ ವಿದ್ಯಾರ್ಥಿಗಳ ಪಾಸ್‍ಗಳನ್ನು ತೋರಿಸಿದರೆ ನಿರ್ವಾಹಕರು ನಿರಾಕರಿಸುತ್ತಾರೆ. ನಾವು ಎಷ್ಟೇ ಹೇಳಿದರೂ ಕೇಳುವುದಿಲ್ಲ. ಹಾಗಾಗಿ ಹಣ ಕೊಟ್ಟು ಹೋಗುತ್ತೇವೆ.

-ಮಾದೇಶ, ವಿದ್ಯಾರ್ಥಿ, ಕಾಮಗೆರೆ

ವಿದ್ಯಾಭ್ಯಾಸ ಮೊಟಕುಗೊಳ್ಳಲಿದೆ…

ಗ್ರಾಮಗಳಿಗೆ ಸಾರಿಗೆ ಬಸ್ ಸರಿಯಾಗಿ ಬರುವುದಿಲ್ಲ. ಇದರಿಂದ ನಮ್ಮ ವಿದ್ಯಾಭ್ಯಾಸ ಮೊಟಕುಗೊಳ್ಳುವ ಸಾದ್ಯತೆ ಇದೆ. ಹೀಗೆ ಮುಂದುವರೆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಧರಣಿ ನಡೆಸುವುದು ಅನಿವಾರ್ಯ.

–ಗಗನ್, ಚಿಕ್ಕಲ್ಲೂರು

––

ಹೆಚ್ಚುವರಿ ಬಸ್ ನಿಯೋಜನೆಗೆ ಕ್ರಮ

ಎಲ್ಲ ಗ್ರಾಮಗಳಿಗೂ ಬಸ್ ಸೌಲಭ್ಯ ಇದೆ. ಜಾತ್ರೆ ಸಂದರ್ಭದಲ್ಲಿ ಕೆಲವು ಗ್ರಾಮಗಳಿಗೆ ಬಸ್ ಹೋಗುವುದಿಲ್ಲ. ಸಿಬ್ಬಂದಿ ಕಡಿಮೆ ಇದೆ. ಶಾಲಾ ಸಂದರ್ಭದಲ್ಲಿ ಹೆಚ್ಚುವರಿ ಬಸ್‍ಗಳನ್ನು ನಿಯೋಜನೆ ಮಾಡಲು ಕ್ರಮ ವಹಿಸಲಾಗುವುದು.

–ಮುತ್ತುರಾಜ್, ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.