
ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು. ವರ್ಷದ ಮೊದಲ ಹಬ್ಬವನ್ನು ಸಾರ್ವಜನಿಕರು ಎಳ್ಳು ಬೆಲ್ಲ ಸವಿದು ಸಡಗರದಿಂದ ಆಚರಿಸಿದರು.
ಸುಗ್ಗಿಯ ಕಾಲದಲ್ಲಿ ಬರುವ ಹಬ್ಬವಾಗಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಸಂಕ್ರಾಂತಿಯ ಸಂಭ್ರಮ ಜೋರಾಗಿತ್ತು. ಕೃಷಿಕರ ಜೀವನಾಡಿಗಳಾಗಿರುವ ಜಾನುವಾರುಗಳ ಮೈತೊಳೆದು ಮಾರುಕಟ್ಟೆಯಿಂದ ಹೊಸ ಹಗ್ಗ, ಮೂಗುದಾರ, ಟೇಪು, ಕೊಂಬು ಕಳಸ, ಗಂಟೆಗಳು, ಬಲೂನು, ಹೂವಿನ ಗುಚ್ಛಗಳು ಸೇರಿದಂತೆ ಬಗೆಬಗೆಯ ಅಲಂಕಾರಿಕ ವಸ್ತುಗಳಿಂದ ರಾಸುಗಳನ್ನು ಸಿಂಗಾರ ಮಾಡಲಾಯಿತು. ಕೊಂಬಿಗೆ ಅರಿಸಿನ ಬಳಿದು ಅಲಂಕಾರ ಮಾಡಲಾಯಿತು.
ಹಬ್ಬಕ್ಕೂ ಪೂರ್ವಭಾವಿಯಾಗಿ ಎತ್ತುಗಳಿಗೆ ಲಾಳ ಕಟ್ಟಿಸಿ, ಕೊಂಬುಗಳನ್ನು ಉಜ್ಜಿಸಿ ಅಣಿಗೊಳಿಸಲಾಗಿತ್ತು. ಗುರುವಾರ ಸಂಜೆ ಗ್ರಾಮದ ದೇವಸ್ಥಾನಗಳಿಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಮರಳುವಾಗು ಗ್ರಾಮದ ಪ್ರಮುಖ ಬೀದಿಗಳಲ್ಲಿ ಒಣ ಹುಲ್ಲಿನ ರಾಶಿ ಹಾಕಿ ಬೆಂಕಿ ಹಚ್ಚಿ ಜಾನುವಾರುಗಳನ್ನು ಕಿಚ್ಚು ಹಾಯಿಸಿ ರೈತರು ಸಂಭ್ರಮಿಸಿದರು.
ವರ್ಷಪೂರ್ತಿ ರೈತನ ಜೊತೆಯಾಗಿ ದುಡಿಯುವ ಎತ್ತುಗಳಿಗೆ ಮನೆ ಮಂದಿ ಎಲ್ಲರೂ ಪೂಜೆ ಸಲ್ಲಿಸಿ ಬೆಲ್ಲ, ಅಕ್ಕಿ ಸಹಿತ ಸಿಹಿ ಪದಾರ್ಥಗಳನ್ನು ನೀಡಿ ಕೊಟ್ಟಿಗೆ ತುಂಬಿಸಿಕೊಳ್ಳಲಾಯಿತು.
ಮತ್ತೊಂದೆಡೆ ರೈತರು ಹಬ್ಬದ ದಿನ ತೆಂಗು ಹಾಗೂ ಅಡಿಕೆ ಮರಗಳಿಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದರು. ಸಂಕ್ರಾಂತಿ ಹಬ್ಬದ ನಂತರ ಬಿಸಿಲನ ದಗೆ ಹೆಚ್ಚಾಗುವುದರಿಂದ ಗಿಡಗಳು ಸೂರ್ಯನ ತಾಪದಿಂದ ನಲುಗಬಾರದು ಎಂಬ ವೈಜ್ಞಾನಿಕ ಉದ್ದೇಶವೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಸುಣ್ಣ ಬಳಿಯುವ ಆಚರಣೆಯ ಹಿಂದಿದೆ.
