ADVERTISEMENT

ರಾಸುಗಳಿಗೆ ಕಿಚ್ಚಿನ ಸುರಕ್ಷೆ

ಗ್ರಾಮೀಣ ಜನರಲ್ಲಿ ಮಾಸದ ಸುಗ್ಗಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 16:05 IST
Last Updated 15 ಜನವರಿ 2022, 16:05 IST
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು   

ಳಂದೂರು:ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ, ಎತ್ತುಗಳಿಗೆ ಸಿಂಗಾರ, ಜರಿಲಂಗ ತೊಟ್ಟ ಮಕ್ಕಳಿಂದ ಎಳ್ಳು–ಬೆಲ್ಲದ ವಿತರಣೆ. ಪರಸ್ಪರ ಶುಭ ಹಾರೈಸಿದ ಗ್ರಾಮೀಣ ಜನರು...

–ಮಕರಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಮೇಳೈಸಿದ ದೃಶ್ಯಗಳು. ತಾಲ್ಲೂಕಿನಲ್ಲಿ ರೈತರು ಮುಂಜಾನೆಯಿಂದಲೇ ಜಾನುವಾರುಗಳನ್ನು ಶುಚಿಗೊಳಿಸಿ, ಕೋಡುಗಳಿಗೆ ಬಣ್ಣದ ಮೆರುಗು ನೀಡಿದರು. ನಂತರ ಇವುಗಳನ್ನು ಸಿಂಗರಿಸಿ, ಅರ್ಚನೆ ನೆರವೇರಿಸಿದರು.

ಹಣ್ಣು, ದವಸ ಧಾನ್ಯ ತಿನ್ನಿಸಿದರು. ಸ್ತ್ರೀಯರು ಮನೆಗಳನ್ನುಬೇವು, ಉತ್ರಾಣಿ ಕಡ್ಡಿಗಳಿಂದ ಅಲಂಕರಿಸಿ ಸಂಕ್ರಾಂತಿ ಸೂರ್ಯೋದಯದ ಮೊದಲ ಕಿರಣವನ್ನುಮನೆ ತುಂಬಿಸಿಕೊಂಡರು. ಹೊಸಬಟ್ಟೆ ತೊಟ್ಟ ಮಕ್ಕಳು ಎಳ್ಳು ಬೆಲ್ಲದ ಮಿಶ್ರಣ ವಿತರಿಸಿಸಂಭ್ರಮಿಸಿದರು.

ADVERTISEMENT

‘ಅನ್ನದಾತರು ಸಂಜೆ ರಾಸುಗಳನ್ನು ಶೃಂಗರಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿದರು.ಜಾನುವಾರು ಸಾಗುವ ಮಾರ್ಗವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಂಗಳವಾದ್ಯಮತ್ತು ತಮಟೆ ಬಾರಿಸಿ ರಾಸುಗಳನ್ನು ಕಿಚ್ಚು ಹಾಯಲು ಪ್ರೇರೇಪಿಸಿದರು. ಸಂಜೆ ವೇಳೆಗೆಸಾಕಣೆದಾರರು ನೂರಾರು ರಾಸುಗಳನ್ನು ಬೆಂಕಿಯಲ್ಲಿ ಹಾಯಿಸಿದರು’ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.

