ADVERTISEMENT

ಆರೋಗ್ಯದ ಗುಟ್ಟು: ದಿನಕ್ಕೆ 10 ಕಿ.ಮೀ ಓಟ!

ಸಮ್ಮೇಳನಾಧ್ಯಕ್ಷ ಚಾಮಶೆಟ್ಟಿ ಜೀವನ-ಸಾಧನೆ: ಸಂವಾದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:02 IST
Last Updated 24 ಜನವರಿ 2020, 16:02 IST
ಸಮ್ಮೇಳನದ ಎರಡನೇ ದಿನ ಸಮ್ಮೇಳನಾಧ್ಯಕ್ಷ ಜೀವನ-ಸಾಧನೆಯ ಬಗ್ಗೆ ಸಂವಾದ ನಡೆಯಿತು
ಸಮ್ಮೇಳನದ ಎರಡನೇ ದಿನ ಸಮ್ಮೇಳನಾಧ್ಯಕ್ಷ ಜೀವನ-ಸಾಧನೆಯ ಬಗ್ಗೆ ಸಂವಾದ ನಡೆಯಿತು   

ಹನೂರು: ‘ಶಿಕ್ಷಕನಾಗಿದ್ದಸಮಯದಲ್ಲಿ ಪ್ರತಿನಿತ್ಯ ಹತ್ತು ಕಿ.ಮೀ ಓಡುತ್ತಿದ್ದೆ. ಇದರ ಫಲದಿಂದಾಗಿ 86ನೇ ವಯಸ್ಸಿನಲ್ಲೂ ದೈಹಿಕ ಸದೃಢನಾಗಿದ್ದೇನೆ’

– 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಚಾಮಶೆಟ್ಟಿ ಸಿ. ಅವರು ತಮ್ಮ ಆರೋಗ್ಯ, ದೀರ್ಘ ಆಯುಷ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದು ಹೀಗೆ.

ಎರಡನೇ ದಿನ ನಡೆದ ‘ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆ: ಸಂವಾದ’ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಚಾಮಶೆಟ್ಟಿ ಅವರಿಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ಹಮನ್ಮುಖಿಗಳಾಗಿ, ಸಾವಧಾನವಾಗಿ ಉತ್ತರಿಸಿದರು.

ADVERTISEMENT

ಗ್ರಾಮದ ಕೇರಿಯಲ್ಲಿ ನಡೆಯುತ್ತಿದ್ದ ಹಬ್ಬ, ಜಾತ್ರೆ, ದೇಶಿ ಕುಣಿತ, ಸುತ್ತಮುತ್ತಲಿನ ಅಚ್ಚುಮೆಚ್ಚಿನ ಸ್ಥಳಗಳು, ಸ್ನೇಹಿತರ ಒಡನಾಟ ಹೀಗೆ ಹತ್ತು ಹಲವು ಕುತೂಹಲಕಾರಿ ವಿಷಯಗಳನ್ನು ಅವರು ಮೆಲುಕು ಹಾಕಿದರು.86 ವರ್ಷದ ಜೀವಿತಾವಧಿಯಲ್ಲಿ ಕಂಡುಂಡ ನೋವು ನಲಿವುಗಳನ್ನು ಸಭಿಕರ ಮುಂದೆ ಬಿಚ್ಚಿಟ್ಟರು.

ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದವರು ಕವಿಗಳಾಗಿದ್ದು ಹೇಗೆ, ಮಕ್ಕಳ ಸಾಹಿತ್ಯದ ಬಗ್ಗೆ ಆಸಕ್ತಿ ಉಂಟಾಗಲು ಕಾರಣ, ಕಲಿಕೆಯೊಂದಿಗೆ ಕ್ರೀಡೆಗೂ ಒತ್ತು ನೀಡಬೇಕೇ, 86 ವರ್ಷಗಳಲ್ಲೂ ಆರೋಗ್ಯವಾಗಿರಲು ಕಾರಣ ಏನು... ಮುಂತಾದ ಪ್ರಶ್ನೆಗಳು ಸಭಿಕರಿಂದ ತೂರಿ ಬಂದವು.

‘ಶಿಕ್ಷಕನಾಗಿದ್ದ ವೇಳೆಯಲ್ಲಿ ಮಕ್ಕಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಕಲಿಕೆ ಜೊತೆಗೆ ಕ್ರೀಡೆ ಇದ್ದರೆ ಪರಿಣಾಮಕಾರಿಯಾಗಿರುತ್ತದೆ ಎಂಬ ಉದ್ದೇಶದಿಂದ ಸಾಹಿತ್ಯ ರಚನೆಗೆ ಮುಂದಾದೆ. ಕೇರಿಯಲ್ಲಿ ನಡೆಯುತ್ತಿದ್ದ ಹಬ್ಬ ಹರಿದಿನಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ಸರಳವಾಗಿ ತಿಳಿಸುವುದು, ಗ್ರಾಮದಲ್ಲಿ ವಾಸವಿದ್ದಾಗ ಗುಂಡಾಲ್ ಜಲಾಶಯ, ಸುತ್ತಮುತ್ತಲಿದ್ದ ಬೆಟ್ಟಗುಡ್ಡಗಳು ಸಾಹಿತ್ಯ ರಚನೆಗೆ ಉತ್ತಮ ವೇದಿಕೆಯಾದವು’ ಎಂದು ಚಾಮಶೆಟ್ಟಿ ಅವರು ವಿವರಿಸಿದರು.

‘ಅಂದಿನ ಗ್ರಾಮೀಣ ಬದುಕೇ ಅಂದವಾಗಿತ್ತು. ಇಂದು ಎಲ್ಲವೂ ಬದಲಾಗಿದೆ.ನಗರ ಪ್ರದೇಶಗಳಲ್ಲಿ ಉಸಿರಾಡುವ ಗಾಳಿಗೂ ತೊಂದರೆ ಅನುಭವಿಸುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಾದದಲ್ಲಿ ಹಿರಿಯ ಸಾಹಿತಿ ನಾಟಕ ಭಾರ್ಗವ ಕೆಂಪರಾಜು, ಯುವ ಸಾಹಿತಿ ಮಲ್ಲೇಶ್ ಮಾಲಿಂಗನಕಟ್ಟೆ, ಅಂಬಿಕಾ, ಡಾ.ಡಿ.ಎಲ್ ಕವಿತ, ಜಿ. ಮಧುಸೂದನ, ಸ್ವಾಮಿ ಪೊನ್ನಾಚಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.