ADVERTISEMENT

ಸಂತೇಮರಹಳ್ಳಿ | ಕುಡಿಯುವ ನೀರಿಲ್ಲ; ವಸತಿ ಗೃಹಗಳ ನಿರ್ವಹಣೆಯೂ ಇಲ್ಲ

ಕಾವೇರಿ ನೀರಾವರಿ ನಿಗಮದ ವಸತಿಗೃಹದ ನಿವಾಸಿಗಳು ಅಳಲು

ಮಹದೇವ್ ಹೆಗ್ಗವಾಡಿಪುರ
Published 2 ಫೆಬ್ರುವರಿ 2025, 4:54 IST
Last Updated 2 ಫೆಬ್ರುವರಿ 2025, 4:54 IST
ಸಂತೇಮರಹಳ್ಳಿ ಸಮೀಪದಲ್ಲಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳಲ್ಲಿ ವಾಸವಿರುವ ನೌಕರರು ಬಿಂದಿಗೆಗಳಲ್ಲಿ ನೀರು ಹೊತ್ತು ತರುತ್ತಿರುವುದು
ಸಂತೇಮರಹಳ್ಳಿ ಸಮೀಪದಲ್ಲಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳಲ್ಲಿ ವಾಸವಿರುವ ನೌಕರರು ಬಿಂದಿಗೆಗಳಲ್ಲಿ ನೀರು ಹೊತ್ತು ತರುತ್ತಿರುವುದು   

ಸಂತೇಮರಹಳ್ಳಿ: ರೈತರ ಕೃಷಿ ಭೂಮಿಗೆ ನೀರುಣಿಸುವ ಇಲಾಖೆಯಾಗಿರುವ ಕಾವೇರಿ ನೀರಾವರಿ ನಿಗಮದ ನೌಕರರೇ ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತೇಮರಹಳ್ಳಿ ಸಮೀಪದಲ್ಲಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗದೆ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಕೆಟ್ಟು ತಿಂಗಳು ಕಳೆದಿದೆ. ಆದರೆ, ಇದುವರೆಗೂ ನಿಗಮದ ಅಧಿಕಾರಿಗಳು ಕೆಟ್ಟಿರುವ ಕೊಳವೆ ಬಾವಿಯನ್ನು ದುರಸ್ತಿಗೊಳಿಸುವ ಕೆಲಸಕ್ಕೆ ಕೈಹಾಕಿಲ್ಲ. ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ ಎಂಬುದು ನಿವಾಸಿಗಳ ಆರೋಪ.

ಬೆಳಗಾಗುತ್ತಿದ್ದಂತೆ ದಿನಬಳಕೆಗೆ ಹಾಗೂ ಕುಡಿಯಲು ನೀರು ಸಂಗ್ರಹಿಸಲು ನಿವಾಸಿಗಳು ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎದ್ದ ಕೂಡಲೇ ನೀರು ಸಿಗುವ ಜಾಗಗಳನ್ನು ಹುಡುಕುವುದು ಕಾಯಕವಾಗಿಬಿಟ್ಟಿದೆ. ನೀರು ಬರುವ ಸಮಯ ನೋಡಿಕೊಂಡು ಸಮೀಪದ ಬಡಾವಣೆಗಳಿಂದ ನೀರು ಹೊತ್ತು ತರಬೇಕಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ADVERTISEMENT

ಪಂಪ್‍ಸೆಟ್ ಹೊಂದಿರುವ ಹೊಲ ಗದ್ದೆಗಳಿಗೆ ತೆರಳಿ ವಿದ್ಯುತ್ ಇರುವ ಸಮಯವನ್ನು ನೋಡಿಕೊಂಡು ನೀರು ತರುತ್ತಿದ್ದೇವೆ. ಕೆಲವು ಕುಟುಂಬಗಳು ಆಟೋರಿಕ್ಷಾಗಳ ಮೂಲಕ ಖಾಸಗಿಯಾಗಿ ₹ 500 ರಿಂದ ₹ 600 ನೀಡಿ ಮನೆಗಳಿಗೆ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳಿರುವ ಕಡೆಗಳಿಗೂ ಹೋಗಿ ಕುಡಿಯುವ ನೀರು ತರುತ್ತಿದ್ದಾರೆ.