ಎತ್ತುಗಳಿಗೆ ಅಲಂಕಾರ ಸ್ಪರ್ಧೆ: ತಾಲ್ಲೂಕಿನ ವಿವಿಧೆಡೆ ಸಾಂಪ್ರದಾಯಿಕ ಮಕರ ಸಂಕ್ರಾಂತಿ ಉತ್ಸವಗಳು ಸಾಂಗವಾಗಿ ನೆರವೇರಿದವು. ಕೋವಿಡ್ ಹಿನ್ನೆಲೆಯಲ್ಲಿ ಬಿಳಿಗಿರಿರಂಗನ ಚಿಕ್ಕಜಾತ್ರೆಗೆನಿರ್ಬಂಧ ಹೇರಲಾಗಿತ್ತು. ಬಹುತೇಕ ಭಕ್ತರು ಸ್ಥಳೀಯ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯ ನೆರವೇರಿಸಿದರು. ಕಾಡಂಚಿನ ಬಿದ್ದಾಂಜನೇಯ ಮತ್ತು ಪಟ್ಟಣದ ಗೌರೀಶ್ವರದೇವಾಲಯಗಳಲ್ಲಿ ಬೆರಳೆಣಿಕೆಯಷ್ಟು ಭಕ್ತರು ಕಂಡುಬಂದರು. ಕೆಲವರು ಕರ್ಪೂರ, ಧೂಪದ ಆರತಿನೆರವೇರಿಸಿ ಹರಕೆ, ಅಭೀಷ್ಟೆ ಸಲ್ಲಿಸಿದರು.

‘ಪ್ರತಿ ವರ್ಷ ಎತ್ತುಗಳಿಗೆ ಅಲಂಕರಿಸುವ ಸ್ಪರ್ಧೆ ಏರ್ಪಡಿಸುತ್ತೇವೆ. ಬಹುಮಾನ ಪಡೆದರಾಸುಗಳನ್ನು ವಿಶೇಷವಾಗಿ ಮೆರವಣಿಗೆ ಮಾಡಿ ದೇವಾಲಯದ ಮುಂಭಾಗ ಪೂಜೆಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಯುವಕರು ಮತ್ತು ಕೃಷಿಕರು ಸಂಭ್ರಮದಿಂದ ಪಾಲ್ಗೊಂಡುಸಂಕ್ರಾಂತಿ ಸಂತಸವನ್ನು ಹೆಚ್ಚಿಸಲು ನೆರವಾದರು’ ಎಂದು ಕಂದಹಳ್ಳಿ ಮಂಜು ಮತ್ತು ನವೀನ್ ಹೇಳಿದರು.

ಒಂದು ತಿಂಗಳಿಗೂ ಹೆಚ್ಚು ಕಾಲ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಸಂಜೆವೇಳೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿದೇವರಲ್ಲಿ ಮೊರೆ ಇಟ್ಟರು. ದೀಪ ಮತ್ತು ಧೂಪದ ಘಮಲು ದೇವಳ ಪರಿಸರವನ್ನು ಆವರಿಸಿತ್ತು.

ಪಟ್ಟಣದಲ್ಲಿ ಕಳೆಗುಂದಿದ ಸಂಕ್ರಾಂತಿ

ಯಳಂದೂರು ಪಟ್ಟಣದಲ್ಲಿ ಸಂಕ್ರಾಂತಿ ಹಬ್ಬ ಕಳೆಗುಂದಿತ್ತು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ವ್ಯಾಪಾರಿಗಳಿಗೆ ನಿರಾಸೆ ಉಂಟಾಯಿತು. ಕಾರ್ಮಿಕ ವರ್ಗ ಮತ್ತು ಕಚೇರಿಗಳಿಗೆ ರಜೆ ಇದ್ದ ಕಾರಣ, ಹೋಟೆಲ್ ಉದ್ಯಮಕ್ಕೂ ಕುತ್ತು ಎದುರಾಯಿತು. ಪಾರ್ಸೆಲ್‌ಗೆ ಅವಕಾಶ ಇದ್ದರೂ ಗ್ರಾಹಕರಿಲ್ಲದೆ ಭಣಗುಟ್ಟಿದವು.

‘ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟಕ್ಕೆ ಇಟ್ಟಿದ್ದೆ. ಗ್ರಾಹಕರಿಲ್ಲದೆ ವಹಿವಾಟು ನಡೆಯಲಿಲ್ಲ. ಇದರಿಂದ ನಷ್ಟ ಉಂಟಾಗಿದೆ’ ಎಂದು ಪಟ್ಟಣದ ವ್ಯಾಪಾರಿ ನಂಜುಂಡಸ್ವಾಮಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.