ಜಾತ್ರೆ, ರಥೋತ್ಸವ ಸುಗ್ಗಿ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜಾತ್ರೆ, ರಥೋತ್ಸವಗಳು ವಿಜೃಂಭಣೆಯಿಂದ ನಡೆದವು. ತಾಲ್ಲೂಕಿನ ಚಂದಕವಾಡಿ ಹೋಬಳಿಯ ಕುಂಬೇಶ್ವರ ಕಾಲೋನಿ ಸಮೀಪದ ಕರಡಿಹಳ್ಳದ ಶ್ರೀ ಕುಂಬೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ್ತಅದ್ಧೂರಿಯಾಗಿ ಜಾತ್ರೆ ನಡೆಯಿತು.
ಮಹದೇಶ್ವರ ಸ್ವಾಮಿಯ ವಿಗ್ರಹಕ್ಕೆ ಸವರ್ಣಾವತಿ ಹೊಳೆಯ ನೀರಿನಿಂದ ಅಭಿಷೇಕ ಮಾಡಿ ನಂತರ ಹುಲಿವಾಹನ ಮರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಈ ಸಂದರ್ಭ ದೇವರ ಸತ್ತಿಗೆ, ಡೊಳ್ಳು ಕುಳಿತ, ವೀರಭದ್ರ ಕುಣಿತ ಸಹಿತ ಜಾನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು.
ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ಭಕ್ತರು ಬಂದು ಕುಂಬೇಶ್ವರ ಸ್ವಾಮಿಯ ದರ್ಶನ ಪಡೆದರು. ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಕುಂಬೇಶ್ವರ ಯುವಕರ ಸಂಘದ ಸದಸ್ಯರು, ಗ್ರಾಮದ ಮುಖಂಡರಾದ ವಾಟಾಳ್ ಬಾಬು, ನಾಗರಾಜು, ಸಿದ್ದಪ್ಪ, ಪುಟ್ಟಸ್ವಾಮಿ, ಬಸವೇಗೌಡ, ಎಚ್.ಎಸ್‌ಮಂದೇಶ್, ಕೃಷ್ಣ ಇದ್ದರು.
ಕಿಲಗೆರೆ ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ 88ನೇ ಸಿದ್ದಮಲ್ಲೇಶ್ವರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಮಠದ ಮುಂಭಾಗ ಬೆಳ್ಳಿ ಪಲ್ಲಕ್ಕಿಯಲ್ಲಿ ಸೋಮಹಳ್ಳಿ ಮಠದ ಸಿದ್ದಮಲ್ಲಸ್ವಾಮೀಜಿ ಅವರನ್ನು ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಬಸವೇಶ್ವರ ದೇವಸ್ಥಾನದ ಮುಂಭಾಗ ಬಸವ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಕಿಲಗೆರೆ ಮಠದ ಕಾಳಿಂಗ ಸ್ವಾಮೀಜಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹುಲಿಗಿನ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಜರುಗಿದ ರಥೋತ್ಸವ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಎಳ್ಳು–ಬೆಲ್ಲ ಸವಿದರು...
ಸಂಕ್ರಾಂತಿ ಹಬ್ಬದ ಅಂಗವಾಗಿ ಸಾರ್ವಜನಿಕರು ಎಳ್ಳು ಬೆಲ್ಲ ಸವಿದು ಸಂಭ್ರಮಿಸಿದರು. ಎಳ್ಳು ಬೆಲ್ಲ ಕಡಲೆ ಹುರಿದ ಕಡೆಲೆ ಬೀಜ ಬೆಲ್ಲದ ತುಂಡು ಸಕ್ಕರೆ ಅಚ್ಚು ಸಹಿತ ಇತರೆ ಪದಾರ್ಥಗಳನ್ನು ಒಟ್ಟಾಗಿ ಸೇರಿಸಿ ಬಂಧುಗಳು ನೆರೆ ಹೊರೆಯವರು ಹಾಗೂ ಹಿತೈಷಿಗಳೊಂದಿಗೆ ಹಂಚಿಕೊಂಡು ಹಬ್ಬವನ್ನು ಆಚಿಸಿದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಅಲಂಕಾರ ಮಾಡಿಕೊಂಡು ಎಳ್ಳು ಬೆಲ್ಲದ ಪ್ಯಾಕೇಟ್ ಹಾಗೂ ಕಬ್ಬಿನ ತುಂಡುಗಳನ್ನು ಹಂಚಿ ಖುಷಿಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.