ವಸತಿ ಗೃಹಗಳಲ್ಲಿ ವಾಸಿಸುವ ನೌಕರರೆಲ್ಲ ಸರಿಯಾಗಿ ಬಾಡಿಗೆ ಪಾವತಿಸುತ್ತೇವೆ. ನೀರಿನ ಸಮಸ್ಯೆ ಬಗೆ ಹರಿಸಿ ಎಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ. ಮನೆಗಳಲ್ಲಿ ಇರಲು ಸಾಧ್ಯವಾಗದಿದ್ದರೆ ಖಾಲಿ ಮಾಡಿಕೊಂಡು ಹೋಗಿ ಎಂಬ ಉಡಾಪೆ ಮಾತುಗಳನ್ನಾಡುತ್ತಿದ್ದಾರೆ ಎಂದು ನಿವಾಸಿಗಳು ದೂರುತ್ತಾರೆ.

ವಸತಿ ಗೃಹಗಳಿಗೆ ಗ್ರಾಮಪಂಚಾಯಿಂದಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಎಲ್ಲ ಕಡೆಗಳಲ್ಲೂ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳಿಗೆ ಮಾತ್ರ ಯೋಜನೆಯಡಿ ಪೈಪ್‍ಗಳನ್ನು ಅಳವಡಿಸಿಲ್ಲ ಎಂದು ದೂರಿದರು.

ವಸತಿ ಗೃಹಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳ ಕೊರತೆಯೂ ಕಾಡುತ್ತಿದೆ. ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ನಿವಾಸಿಗಳು ಸ್ವಂತ ಖರ್ಚಿನಲ್ಲಿ ಮನೆಗಳನ್ನು ದುರಸ್ತಿ ಮಾಡಿಕೊಂಡು ವಾಸಿಸುತ್ತಿದ್ದಾರೆ. ವಸತಿ ಗೃಹಗಳ ಸುತ್ತಲೂ ಕಳೆಗಿಡಗಳು ಬೆಳೆದುಕೊಂಡು ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ದೂರುತ್ತಾರೆ ನಿವಾಸಿಗಳು.

ವಸತಿ ಗೃಹಕ್ಕೆ ನೀರು ಪೂರೈಸುವ ಕೊಳವೆ ಬಾವಿಯನ್ನು ಈಚೆಗಷ್ಟೆ ದುರಸ್ತಿಗೊಳಿಸಗಿತ್ತು. ಕೆಲವು ಮನೆಗಳಿಗಷ್ಟೆ ಕುಡಿಯುವ ನೀರಿನ ಸಮಸ್ಯೆ ಇದೆ. ನಿವಾಸಿಗಳು ಯಾರೂ ಬಂದು ಸಂಪರ್ಕಿಸಿಲ್ಲ
ವಿಶ್ವ ನಾರಾಯಣ ಸಹಾಯಕ ಎಂಜಿನಿಯರ್

‘ಭೀತಿಯಲ್ಲಿ ಜೀವನ’

ಹಾವು ಚೇಳುಗಳ ಅವಾಸ ಸ್ಥಾನವಾಗಿ ಬದಲಾಗಿದೆ. ರಾತ್ರಿ ಸಮಯ ಬೀದಿ ದೀಪದ ವ್ಯವಸ್ಥೆಯೂ ಸಮರ್ಪಕವಾಗಿರದೆ ನಿವಾಸಿಗಳು ತಿರುಗಾಡಲು ತೊಂದರೆಯಾಗಿದೆ. ರಸ್ತೆಗಳೂ ಉತ್ತಮವಾಗಿಲ್ಲದೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ವಸತಿ ಗೃಹಗಳಿಂದ ತ್ಯಾಜ್ಯ ಹಾಗೂ ಕೊಳಚೆ ನೀರು ಹರಿದು ಹೋಗಲು ಸರಿಹಾದ ಚರಂಡಿ ವ್ಯವಸ್ಥೆ ಇಲ್ಲ. ಈಗಿರುವ ಚರಂಡಿ ಅವ್ಯವಸ್ಥೆಯಾಗಿದೆ. ಕಳೆ ಗಿಡಗಳು ಬೆಳೆದು ಸರಾಗವಾಗಿ ಹರಿಯುತ್ತಿಲ್ಲ. ಪ್ರತಿನಿತ್ಯ ಮನೆಗಳಿಂದ ಉತ್ಪತ್ತಿಯಾಗುವ ಕೊಳಚೆ ಮನೆಗಳ ಹಿಂಭಾಗ ನಿಂತು ಅನೈರ್ಮಲ್ಯ ಉಂಟಾಗಿದೆ. ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಇಲ್ಲದಿದ್ದರೆ ಪ್ರತಿಭಟನೆಗೆ ಕೂರುತ್ತೇವೆ ಎಂದು ನಿವಾಸಿಗಳಾದ ಕೃಷ್ಣ ನಾಯಕ್ ರೇಚಣ್ಣ ಹಾಗೂ ವೇಲುಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.